ಭಾರತೀಯ ಸೇನಾ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಬದಲಾಗಿ ಅದು ದೇಶದ ಜನರ ಸಾಮೂಹಿಕ ಭಾವನೆಗಳು ಮತ್ತು ವಿರೋಧದ ಪ್ರಬಲ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…..ಮುಂದೆ ಓದಿ….
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಸಶಸ್ತ್ರ ಪಡೆಗಳು, ಮಿಲಿಟರಿ, ಗುಪ್ತಚರ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ಆಪರೇಷನ್ ಸಿಂದೂರ್ ಕಾರ್ಯದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಭಾರತವು ಬೃಹತ್ ಪ್ರಮಾಣದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಿದೆ. ಆದ್ದರಿಂದ, ಯಾವುದೇ ಭಯೋತ್ಪಾದನೆ ನಿಗ್ರಹ ಮಾಡಲು ಭಾರತ ಹಿಂಜರಿಯುವುದಿಲ್ಲ, ಭಯೋತ್ಪಾದನೆ ನಿಗ್ರಹಕ್ಕೆ ನಮ್ಮ ಆಪರೇಷನ್ ಸಿಂದೂರ್ ಮುಂದುವರಿಯುತ್ತದೆ ಎಂದರು.ಸದ್ಯ ಕಾರ್ಯಾಚರಣೆಯು ಸ್ಥಗಿತಗೊಂಡಿರುವುದರಿಂದ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಾಗರೂಕರಾಗಿರುವ ಈಗ ನೀಡಿರುವ ಭರವಸೆಗಳೊಂದಿಗೆ ಭಾರತವು ಪಾಕಿಸ್ತಾನದ ಕ್ರಮಗಳನ್ನು ಗಮನಿಸುತ್ತದೆ, ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದರು. ಭಾರತವು ಭಯೋತ್ಪಾದನೆಗೆ ಪ್ರತಿಕ್ರಿಯಿಸುತ್ತದೆ, ಆದರೆ ಪರಮಾಣು ಬ್ಲ್ಯಾಕ್‌ಮೇಲ್ ಅನ್ನು ಸಹಿಸುವುದಿಲ್ಲ, ಭಯೋತ್ಪಾದನೆಯ ನಿಗ್ರಹಕ್ಕೆ ಭಾರತವು ದಾಳಿ ಮಾಡುತ್ತದೆ ಮತ್ತು ಭಯೋತ್ಪಾದಕ ಮುಖ್ಯಸ್ಥರು ಮತ್ತು ಅವರ ಬೆಂಬಲಿಗರನ್ನು ಕೂಡಾ ಮುಗಿಸಲು ಹಿಂದೇಟು ಹಾಕುವುದಿಲ್ಲ ಎಂದರು.
ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳನ್ನು ನಾಶಪಡಿಸಬೇಕು ಇಲ್ಲದಿದ್ದರೆ ಅವರಿಗೆ ಯಾವುದೇ ಅನ್ಯ ಮಾರ್ಗವಿಲ್ಲ ಎಂದು ಮೋದಿ ಹೇಳಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ, ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತ್ರ ಇರುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು. ಭಯೋತ್ಪಾದನೆ, ವ್ಯಾಪಾರ ಮತ್ತು ಮಾತುಕತೆಗಳನ್ನು ಒಟ್ಟಿಗೆ ಮಾಡಲು ಸಾಧ್ಯವಿಲ್ಲ ಎಂಬುದು ಭಾರತದ ನಿಲುವು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರ್ಕಾರವು ಭಯೋತ್ಪಾದನೆಯನ್ನು ಪೋಷಿಸುವುದನ್ನು ಮುಂದುವರಿಸಿದರೆ, ಒಂದು ದಿನ ಅದು ಪಾಕಿಸ್ತಾನದ ಸ್ವಂತ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದರು.