ಭಾರತ ಸರ್ಕಾರವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ಹಿನ್ನಲೆ ಅಮೆರಿಕದಲ್ಲಿ ಅಕ್ಕಿ ಅಭಾವ ಉಂಟಾಗಿದೆ. ಹೀಗಾಗಿ ಅಂಗಡಿಗಳ ಮುಂದೆ ಭಾರತೀಯರು ಕ್ಯೂ ನಿಂತು ಅಕ್ಕಿ ಖರೀದಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅಕ್ಕಿಯ ಕೊರತೆ ಉಂಟಾಗಬಹುದು ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿರುವ ಭಾರತೀಯರು ಅಕ್ಕಿಗಾಗಿ ಮುಗಿಬಿದ್ದರು.
ಕೇಂದ್ರ ಸರ್ಕಾರ ಗುರುವಾರ ಬಾಸ್ಮತಿ ಅಕ್ಕಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಅಕ್ಕಿಯ ರಫ್ತು ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಅಕ್ಕಿಯ ಕೊರತೆ ಉಂಟಾಗಿದೆ.ಹೀಗಾಗಿ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಊಟಕ್ಕೆ ಅಕ್ಕಿಗಾಗಿ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಅಕ್ಕಿ ಗೋಣಿ ಖರೀದಿ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ಸುಮಾರು 50 ಲಕ್ಷ ಭಾರತೀಯರಿದ್ದು, ಅವರಲ್ಲಿ ಹೆಚ್ಚಿನ ಜನರು ಅಕ್ಕಿಯನ್ನೇ ಆಹಾರವಾಗಿ ಬಳಸುತ್ತಾರೆ.
ಈಗ ಭಾರತೀಯರು ಅಕ್ಕಿಯನ್ನು ತರಲು ಭಾರತೀಯ ಮಳಿಗೆಗಳು ಹಾಗೂ ಕಾಸ್ಟ್ಕೋ ಮಳಿಗೆಗಳಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಧಾವಿಸುತ್ತಿದ್ದಾರೆ. ಆದರೆ, ಬಹಳಷ್ಟು ಸ್ಟೋರ್‌ಗಳು ಒಬ್ಬರಿಗೆ ಒಂದೇ ಚೀಲ ಎಂದು ನಿಯಮವನ್ನು ಹಾಕಿದೆ. ಅದಲ್ಲದೇ, ಬಹಳಷ್ಟು ಮಳಿಗೆಗಳಲ್ಲಿ ಅಕ್ಕಿ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 25 ಕೆಜಿ ಅಕ್ಕಿ ಮೂಟೆಗೆ 22 ಡಾಲರ್‌ಗಳಿಗಿಂತ ಕಡಿಮೆ ಬೆಲೆ ಇತ್ತು.ಆದರೆ, ಈಗ ಅದರ ದರ 32 ರಿಂದ 47 ಡಾಲರ್‌ವರೆಗೆ ಏರಿಕೆ ಆಗಿದೆ.
ಈಗ ಕೇಂದ್ರದ ಈ ನಿರ್ಧಾರದಿಂದ ಅಮೆರಿಕದ ಭಾರತೀಯರಲ್ಲಿ ಭಾರೀ ಸಂಚಲನ ಮೂಡಿದೆ. ಅಕ್ಕಿಗೆ ಏನು ಮಾಡುವುದು ಎನ್ನುವ ಚಿಂತೆ ಕಾಡಿದೆ.
ಮಳೆಯ ಕೊರತೆಯಿಂದ ಈ ಬಾರಿ ಮುಂಗಾರು ತಡವಾಗಿದೆ. ದೇಶದ ಹಲವೆಡೆ ಮಳೆ ವಿಳಂಬವಾಗಿದೆ. ಫೆಬ್ರವರಿ, ಮಾರ್ಚ್ ನಲ್ಲಿ ಸುರಿದ ಮಳೆಗೆ ಹಲವೆಡೆ ಬೆಳೆ ಹಾನಿಯಾಗಿದ್ದು, ಈ ಬಾರಿ ಇಳುವರಿ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಅಕ್ಕಿಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.ಇದರೊಂದಿಗೆ ಡಿಜಿಎಫ್‌ಟಿ ಗುರುವಾರ ಅಧಿಸೂಚನೆ ಹೊರಡಿಸಿದ್ದು, ಭಾಗಶಃ ಮಿಲ್ ಮಾಡಿದ, ಸಂಪೂರ್ಣ ಮಿಲ್ ಮಾಡಿದ ಮತ್ತು ಬಿಳಿ ಅಕ್ಕಿಯ ರಫ್ತಿಗೆ ನಿಷೇಧ ಹೇರಿದೆ.