ಭಾರತ ದೇಶವು ಹೇರಳ ಸಂಪತ್ತುಗಳ ದೇಶ. ಈ ಹಿಂದೆ ಅನೇಕ ರಾಜಗಳು ದಂಡೆತ್ತಿ ಬಂದದ್ದೂ ಅದೇ ಕಾರಣದಿಂದ. ಇದೀಗ ಭಾರತವು ತನ್ನ ನೆಲದಲ್ಲೇ ಲಭ್ಯ ಇರುವ ಹೇರಳ ಖನಿಜ ಸಂಪನ್ಮೂಲವನ್ನು ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್ಇಪಿ) ವರದಿಯಲ್ಲಿ ಹೇಳಲಾಗಿದೆ.
ದೇಶದಲ್ಲಿ ಇಲ್ಲಿಯವರೆಗೆ ಶೇ.30ರಷ್ಟು ಮಾತ್ರ ಖನಿಜ ಸಂಪನ್ಮೂಲಗಳನ್ನು ಪತ್ತೆ ಹಚ್ಚಲಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಗಣಿಗಾರಿಕೆ ನಡೆಸಿಲ್ಲ. ತನ್ನ ನೆಲದಲ್ಲೇ ಲಭ್ಯ ವಿರುವ ಹೇರಳ ಖನಿಜ ಸಂಪನ್ಮೂಲವನ್ನು ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ವರದಿ ತಿಳಿಸಿದೆ. ಖನಿಜ ಸಂಪನ್ಮೂಲಗಳನ್ನು ಹೆಚ್ಚುವರಿ ಮೈನಿಂಗ್ ಮೂಲಕ ಪಡೆದರೆ ಪ್ರತಿ ವರ್ಷ 100 ಬಿಲಿಯನ್ ಡಾಲರ್ ಅಂದರೆ 9 ಲಕ್ಷ ಕೋಟಿ ರೂ ಆಮದು ವೆಚ್ಚವನ್ನು ತಪ್ಪಿಸಬಹುದು ಎಂದು ಹೇಳಿದೆ.
ಆದರೆ, ಸಾಕಷ್ಟು ವೆಚ್ಚ ಮಾಡಿ ಸಂಪನ್ಮೂಲವನ್ನು ಪತ್ತೆ ಮಾಡಿದರೂ, ಆ ನಿಕ್ಷೇಪಗಳ ಮೇಲೆ ಕಂಪನಿಗೆ ಹಕ್ಕು ಇರುವುದಿಲ್ಲ. ಸರ್ಕಾರವು ಹರಾಜುಗಳ ಮೂಲಕ ಮೈನಿಂಗ್ ಲೀಸ್ಗಳನ್ನು ಹಂಚಿಕೆ ಮಾಡುತ್ತದೆ. ಇದರಿಂದಾಗಿ, ಸಂಪನ್ಮೂಲ ಅನ್ವೇಷಣೆಗೆ ಕಂಪನಿಗಳು ಹಿಂದೇಟು ಹಾಕುತ್ತವೆ ಎಂಬುದನ್ನು ಈ ವರದಿ ಹೇಳಿದೆ.
ಭಾರತಕ್ಕೆ ಸಾಕಷ್ಟು ಖನಿಜ ಮತ್ತು ಲೋಹಗಳ ಅವಶ್ಯಕತೆ ಇದೆ. 2022ರಲ್ಲಿ ಭಾರತವು ಈ ಖನಿಜ ಮತ್ತು ಲೋಹಗಳನ್ನು 157 ಬಿಲಿಯನ್ ಡಾಲರ್ ಮೌಲ್ಯದಷ್ಟು ಆಮದು ಮಾಡಿಕೊಂಡಿತ್ತು. ಆ ವರ್ಷ ಭಾರತದ ಒಟ್ಟು ಆಮದಿನಲ್ಲಿ ಇವುಗಳ ಪಾಲು ಶೇ. 20ಕ್ಕಿಂತಲೂ ಹೆಚ್ಚಿತ್ತು. ಅದರಲ್ಲೂ ಕ್ರಿಟಿಕಲ್ ಮಿನರಲ್ ಎನ್ನಲಾದ ಕಾಪರ್, ನಿಕಲ್, ಲಿಥಿಯಂ, ಕೊಬಾಲ್ಟ್ ಅನ್ನು ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.


