ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈ ಕಾರ್ಯಕ್ರಮದ ಬಳಿಕ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಧ್ವಜವಂದನೆ ಮಾಡಿದರು, ಇದೀಗ ಈ ಫೋಟೋ ವೈರಲ್ ಆಗಿದೆ.
ಗಾಂಧಿ ವಿಚಾರ ವೇದಿಕೆ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖರು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ಅತಿಥಿಗಳು ತೆರಳಿದ್ದರು. ಕಾರ್ಯಕ್ರಮ ಸಂಘಟಿಸಿದ ಕೆಲ ಮಂದಿ ಸ್ಥಳದಲ್ಲಿ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭ ಕೆಲಸದ ಕತ್ತಿ ಸಹಿತವಾಗಿಯೇ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಪರಮೇಶ್ವರಿ ಅವರು ನೇರವಾಗಿ ಆಗಮಿಸಿ ಚಪ್ಪಲಿ ತೆಗೆದು ಧ್ವಜವಂದನೆ ಮಾಡಿ ತೆರಳಿದರು. ಈ ಫೋಟೊವನ್ನು ದೂರದಿಂದ ಗಾಂಧಿ ವಿಚಾರ ವೇದಿಕೆಯ ತಾಲೂಕು ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಅವರು ಕ್ಲಿಕ್ಕಿಸಿದ್ದರು, ಬಳಿಕ ತಮ್ಮ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀಶ ಗಬ್ಲಡ್ಕ, ” ಇದು ಗ್ರಾಮೀಣ ಭಾರತ” ಎಂದು ವ್ಯಾಖ್ಯಾನಿಸಿದರು. ಧ್ವಜಾರೋಹಣದ ನಂತರ ಗ್ರಾಮ ಪಂಚಾಯತ್ ಸದಸ್ಯರುಗಳು ಕೂಡಾ ಆಗಮಿಸಿ ಧ್ವಜ ವಂದನೆ ಸಲ್ಲಿಸಿ ತೆರಳಿದ್ದರು.
ಮೊಗ್ರ ಪ್ರದೇಶವು ಕಳೆದ ಕೆಲವು ಸಮಯಗಳಿಂದ ಸುದ್ದಿಯಾಗಿದೆ. ಈ ಹಿಂದೆ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿನಿಯೊಬ್ಬಳು ತಂದೆ ಕೊಡೆ ಹಿಡಿದು ಓದುತ್ತಿದ್ದ ಫೋಟೊ ದೇಶದಾದ್ಯಂತ ವೈರಲ್ ಆಗಿತ್ತು, ಅದಾದ ಬಳಿಕ ಗ್ರಾಮಸ್ಥರೇ ನಿರ್ಮಿಸಿದ “ಗ್ರಾಮಸೇತು” ಕೂಡಾ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಆಗಮಿಸಿ ಧ್ವಜ ವಂದನೆ ಮಾಡಿರುವುದು ಕೂಡಾ ರಾಜ್ಯಾದ್ಯಂತ ಸದ್ದು ಮಾಡಿದೆ.