ಜಿರಳೆ ಎಂದರೆ ಸಾಮಾನ್ಯವಾಗಿ ಮನೆಯಲ್ಲಿರುವ ಕೀಟ ಎನ್ನುವ ಕಲ್ಪನೆ ಹಲವರದ್ದು. ಆದರೆ ಭಾರತದಲ್ಲಿ ಈಗಾಗಲೇ 191 ವಿಭಿನ್ನ ಜಾತಿಯ ಜಿರಳೆಗಳು ದಾಖಲಾಗಿರುವುದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. Zoological Survey of India (ZSI) ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಭಾರತದ ಜಿರಳೆಗಳ ವೈವಿಧ್ಯ ನಿರೀಕ್ಷೆಗಿಂತ ಬಹಳ ದೊಡ್ಡದಾಗಿದೆ.
ಇತ್ತೀಚೆಗೆ ವಿಜ್ಞಾನಿಗಳು Neoloboptera peninsularis ಎಂಬ ಹೊಸ ಜಿರಳೆ ಜಾತಿಯನ್ನು ಮಹಾರಾಷ್ಟ್ರದ ಪುಣೆ ಸಮೀಪ ಪತ್ತೆಹಚ್ಚಿದ್ದರು. DNA barcoding ಹಾಗೂ phylogenetic analysis ಬಳಸಿ ಭಾರತದಲ್ಲಿ ಮೊದಲ ಬಾರಿಗೆ ಈ ರೀತಿಯ ಆಧುನಿಕ ವಿಧಾನದಿಂದ ಹೊಸ ಜಾತಿ ಗುರುತಿಸಲಾಗಿದೆ. ಈ ಹೊಸ ಪತ್ತೆಯೊಂದಿಗೆ ದೇಶದಲ್ಲಿ ದಾಖಲಾಗಿರುವ ಜಿರಳೆ ಜಾತಿಗಳ ಸಂಖ್ಯೆ 191ಕ್ಕೆ ಏರಿಕೆಯಾಗಿದೆ.
ZSI ವಿಜ್ಞಾನಿಗಳು ಭಾರತದಲ್ಲಿನ ಜಿರಳೆಗಳಿಗೆ ದೇಶದ ಮೊದಲ ದೊಡ್ಡ DNA ಬಾರ್‌ಕೋಡ್ ಉಲ್ಲೇಖ ಗ್ರಂಥಾಲಯ ಕೂಡ ಅಭಿವೃದ್ಧಿಪಡಿಸಿದ್ದಾರೆ. 100ಕ್ಕೂ ಹೆಚ್ಚು DNA ಬಾರ್‌ಕೋಡ್ ಸಂಗ್ರಹಿಸಿ ಹಲವು ಅಪರೂಪದ ಹಾಗೂ ಭಾರತಕ್ಕೇ ಸೀಮಿತವಾದ ಜಾತಿಗಳನ್ನು ಗುರುತಿಸಲಾಗಿದೆ ಎಂದು ಅಧ್ಯಯನ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ವಿಜ್ಞಾನಿಗಳ ಪ್ರಕಾರ, ಎಲ್ಲಾ ಜಿರಳೆಗಳೂ ಹಾನಿಕಾರಕವಲ್ಲ. ಬಹುತೇಕ ಕಾಡು ಜಾತಿಯ ಜಿರಳೆಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಎಲೆ, ಸಾವಯವ ತ್ಯಾಜ್ಯಗಳ ವಿಲೇವಾರಿ ಮಾಡಿ ಮಣ್ಣಿನ ಪೋಷಕಾಂಶ ಚಕ್ರದಲ್ಲಿ ಸಹಕಾರಿಯಾಗುತ್ತವೆ. ಕೆಲವು ಜಾತಿಗಳು ಪರಿಸರ ಆರೋಗ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ.
ಭಾರತದಲ್ಲಿ ಕಂಡುಬರುವ ಕೆಲವು ಜಿರಳೆ ಜಾತಿಗಳು ಅತಿ ವಿಶಿಷ್ಟವಾಗಿವೆ. ದಕ್ಷಿಣ ಭಾರತದಲ್ಲಿ ಕಂಡುಬರುವ “Indian Domino Cockroach” (Therea petiveriana) ತನ್ನ ಸುಂದರ ಕಪ್ಪು-ಬಿಳಿ ಚುಕ್ಕೆಗಳಿಂದ ವಿಶ್ವದ ಗಮನ ಸೆಳೆದಿದೆ.
ಜೀವ ವೈವಿಧ್ಯ ಅಧ್ಯಯನದಲ್ಲಿ DNA ಆಧಾರಿತ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವುದು, ಭಾರತದಲ್ಲಿನ ಇನ್ನಷ್ಟು ಅಪರೂಪದ ಕೀಟ ಜಾತಿಗಳ ಪತ್ತೆಗೆ ದಾರಿ ಮಾಡಿಕೊಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
India now has 191 recorded cockroach species, according to recent studies by the Zoological Survey of India. Scientists also developed the country’s first large-scale DNA barcode library for cockroaches, uncovering several endemic and previously undocumented species.

