2022ರಲ್ಲಿ ಭಾರತದಲ್ಲಿನ ಯುವಕರ ನಿರುದ್ಯೋಗ ದರವು 23.22% ರಷ್ಟಿದೆ. ಪಾಕಿಸ್ತಾನದಲ್ಲಿನ ನಿರುದ್ಯೋಗ ದರವು 11.3%ರಷ್ಟಿದೆ.. ಬಾಂಗ್ಲಾದೇಶದಲ್ಲಿ 12.9% ಮತ್ತು ಭೂತಾನ್‌ನಲ್ಲಿ ನಿರುದ್ಯೋಗ ದರವು 14.4% ಇದೆ ಎಂದು ವಿಶ್ವ ಬ್ಯಾಂಕ್ ಅಂಕಿ-ಅಂಶಗಳು ತಿಳಿಸಿದೆ. ವರದಿಯ ಪ್ರಕಾರ 2022ರ ವರ್ಷದಲ್ಲಿ ಚೀನಾದಲ್ಲಿ ನಿರುದ್ಯೋಗ ದರವು 13.2%, ಸಿರಿಯಾದಲ್ಲಿ 22.1%, ಇಂಡೋನೇಷ್ಯಾದಲ್ಲಿ 13%, ಮಲೇಷ್ಯಾದಲ್ಲಿ 11.7%, ವಿಯೆಟ್ನಾಂನಲ್ಲಿ 7.4%, ದಕ್ಷಿಣ ಕೊರಿಯಾದಲ್ಲಿ 6.9% ಮತ್ತು ಸಿಂಗಾಪುರದಲ್ಲಿ 6.1% ರಷ್ಟಿದೆ. ಈ ಎಲ್ಲಾ ದೇಶಗಳ ನಿರುದ್ಯೋಗದ ದರಕ್ಕಿಂತ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿದೆ.
ಈ ಮಾಹಿತಿಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ಪಡೆಯಲಾಗಿದೆ. ಅಂಕಿ ಅಂಶವನ್ನು 15ರಿಂದ 24 ವರ್ಷ ವಯಸ್ಸಿನವರು ಮತ್ತು ಉದ್ಯೋಗ ಇಲ್ಲದೆ ಉದ್ಯೋಗವನ್ನು ಹುಡುಕುತ್ತಿರುವವರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಿದ್ದಪಡಿಸಲಾಗಿದೆ. 15-34 ವರ್ಷ ವಯಸ್ಸಿನ ಸುಮಾರು 36% ಜನರು ಭಾರತದಲ್ಲಿ ನಿರುದ್ಯೋಗವು ಅತಿದೊಡ್ಡ ಸಮಸ್ಯೆ ಎಂದು ಹೇಳುತ್ತಿದ್ದಾರೆ ಎಂದು ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆಯು (Lokniti-CSDS survey) ಕಂಡುಹಿಡಿದಿದೆ. ಯುವಕರ ವೃತ್ತಿ ಆಕಾಂಕ್ಷೆಗಳು, ಉದ್ಯೋಗದ ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ವಿಶ್ಲೇಷಿಸಿ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ.
ಭಾರತದ ನಿರುದ್ಯೋಗ ಪ್ರಮಾಣ 2023ರ ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಹೆಚ್ಚಾಗಿತ್ತು. ಕಳೆದ ಜನವರಿಯಲ್ಲಿ ಶೇ.7.14 ರಷ್ಟಿದ್ದ ನಿರುದ್ಯೋಗ ಪ್ರಮಾಣ ಫೆಬ್ರವರಿಯಲ್ಲಿ ಶೇ.7.45ಕ್ಕೆ ಏರಿಕೆಯಾಗಿತ್ತು. ಫೆಬ್ರವರಿಯಲ್ಲಿ ನಿರುದ್ಯೋಗದ ಕುರಿತು ಬಿಡುಗಡೆಯಾದ ವರದಿಯಲ್ಲಿ ನಗರ ಭಾಗದ ಜನರಲ್ಲಿ ನಿರುದ್ಯೋಗ ಪ್ರಮಾಣ ಶೇ.7.93ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ. 7.23ರಷ್ಟಿತ್ತು.