ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹುಮ್ಮಸ್ಸು ನೀಡಿದೆ. ಉತ್ತಮ ಮಳೆಯಿಂದಾಗಿ ಕೃಷಿ ಭೂಮಿ ಹದವಾಗಿದ್ದು, ಬೀಜ ಬಿತ್ತನೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ 3 ಲಕ್ಷ 14 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಈ ಪೈಕಿ 2.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ. ಉಳಿದ ಪ್ರದೇಶಗಳಲ್ಲಿ ಬಿತ್ತನೆ ಕೆಲಸ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.
ಮಳೆ ಆಶ್ರಿತದಲ್ಲಿ 2 ಲಕ್ಷ 50 ಸಾವಿರ ಹೆಕ್ಟೇರ್ ಹಾಗೂ ನೀರಾವರಿಯಲ್ಲಿ 63 ಸಾವಿರದ 769 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಗುರಿಯಿದೆ. ಈಗಾಗಲೇ, ಮಳೆ ಆಶ್ರಿತದಲ್ಲಿ 2.04 ಲಕ್ಷ ಹೆಕ್ಟೇರ್ ಹಾಗೂ ನೀರಾವರಿಯಲ್ಲಿ 29 ಸಾವಿರ ಹೆಕ್ಟೇರ್ ಬಿತ್ತನೆ ಮುಕ್ತಾಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳ ಬಿತ್ತನೆ ನಡೆಯುತ್ತದೆ. ಜಿಲ್ಲೆಯಲ್ಲಿ ರೈತರ ಸಂಖ್ಯೆ ಹೆಚ್ಚಿರುವುದರಿಂದ, ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಿತ್ತನೆ ಪ್ರದೇಶಕ್ಕೆ ತಕ್ಕಂತೆ ಬೀಜ ಹಾಗೂ ಗೊಬ್ಬರ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಕೃಷಿ ಇಲಾಖೆಯ ಬಳಿ 26 ಸಾವಿರ 944 ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹವಿದೆ ಎಂದು ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.