ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು

December 26, 2024
11:10 AM
ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು ಕಟ್ಟಿಹಾಕದಿದ್ದರೆ ಪೂರ್ವದಲ್ಲೊಂದು ಪಾಕಿಸ್ಥಾನ ಬೆಳೆಯುವುದನ್ನು ತಪ್ಪಿಸಲಾಗದು.

ಬಾಂಗ್ಲಾದೇಶದ ಪಶ್ಚಿಮಕ್ಕಿರುವ ಭಾರತದ ರಾಜ್ಯವಾಗಿರುವ ಪಶ್ಚಿಮ ಬಂಗಾಳ, ಹಾಗೂ ಈಶಾನ್ಯದ ಏಳು ರಾಜ್ಯಗಳ ಪೈಕಿ ಅಸ್ಸಾಂ ಮತ್ತು ತ್ರಿಪುರಾ ನಮ್ಮವೇ. ಅವುಗಳನ್ನು ನಮಗೆ ಬಿಟ್ಟುಕೊಡಬೇಕು ಎಂಬುದಾಗಿ ಪ್ರಸ್ತುತ ಕ್ರಾಂತಿಯ ನಂತರದ ಬಾಂಗ್ಲಾದಲ್ಲಿ ಹೊಸ ಪ್ರತಿಪಾದನೆಯೊಂದು ಹುಟ್ಟಿಕೊಂಡಿದೆ. ಅದರ ಕರ್ತೃ ಪ್ರಸ್ತುತ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅಧ್ಯಕ್ಷರಾದ ಮಹಮ್ಮದ್ ಯೂನಸ್‍ರವರ ಆಪ್ತ ಮಹಘುಜ್ ಆಲಂ. ಅಲ್ಲಿನ ಅಧ್ಯಕ್ಷರು ಇದಕ್ಕೇನೂ ತಿದ್ದುಪಡಿ ಹೇಳಲಿಲ್ಲ. ಅಂದರೆ ಅವರದ್ದು ಮೌನ ಅಂಗೀಕಾರವೆಂಬುದು ಸ್ಪಷ್ಟ. ನಮ್ಮ ಪ್ರಮುಖ ಪತ್ರಿಕೆಯ ಒಂದು ಮೂಲೆಯಲ್ಲಿ ಇದು ಸದ್ಯ ಕೇವಲ ಸುದ್ದಿಯಾಗಿ ಪ್ರಕಟವಾಗಿದೆ. ಇದನ್ನು ಭಾರತದ ವಿದೇಶಾಂಗ ಸಚಿವಾಲಯವು ಬಲವಾಗಿ ಖಂಡಿಸಿದೆ. ಹಾಗಾಗಿ ಬಾಂಗ್ಲಾದ ಕಡೆಯಿಂದ ಸದ್ಯ ಕೆಲವು ದಿನ ಈ ಕಹಳೆ ಮೌನವಾಗಿರುತ್ತದೆ. ಹಾಗೆಯೇ ನಮ್ಮ ದೇಶದ ರಾಜಕೀಯ ಪಕ್ಷಗಳು ತತ್ಕಾಲಕ್ಕೆ ಈ ಸುದ್ದಿಯನ್ನು ಲಕ್ಷಿಸದೆ ಬಿಡುತ್ತವೆ. ಯಾರಾದರೂ ಚಕಾರವೆತ್ತಿದರೂ ಬಾಂಗ್ಲಾದಿಂದ ಅದೆಲ್ಲ ಆಗುಹೋಗುವಂತಹದ್ದಲ್ಲವೆಂದು ಮಾತೆತ್ತಿದವರನ್ನು ಮೌನವಾಗಿಸುತ್ತಾರೆ. ನಮ್ಮ ರಾಜಕೀಯ ಪಕ್ಷಗಳ ಸಂಘಟನೆಗಳಾದ ಯು. ಪಿ. ಎ. ಮತ್ತು ಎನ್. ಡಿ. ಎ. ಪಕ್ಷಗಳು ತಮ್ಮ ರಾಜಕೀಯ ಸ್ಪರ್ಧೆಯನ್ನು ಶತ್ರುತ್ವವಾಗಿ ಪರಿವರ್ತಿಸಿಕೊಂಡಿರುವುದರಿಂದ ಗುಣಾತ್ಮಕ ಚರ್ಚೆಗೆ ತೊಡಗದೆ ಪರಸ್ಪರ ಕೆಸರೆರಚಾಟದಲ್ಲಿ ಮುಳುಗುತ್ತಾರೆ. ಇತಿಹಾಸವನ್ನು ಮರೆತಿರುವ ಅವರು “ಬಾಂಗ್ಲಾದಲ್ಲಿ ಅಂತಹ ಅಭಿಪ್ರಾಯವಿದ್ದರೆ ಅದರಲ್ಲೇನು ತಪ್ಪು? ಅಭಿಪ್ರಾಯ ವ್ಯಕ್ತಪಡಿಸಲು ಯಾರಿಗೂ ಹಕ್ಕು ಇದೆ. ಆದರೆ ಭಾರತ ದೃಢವಾಗಿದೆ. ಅವರಿಂದ ಏನೂ ಸಾಗದು” ಎಂದು ಬಿಂಬಿಸಲು ತೊಡಗುತ್ತಾರೆ. ವಾಸ್ತವವಾಗಿ ಇಂತಹ ಅಲಕ್ಷ್ಯವೇ ಒಳಗಿನಿಂದ ದೃಢತೆಯನ್ನು ದುರ್ಬಲಗೊಳಿಸುತ್ತದೆ. ದೇಶದ ಸಮಗ್ರತೆಗೆ ಧಕ್ಕೆ ಬರುತ್ತದೆ. ಆದ್ದರಿಂದ ಈ ಕುರಿತಾಗಿ ಆಳವಾಗಿ ಚಿಂತಿಸುವ ಅಗತ್ಯವಿದೆ.

Advertisement
Advertisement
Advertisement
Advertisement

ಇತ್ತೀಚಿಗೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹೇಮಂತ ಬಿಸ್ವಾಸ್‍ರವರ ಒಂದು ಉದ್ಗಾರ ಗಮನೀಯ. ಅಸ್ಸಾಂನಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳ ಸಾಧಿಸುತ್ತಿರುವ ಮುಸ್ಲಿಮರಿಂದಾಗಿ ಕಾಲಕ್ರಮೇಣ “ಅಸ್ಸಾಂ ಹಿಂದುಗಳದ್ದಾಗಿ ಉಳಿಯುವುದಿಲ್ಲ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದನ್ನು ತಡೆಯಲು ಹಿಂದುಗಳೂ ಕುಟುಂಬ ಯೋಜನೆಯ ಕಲ್ಪನೆಯಿಂದ ಹೊರಬರಬೇಕು ಎಂದಿದ್ದರು. ಆದರೆ ಅಸ್ಸಾಂನ ಹಿಂದುಗಳು ಜನಸಂಖ್ಯೆ ಹೆಚ್ಚಿಸಲು ಯತ್ನಿಸಿಯಾರೇ ಅಥವಾ ಅಲ್ಲಿಂದ ಸುರಕ್ಷಿತವೆಂದು ಕಂಡಲ್ಲಿಗೆ ವಲಸೆ ಹೋಗಬಹುದೇ ಎಂಬುದು ಪ್ರಶ್ನೆ .

Advertisement

ಇನ್ನೊಂದು ಉದ್ಗಾರವೆಂದರೆ ಬೆಂಗಳೂರಿನಲ್ಲಿ ಬಾಂಗ್ಲಾದ ಅಕ್ರಮ ವಲಸಿಗನೊಬ್ಬ ಹೇಳಿದ ಮಾತು. ಒಬ್ಬ ಪತ್ರಕರ್ತ ” ನೀನು ಯಾರು?” ಎಂದು ಪ್ರಶ್ನಿಸಿದಾಗ ಆತ ಮುಚ್ಚುಮರೆ ಮಾಡದೆ ತಾನು ಬಾಂಗ್ಲಾದೇಶಿಗ ಎಂದು ಹೇಳಿದ. ಅಲ್ಲದೆ ನಾವು ಮೂರು ಸಾವಿರ ಮಂದಿ ಒಟ್ಟಿಗೆ ಇದ್ದೇವೆ. ನಮ್ಮಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇದೆ. ಮತದಾನಕ್ಕೆ ಗುರುತಿನ ಚೀಟಿಯೂ ಇದೆ. ನಾವು ಚುನಾವಣೆಯಲ್ಲಿ ಕಾಂಗ್ರೆಸ್ಸಿಗೇ ಓಟು ಹಾಕುವುದು”. ಇದಿಷ್ಟು ಪತ್ರಕರ್ತನು ವಿಚಾರಿಸಿದ ಪ್ರಶ್ನೆಗಳಿಗೆ ಆತ ನೀಡಿದ ಉತ್ತರಗಳು. ಪತ್ರಿಕೆಯ ಒಂದು ಮೂಲೆಯಲ್ಲಿ ಪ್ರಕಟವಾದ ಈ ಸುದ್ದಿಯನ್ನು ಅನೇಕರು ಓದಿ ಅಲ್ಲಿಗೇ ಬಿಟ್ಟಿದ್ದಾರೆ. ಈ ಮಾತಿಗೆ ರಾಜಕಾರಣಿಗಳು ಸ್ಪಂದಿಸಿದ್ದು ಎಲ್ಲೂ ಕೇಳಿ ಬರಲಿಲ್ಲ. ಗುಪ್ತಚರ ಇಲಾಖೆ ಏನಾದರೂ ಕಂಡುಹಿಡಿಯಲು ತೊಡಗಿದೆಯೋ ಗೊತ್ತಿಲ್ಲ. ಆದರೆ ಬಾಂಗ್ಲಾದೇಶಿಗರ ಅಕ್ರಮ ನುಸುಳುವಿಕೆ ಹಾಗೂ ಅನೇಕ ನಿರ್ಜನ ಪ್ರದೇಶಗಳಲ್ಲಿ ವಾಸ್ತವ್ಯದ ಟೆಂಟುಗಳನ್ನು ಹಾಕಿಕೊಂಡಿರುವ ಬಗ್ಗೆ ವರದಿಗಳು ಸಿಕ್ಕಲು ಆರಂಭವಾಗಿ ದಶಕವೇ ಕಳೆದಿದೆ. ಅವರಿಗೆ ಅಕ್ರಮವಾಗಿ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಸಿಗುತ್ತದೆ ಎಂಬ ವರದಿಗಳೂ ಹಳತಾಗಿವೆ. ಇದು ಕರ್ನಾಟಕವಷ್ಟೇ ಅಲ್ಲದೆ ಬೇರೆ ರಾಜ್ಯಗಳಲ್ಲೂ ನಡೆದಿರುವ ವಿದ್ಯಮಾನವೆಂಬ ವಾರ್ತೆಗಳೂ ಬಿಡಿಬಿಡಿಯಾಗಿ ಕೇಳಿಸಿದ್ದುಂಟು. ಆದರೆ ಯಾವುದೇ ರಾಜ್ಯ ಸರ್ಕಾರವು ಅಕ್ರಮ ವಲಸಿಗರನ್ನು ಹಿಂದೆ ಕಳಿಸಿದ್ದು ಸಂಭವಿಸಿಲ್ಲ. ಏಕೆಂದರೆ ಯಾವುದೇ ಕೆಲಸಗಳಿಗೆ ಕಾರ್ಮಿಕರಾಗಿ ಸಿಕ್ಕುವುದು ಅವರೇ ಆದ್ದರಿಂದ ಅವರ ಬದುಕು ಗಟ್ಟಿಯಾಗುತ್ತಿದೆ. ಕಂಟ್ರಾಕ್ಟುದಾರರಿಗೆ ಬೇಕಾಗುವುದು ಹೇಳಿದ ಸಮಯದಲ್ಲಿ ಹೇಳಿದ ಸ್ಥಳದಲ್ಲಿ ಹೇಳಿದ ಕೆಲಸ ಮಾಡಬಲ್ಲ ಕಾರ್ಮಿಕರೇ ಹೊರತು ಅವರು ನಮ್ಮ ದೇಶದ ಪ್ರಜೆಗಳೇ ಆಗಬೇಕೆಂದೇನಿಲ್ಲ. ಹಾಗಾಗಿ ನಗರಗಳಲ್ಲಿ ಹಾಗೂ ಭಾರಿ ಪ್ರಗತಿಯ ಹೈವೇ ಓವರ್ ಬ್ರಿಜ್, ಮೆಟ್ರೋ ರೈಲ್ವೆ ಇತ್ಯಾದಿ ಕಾಮಗಾರಿಗಳಲ್ಲಿ ಹಾಗೂ ದೊಡ್ಡ ಎಸ್ಟೇಟ್‍ಗಳಲ್ಲಿ ಕೆಲಸ ಸಿಕ್ಕುವುದು ಬಾಂಗ್ಲಾ ದೇಶೀಯರಿಗೆ ಕಷ್ಟವಾಗುವುದಿಲ್ಲ. ಹೀಗೆ ಊಟ ಇಲ್ಲಿ ಸಿಕ್ಕಿದರೂ ಅವರ ಹೃದಯದಲ್ಲಿ ಇಸ್ಲಾಂ ಧರ್ಮವೇ ಇರುತ್ತದೆ. ನಿರಂತರ ಗಡಿಪಾರಿನ ಭಯ ಇರುವುದರಿಂದಾಗಿ ಅವರೊಳಗಿನ ಸಂಘಟನೆಯೂ ಬಲವಾಗಿರುತ್ತದೆ. ಕಂಟ್ರಾಕ್ಟುದಾರರು ಕೇಳಿದಷ್ಟು ಕಾರ್ಮಿಕರನ್ನು ಅವರು ಕರೆತರಬಲ್ಲವರಾಗುತ್ತಾರೆ. ಅಂತವರಿಗೆ ಇಲ್ಲಿಯ ವಾಸ್ತವ್ಯ ಸರ್ಟಿಫಿಕೇಟನ್ನೂ ಮಾಡಿಸಿಕೊಡಲು ವ್ಯವಸ್ಥೆಗಳಿರುತ್ತವೆ.

ಇನ್ನು, ಮಹಘುಜ್ ಆಲಂನ ಜಾಲತಾಣದ ಬರಹದೊಳಗೆ ಒಂದು ಜಾಣ್ಮೆ ಇದೆ. ಆತ ಭಾರತದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳು ಬಾಂಗ್ಲಾದೇಶಕ್ಕೆ ಸೇರಿದ್ದೆಂದು ಬರೆದುಕೊಂಡಿದ್ದಾನೆ. ಇದನ್ನು ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯವರು ಕಠಿಣ ಶಬ್ದ ಗಳಲ್ಲಿ ಖಂಡಿಸಿದ್ದೇನೋ ಹೌದು. ಆದರೆ ಅಷ್ಟೇ ಸಾಕೇ? ಈ ಸಂದೇಹ ಏಕೆಂದರೆ ಈಗ ಮಹಮ್ಮದ್ ಆಲಂ ಸ್ಪಲ್ಪ ಕಾಲ ಸುಮ್ಮನಿರುತ್ತಾನೆ. ಭಾರತದಲ್ಲಿ ವಿರೋಧ ಪಕ್ಷಗಳಿಂದ ಅವನ ಪರವಾದ ಧ್ವನಿಗಳು ಏಳುವವರೆಗೆ ಕಾಯುತ್ತಾನೆ. ಆಗ ಮತ್ತೊಮ್ಮೆ ಅವನ ಪ್ರಲಾಪ ಆರಂಭವಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆತನಿಗೆ ಮಮತಾ ದೀದಿಯ ವಶದಲ್ಲಿರುವ ಪಶ್ಚಿಮ ಬಂಗಾಳ ರಾಜ್ಯ ದೊರಕುವ ಬಗ್ಗೆ ಭಯವಿಲ್ಲ. ಏಕೆಂದರೆ ಅಲ್ಲಿನ ಬಂಗಾಳಿ ಭಾಷೆ ಮತ್ತು ಮುಸ್ಲಿಂ ಒಲವು ಅನುಕೂಲಕರವಾಗಿದೆ. ಇನ್ನು ಆತ ಕೇಳುವ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳ ಭೌಗೋಳಿಕ ಆಯಕಟ್ಟು ಹೇಗಿದೆಯೆಂದರೆ ಈ ಎರಡು ರಾಜ್ಯಗಳು ಸಿಕ್ಕಿದರೆ ಮೇಘಾಲಯವು ಸಹಜವಾಗಿ ಬಾಂಗ್ಲಾದೇಶದ ಕೈವಶವಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಅಸ್ಸಾಂ ರಾಜ್ಯದ ಒಳಗೆ ಹರಿದು ಬರುವ ಬಹ್ಮಪುತ್ರಾ ನದಿಯು ಪೂರ್ಣವಾಗಿ ಬಾಂಗ್ಲಾದೇಶದ ಹತೋಟಿಗೆ ಸಿಗುತ್ತದೆ. ಇದರ ಪರಿಣಾಮವಾಗಿ ಭಾರತದ ನಕಾಶೆಯಿಂದ ಬ್ರಹ್ಮಪುತ್ರಾ ನದಿಯು ಹೊರಗುಳಿಯುತ್ತದೆ. ಇದು ಭಾರತದ ಪಾಲಿಗೆ ಬಹು ದೊಡ್ಡ ನಷ್ಟವಾಗಲಿದೆ. ಸಿಂಧೂ ನದಿಯು ತನ್ನ ಉಗಮ ಸ್ಥಾನವನ್ನು ಭಾರತದಲ್ಲಿಯೇ ಹೊಂದಿದ್ದರೂ ಅದರ ಬಹುಪಾಲು ನೀರು ಬಳಕೆಯಾಗುವುದು ಪಾಕಿಸ್ತಾನದಲ್ಲಿ. ಅದೇ ರೀತಿ ಬ್ರಹ್ಮಪುತ್ರಾ ನದಿಯು ಹಿಮಾಲಯದಲ್ಲೇ ಉಗಮಿಸಿದರೂ ಅದು ಅಸ್ಸಾಂನಿಂದಾಗಿ ಹರಿದು ಬಾಂಗ್ಲಾದೇಶಕ್ಕೆ ಹರಿಯುತ್ತದೆ. ಅದಕ್ಕೆ ಬಂಗಾಳದಲ್ಲಿ ಗಂಗಾನದಿಯೂ ಸೇರಿಕೊಳ್ಳುತ್ತದೆ. ಭಾರತವೇನಾದರೂ ಈ ನದಿಗಳ ನೀರನ್ನು ಹಿಡಿದಿಟ್ಟುಕೊಂಡರೆ ಬಾಂಗ್ಲಾದೇಶದಲ್ಲಿ ನೀರಿನ ಹಾಹಾಕಾರ ಏಳಬಹುದು. ಇದನ್ನು ತಪ್ಪಿಸಲು ಶಾಶ್ವತವಾಗಿ ಬ್ರಹ್ಮಪುತ್ರಾ ನದಿಯ ಮೇಲೆ ಹಿಡಿತ ಸಾಧಿಸಬೇಕೆಂಬ ದೂರಾಲೋಚನೆಯು ಈ ಮಂಡನೆಯ ಹಿಂದೆ ಇದೆ. ಇದಲ್ಲದೆ ತ್ರಿಪುರ ವಶವಾದರೆ ಮತ್ತೆ ಆ ಕಡೆ ಇರುವ ರೋಹಿಂಗ್ಯಾ ಮುಸ್ಲಿಮರ ಭೂಭಾಗದಿಂದ ಬಾಂಗ್ಲಾದೇಶಕ್ಕೆ ಬೆಂಬಲ ಸಿಗಲಿದೆ. ಆಗ ಕೈಸೇರುವ ಅರುಣಾಚಲ ಪ್ರದೇಶ, ನಾಗಾಲೇಂಡ್, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳು ಸುಲಭವಾಗಿ ಕೈಸೇರುತ್ತವೆ.

Advertisement

ಇಂತಹ ಭೌಗೋಳಿಕ ವಶೀಕರಣಕ್ಕೆ ಪೂರಕವಾಗಿ ಇನ್ನೊಂದು ಚಿಂತನೆಯೂ ಇರುವ ಸಾಧ್ಯತೆ ಇದೆ. ಅದು ಭಾರತದ ಆಯಕಟ್ಟಿನ ಜಾಗಗಳಲ್ಲಿ ನೆಲಸಿರುವ ಬಾಂಗ್ಲಾದೇಶದ ನುಸುಳುಕೋರರಿಂದ ದಂಗೆ ಎಬ್ಬಿಸುವುದು. ಇಂತಹ ದಂಗೆಯನ್ನು ದಮನಿಸುವ ಶಕ್ತಿಯು ಸತ್ಯ, ಧರ್ಮ, ನ್ಯಾಯದ ನೆಲೆಯಲ್ಲಿ ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಭಾರತ ಸರ್ಕಾರದಲ್ಲಿ ಇದೆಯೇ? ಮೊದಲೇ ದೇಶದ ಪ್ರಜೆಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲದಂತಹ ದಾಖಲೆಗಳನ್ನು ಪಡೆದಿರುವವರನ್ನು ನಿಯಂತ್ರಣಕ್ಕೆ ತರುವುದು ಹೇಗೆ? ಹೀಗೆ ಬಹುರೂಪಿ ಕುತಂತ್ರದಿಂದಲಾದರೂ ಭಾರತದ ಪೂರ್ವಾಂಚಲದಲ್ಲಿ ಮುಸ್ಲಿಂ ರಾಷ್ಟ್ರವೊಂದು ಉದಯಿಸಿದರೆ ಮತ್ತೆ ಹಿಂದೂ ರಾಷ್ಟ್ರದ ಅಸ್ತಿತ್ವಕ್ಕೆ ಅಪಾಯ ಶತಸ್ಸಿದ್ಧ.

ಇಂತಹ ಒಂದು ಡಿಮಾಂಡ್ ಮುಂದಿಡಲು ಬಾಂಗ್ಲಾದ ಈಗಿನ ತಾತ್ಕಾಲಿಕ ಅಧ್ಯಕ್ಷರ ಆಪ್ತನಿಗೆ ಧೈರ್ಯ ಹೇಗೆ ಬಂತು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇತ್ತೀಚೆಗೆ ಬಾಂಗ್ಲಾದಲ್ಲಿ ನಡೆದ ಹಿಂದುಗಳ ಹತ್ಯೆಯ ವಿರುದ್ಧ ಭಾರತದ ಕಡೆಯಿಂದ ಯಾವುದೇ ಕಠಿಣ ಕ್ರಮಗಳು ಜರಗಿಲ್ಲ. ಇಲ್ಲಿ ಕೆಲವು ರಾಜ್ಯಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದರೂ, ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಮೋದಿ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಇದು ಬಾಂಗ್ಲಾದೊಳಗಿನ ಮತ್ತು ಭಾರತದೊಳಗಿನ ಹಿಂದುಗಳಿಗೂ ಒಂದು ವಿಸ್ಮಯದ ವಿಷಯ. ಮೋದಿಯವರೇಕೆ ಸುಮ್ಮನಿದ್ದಾರೆಂಬುದೇ ನಿಗೂಢ. ಇನ್ನೊಂದು ಹೊಸ ಸುದ್ದಿಯೆಂದರೆ ಬಾಂಗ್ಲಾದಲ್ಲಿ ಈಗ ಆಹಾರದ ಕೊರತೆ ಉಂಟಾಗಿದ್ದು ಅದು ಅಕ್ಕಿಯನ್ನು ಪೂರೈಸುವಂತೆ ಭಾರತದ ಮುಂದೆ ಮಂಡಿಯೂರಿ ಅಂಗಲಾಚಿದೆಯಂತೆ. ಭಾರತ ಸರಕಾರವು ಅದಕ್ಕೆ ಅಕ್ಕಿಯನ್ನು ಮಾರಲು ಒಪ್ಪಿದೆಯಂತೆ. ಆದರೆ ಇಲ್ಲಿರುವ ಪ್ರಶ್ನೆಯೆಂದರೆ ಹೀಗೆ ಆಪತ್ಕಾಲದಲ್ಲಿ ಖರಿದಿಸಿದ ಅಕ್ಕಿಯ ಬೆಲೆಯನ್ನು ಬಾಂಗ್ಲಾವು ಕೊಡಲಿದೆಯೇ? ಏಕೆಂದರೆ ಈಗಾಗಲೇ ಅದು ತ್ರಿಪುರಾ ರಾಜ್ಯದಿಂದ ವಿದ್ಯುತ್ತನ್ನು ಪಡೆಯುತ್ತಿದ್ದು ಅದಕ್ಕೆ ನೀಡಬೇಕಾದ 200 ಕೋಟಿ ರೂಪಾಯಿಗಳನ್ನು ಬಾಕಿ ಇರಿಸಿಕೊಂಡಿದೆ. ಇತ್ತೀಚೆಗೆ ಭಾರತ ಬಾಂಗ್ಲಾ ಸಂಬಂಧ ಹಳಸಿದ್ದರೂ ವಿದ್ಯುತ್ ಪೂರೈಕೆ ನಿಲ್ಲಲಿಲ್ಲವಂತೆ. ಪ್ರಾಯಶಃ ಭಾರತದ ಈ ಮೃದು ಧೋರಣೆಯೇ ಮಹಫುಜ್ ಆಲಂಗೆ ಬಾಂಗ್ಲಾದ ಹೊಸ ನಕಾಶೆಯನ್ನು ರೂಪಿಸಲು ಧೈರ್ಯ ನೀಡಿರಬೇಕು. ಇನ್ನಾದರೂ ಮೋದಿಯವರು ಬಾಂಗ್ಲಾವನ್ನು ಕಟ್ಟಿಹಾಕದಿದ್ದರೆ ಪೂರ್ವದಲ್ಲೊಂದು ಪಾಕಿಸ್ಥಾನ ಬೆಳೆಯುವುದನ್ನು ತಪ್ಪಿಸಲಾಗದು.

Advertisement
ಬರಹ :
ಚಂದ್ರಶೇಖರ ದಾಮ್ಲೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿ
December 17, 2024
8:17 PM
by: ಡಾ.ಚಂದ್ರಶೇಖರ ದಾಮ್ಲೆ
ನಾಚಿಕೆ ಏತಕೆ?
December 11, 2024
9:57 PM
by: ಡಾ.ಚಂದ್ರಶೇಖರ ದಾಮ್ಲೆ
ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ
December 3, 2024
9:17 PM
by: ಡಾ.ಚಂದ್ರಶೇಖರ ದಾಮ್ಲೆ
ಕೊಲ್ಲುವುದಕ್ಕೆ ವ್ಯಕ್ತಿಗಳೆಂದರೆ ಶರೀರಗಳಷ್ಟೇಯಾ..? ಬಂಧುಗಳಲ್ಲವಾ?
November 27, 2024
8:44 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror