ಭಾರತವು ಕಚ್ಚಾ ಮತ್ತು ಸಂಸ್ಕರಿಸಿದ ಪಾಮ್ ಆಯಿಲ್, ಕಚ್ಚಾ ಸೋಯಾ ತೈಲ ಮತ್ತು ಚಿನ್ನದ ಮೂಲ ಆಮದು ಬೆಲೆಗಳನ್ನು ಕಡಿತಗೊಳಿಸಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ.
2023 ರ ಮಾರ್ಚ್ 31 ರವರೆಗೆ ಅಡುಗೆ ಎಣ್ಣೆ ಮೇಲಿನ ಅಮದು ಸುಂಕಕ್ಕೆ ನೀಡಿರುವ ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸಚಿವಾಲಯ ತಿಳಿಸಿದೆ.ಈ ನಿಯಮದಿಂದಾಗಿ ಕಚ್ಚಾ ತಾಳೆ, ಕಚ್ಚಾ ಸೋಯಾ, ಕಚ್ಚಾ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಸೋಯಾ ಎಣ್ಣೆಗಳ ಮೇಲೆ ಯಾವುದೇ ಆಮದು ಸುಂಕ ಇರುವುದಿಲ್ಲ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆಯಾಗಲಿದೆ.
ಸರ್ಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ಖಾದ್ಯ ತೈಲಗಳು, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಬೆಲೆಗಳನ್ನು ಪರಿಷ್ಕರಿಸುತ್ತದೆ. ಭಾರತವು ಖಾದ್ಯ ತೈಲಗಳು ಮತ್ತು ಬೆಳ್ಳಿಯ ವಿಶ್ವದ ಅತಿದೊಡ್ಡ ಆಮದುದಾರ ಮತ್ತು ಚಿನ್ನದ ಎರಡನೇ ಅತಿ ದೊಡ್ಡ ಗ್ರಾಹಕ. ಭಾರತದಲ್ಲಿ ಚಿನ್ನ, ಖಾದ್ಯ ತೈಲಗಳ ಬೆಲೆಯ ಮೇಲೆ ಈ ಆಮದು ದರವು ಪರಿಣಾಮ ಬೀರುತ್ತದೆ. ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಇನ್ನು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಖಾದ್ಯ ತೈಲ ದರವು ಇತ್ತೀಚೆಗೆ ಜಾಗತಿಕವಾಗಿ ಕೊಂಚ ಇಳಿಕೆಯಾಗುತ್ತಿದೆ.