ದೇಶವು ರೈತರ ಹಿತಾಸಕ್ತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಅವರು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ವೆಚ್ಚಗಳನ್ನು ತಗ್ಗಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಆಹಾರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸುವ ಆಂದೋಲನವನ್ನು ಡಾ. ಸ್ವಾಮಿನಾಥನ್ ಅವರು ಮುನ್ನಡೆಸಿದ್ದರು. ಅವರ ಆಲೋಚನೆಗಳು ಭಾರತದ ಕೃಷಿ ವಲಯದಲ್ಲಿ ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಆಧರಿಸಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ ಎಂದರು. ರೈತರು, ಪಶುಪಾಲಕರು, ಮೀನುಗಾರರು, ಹೈನುಗಾರರು ಸೇರಿದಂತೆ ಎಲ್ಲಾ ಕೃಷಿ ಪೂರಕ ವರ್ಗದವರ ಹಿತ ಕಾಯುವುದು ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು. ದೇಶದ ಪ್ರಗತಿಗೆ ಕೃಷಿ ಸಾಮರ್ಥ್ಯವೇ ಆಧಾರ. ನಮ್ಮ ರೈತರ ಬಳಿ ಪಾರಂಪರಿಕ ಕೃಷಿಯ ಜ್ಞಾನ ಭಂಡಾರವಿದ್ದು, ಅದನ್ನು ಬಳಸಿಕೊಂಡು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಒತ್ತು ನೀಡುವ ತುರ್ತು ಅಗತ್ಯವಿದೆ. ಆಹಾರ ಭದ್ರತೆ ಜೊತೆಗೆ ಪೌಷ್ಠಿಕ ಭದ್ರತೆಗೂ ಒತ್ತು ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಕಾರ್ಯೋನ್ಮುಖವಾಗಿ ಇದೀಗ ಎಲ್ಲಾ ಹವಾಮಾನಗಳನ್ನು ಎದುರಿಸುವಂತಹ ಸಾಮರ್ಥ್ಯವಿರುವ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರೈತರು ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರನ್ನು ತಾವು ಭೇಟಿಯಾಗಿದ್ದು, ಅದೊಂದು ಅಮೂಲ್ಯವಾದ ಕಲಿಕಾ ಅನುಭವವಾಗಿತ್ತು. ಕೃಷಿ ವಿಜ್ಞಾನದಲ್ಲಿ ಅವರ ಪರಿವರ್ತನಾತ್ಮಕ ಕಾರ್ಯವನ್ನು ಇಂದಿಗೂ ವ್ಯಾಪಕವಾಗಿ ಮೆಚ್ಚಲಾಗುತ್ತಿದೆ. ಅಂತಹ ಸಾಧಕರನ್ನು ಭಾರತರತ್ನದೊಂದಿಗೆ ಗೌರವಿಸುವ ಅವಕಾಶ ನಮ್ಮ ಸರ್ಕಾರಕ್ಕೆ ಸಿಕ್ಕಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.

