ಭಾರತ ಸ್ವಾತಂತ್ರ್ಯ ಬಂದಾಗಿಂದಲೂ ಮುಂದುವರೆಯುತ್ತಿರುವ ದೇಶವಾಗಿ ಗುರುತಿಸಿಕೊಂಡಿದೆ. ಕಳೆದ ಕೆಲ ವರ್ಷಗಳಿಂದ ಭಾರತ ಸದಾ ವಿಶ್ವಮಟ್ಟದಲ್ಲಿ ತನ್ನ ಸಾಧನೆಯ ಪತಾಕೆಗಳನ್ನು ಹಾರಿಸುತ್ತಲೇ ಇದೆ. ಹಾಗೇ ಅಭಿವೃದ್ಧಿಯಲ್ಲಿ ಇತರ ದೇಶಗಳಿಗಿಂತ ಮುಂಚೂಣಿಯಲ್ಲಿ ಸಾಗುತ್ತಿದೆ. ಇದೀಗ ರಸ್ತೆ ಸಂಪರ್ಕ ಜಾಲ ವಿಭಾಗದಲ್ಲಿ ಭಾರತ ದೇಶ ಮಹತ್ತರ ಸಾಧನೆ ಮಾಡಿದ್ದು ನೆರೆಯ ಚೀನಾ ದೇಶವನ್ನು ಹಿಂದಿಕ್ಕಿ ಅತಿ ದೊಡ್ಡ ರಸ್ತೆ ಜಾಲ ಹೊಂದಿರುವ ಜಗತ್ತಿನ 2ನೇ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೆರಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ರೋಡ್ ನೆಟ್ವರ್ಕ್ ಹೊಂದಿರುವ ರಾಷ್ಟ್ರ ಎಂಬ ಕೀರ್ತಿಗೆ ಭಾರತವಾಗಿದೆ. 2014 ರಿಂದೀಚೆಗೆ 1.45 ಲಕ್ಷ ಕಿಮೀ ರಸ್ತೆ ನಿರ್ಮಾಣದ ಮೂಲಕ ಭಾರತ, ಚೀನಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಳನ್ನು ಬಿಚ್ಚಿಟ್ಟಿದ್ದು, ಭಾರತ ಅತಿ ದೊಡ್ಡ ರಸ್ತೆ ಸಂಪರ್ಕ ಜಾಲ ಹೊಂದಿರುವ ಜಗತ್ತಿನ ಎರಡನೇ ರಾಷ್ಟ್ರ ಎಂದರು. ‘ಭಾರತವು ಹಲವಾರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ಸೇರಿಸಿದೆ.
ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಅನೇಕ ಎಕ್ಸ್‌ಪ್ರೆಸ್‌ವೇಗಳು ನಿರ್ಮಾಣವಾಗಿವೆ. ಭಾರತದಲ್ಲೇ ಅತಿ ಉದ್ದದ ಹೆದ್ದಾರಿ ಎನಿಸಿಕೊಂಡಿರೋ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಕೂಡ ಬಹುತೇಕ ಮುಗಿದಿದೆ. 9 ವರ್ಷಗಳ ಹಿಂದೆ ಭಾರತದ ರಸ್ತೆ ಸಂಪರ್ಕ ಜಾಲ 91,287 ಕಿಮೀಗಳಿಷ್ಟಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನೇಕ ಹೈವೇಗಳು ಹಾಗೂ ಎಕ್ಸ್‌ಪ್ರೆಸ್‌ವೇ ಗಳನ್ನು ನಿರ್ಮಾಣ ಮಾಡಿದೆ. 2019ರ ಎಪ್ರಿಲ್‌ನಿಂದೀಚೆಗೆ ದೇಶಾದ್ಯಂತ 30,000 ಕಿಮೀಗಳಿಗೂ ಅಧಿಕ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ. ದೆಹಲಿ ಮತ್ತು ಮೀರತ್ ನಡುವಣ ಸಂಪರ್ಕ ಹೈವೇ, ಉತ್ತರ ಪ್ರದೇಶದ ಲಖ್ನೋ ಮತ್ತು ಗಾಝಿಪುರ ಹೈವೇ ಕೂಡ ಇವುಗಳಲ್ಲೊಂದು.
ಗಡ್ಕರಿ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 7 ವಿಶ್ವ ದಾಖಲೆಗಳನ್ನು ಮಾಡಿದೆ. ಈ ವರ್ಷ ಮೇನಲ್ಲಿ 100 ಕಿಮೀ ಎಕ್ಸ್‌ಪ್ರೆಸ್‌ವೇಯನ್ನು ಕೇವಲ 100 ಗಂಟೆಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಘಾಝಿಯಾಬಾದ್-ಅಲಿಗಢ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ವೇಳೆ ಈ ದಾಖಲೆ ಮಾಡಿರೋದು ವಿಶೇಷ. ಎನ್‌ಎಚ್ 53ರಲ್ಲಿ 75 ಕಿಮೀ ಕಾಂಕ್ರೀಟ್ ರಸ್ತೆಯನ್ನ ಕೇವಲ 105 ಗಂಟೆ 33 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಗಿನ್ನಿಸ್ ದಾಖಲೆಗೂ ಪ್ರಾಧಿಕಾರ ಪಾತ್ರವಾಗಿದೆ. ಏಪ್ರಿಲ್ 2019 ರಿಂದ, NHAI ದೇಶಾದ್ಯಂತ 30,000 ಕಿ.ಮೀ ಗಿಂತ ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಿದೆ. ಹಾಗೂ ಗಡ್ಕರಿ ಅವಧಿಯಲ್ಲಿ ಹೆದ್ದಾರಿಗಳಿಂದ ಬರುವ ಆದಾಯ ಕೂಡ ಹೆಚ್ಚಳವಾಗಿದೆ. 9 ವರ್ಷಗಳ ಹಿಂದೆ ಕೇವಲ 4777 ಕೋಟಿ ರೂಪಾಯಿ ಇದ್ದ ಟೋಲ್ ಸಂಗ್ರಹ ಈಗ 41,342 ಕೋಟಿಗಳಿಗೆ ಏರಿಕೆಯಾಗಿದೆ. ಟೋಲ್ ಆದಾಯವನ್ನು 1.30 ಲಕ್ಷ ಕೋಟಿಗೆ ಏರಿಸುವುದು ಸರ್ಕಾರದ ಗುರಿ ಎಂದು ಗಡ್ಕರಿ ತಿಳಿಸಿದ್ದಾರೆ.
Source: online network