ರಾಮೇಶ್ವರಂನಲ್ಲಿ ಲೋಕಾರ್ಪಣೆಗೊಂಡ ಪಂಬನ್ ಸೇತುವೆ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಈ ಸೇತುವೆ ತಮಿಳುನಾಡಿನ ಹೆಗ್ಗುರುತಾಗಲಿದ್ದು, ಜನರಿಗೂ ಅನುಕೂಲವಾಗಲಿದೆ. ಅಂತೆಯೇ ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೊಂಡಿದೆ.……..ಮುಂದೆ ಓದಿ…..
ರಾಮೇಶ್ವರಂ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಂಬನ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದು ದೇಶದಲ್ಲಿ ಮತ್ತೊಂದು ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿಯಾಗಿದೆ. ಸಮುದ್ರದಲ್ಲಿ ನಿರ್ಮಿಸಲಾದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದ್ದು, ಇದು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ತಮಿಳುನಾಡಿನ ಮಂಟಪಂ ನಿಂದ ರಾಮೇಶ್ವರಂ ದ್ವೀಪವನ್ನು ಸಂಪರ್ಕಿಸಲು ಆಧುನಿಕ ಸ್ಪರ್ಶದಿಂದ ಇದನ್ನು ನಿರ್ಮಿಸಲಾಗಿದೆ.
111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡು ಅವಧಿ ಮುಗಿದಿದ್ದರಿಂದ ಅದರ ಪಕ್ಕದಲ್ಲಿಯೇ ಈ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಮೊದಲು 2050 ಮೀಟರ್ ಉದ್ದದ ಹಳೆಯ ಪಂಬನ್ ಸಮುದ್ರ ಸೇತುವೆಯನ್ನು 1911 ಮತ್ತು 1913 ರ ನಡುವೆ ನಿರ್ಮಿಸಲಾಗಿತ್ತು . ಆದರೆ, ಈ ಸೇತುವೆ ತುಕ್ಕು ಹಿಡಿದ ಕಾರಣ, ಭದ್ರತಾ ದೃಷ್ಟಿಯಿಂದ ಕಳೆದ 2022 ರ ಡಿಸೆಂಬರ್‌ನಿಂದ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ರಾಮೇಶ್ವರಂಗೆ ಬರುವ ಭಕ್ತರು, ಧನುಷ್ಕೋಡಿಗೆ ಭೇಟಿ ನೀಡುವ ಪ್ರವಾಸಿಗರು, ರಾಮೇಶ್ವರಂಗೆ ಸಂಚರಿಸುವವರು ಸಂಪೂರ್ಣವಾಗಿ ರಸ್ತೆ ಸಂಚಾರವನ್ನೇ ಅವಲಂಬಿಸಬೇಕಿತ್ತು.
ದಕ್ಷಿಣ ರೈಲ್ವೆಯು ರೈಲು ವಿಕಾಸ ನಿಗಮ ಸಹಯೋಗದೊಂದಿಗೆ 531 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರೈಲು ಸೇತುವೆ ನಿರ್ಮಿಸಿದೆ. ಈ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಭಾರತೀಯ ರೈಲ್ವೆ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಿದೆ. ನೂತನ ರೈಲ್ವೆ ಸೇತುವೆ 2.10 ಕಿಲೋ ಮೀಟರ್ ಉದ್ದವಿದೆ. ಇದರಲ್ಲಿನ ಲಂಬ ಸೇತುವೆ 72.5 ಮೀಟರ್ ಉದ್ದವಿದ್ದು, ಬೋಟ್ ಬಂದಾಗ 17 ಮೀಟರ್ ಎತ್ತರಕ್ಕೆ ಮೇಲಕ್ಕೆ ಏರಿಸಲಾಗುತ್ತದೆ. ಸದ್ಯಕ್ಕೆ ಈ ಸೇತುವೆ ಮೇಲೆ ಏಕಪಥ ಇಲೆಕ್ಟ್ರಿಫಿಕೇಶನ್ ಮಾರ್ಗ ಇದ್ದು, ಭವಿಷ್ಯದಲ್ಲಿ ದ್ವಿಪಥ ಮಾರ್ಗ ನಿರ್ಮಾಣಕ್ಕೂ ಬೇಕಾದ ಸೌಲಭ್ಯ ಒದಗಿಸಲಾಗಿದೆ. ವರ್ಟಿಕಲ್ ಲಿಪ್ಟ್ ಮಾಡುವ ವ್ಯವಸ್ಥೆ ಇದ್ದು, ದೊಡ್ಡ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ರೈಲ್ವೆ ಟ್ರ್ಯಾಕ್ ಸೇರಿದಂತೆ ಈ ಸೇತುವೆಯ ತೂಕ 660 ಮೆಟ್ರಿಕ್ ಟನ್ ಇದೆ. ವರ್ಟಿಕಲ್ ರೈಲ್ವೆ ಬ್ರಿಡ್ಜ್ ಮೇಲಕ್ಕೆ ಎತ್ತಲು 5.30 ನಿಮಿಷಗಳನ್ನು ತೆಗೆದುಕೊಳ್ಳುವುದರಿಂದ ಹಡಗು ಸಾಗಾಟ ಸಮಯ ಉಳಿತಾಯವಾಗಲಿದೆ. ಹೊಸ ಸೇತುವೆಯನ್ನು ನಿರ್ಮಿಸಲು ಐದು ವರ್ಷಗಳು ತೆಗೆದುಕೊಂಡಿವೆ. ಸುಧಾರಿತ ತಂತ್ರಜ್ಞಾನ ಮತ್ತು ವಿಶಿಷ್ಟ ವಿನ್ಯಾಸದಿಂದಲೇ ಈ ಸೇತುವೆ ಗಮನ ಸಳೆಯುತ್ತಿದೆ.