ಗ್ರಾಮೀಣ ಆರ್ಥಿಕತೆ ದೇಶದ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರುವುದು ಕಳೆದ ಕೆಲವು ವರ್ಷಗಳಿಂದ ಅರಿವಿಗೆ ಬರುತ್ತಿದೆ. ಇದೀಗ ಕೊರೋನಾ ನಂತರ ಅತ್ಯಂತ ಸ್ಪಷ್ಟವಾಗಿ ಕಂಡುಬಂದಿದ್ದು 2019-20 ರಲ್ಲಿ ಇಡೀ ದೇಶದ ಜಿಡಿಪಿಯ ಶೇ.50 ರಷ್ಟು ಗ್ರಾಮೀಣ ಆರ್ಥಿಕತೆ ಇರುವ ಬಗ್ಗೆ ಆರ್ಥಿಕ ಸಮೀಕ್ಷೆಯ ಅಧ್ಯಯನ ವರದಿಯೊಂದು ತಿಳಿಸಿದೆ. ಹೀಗಾಗಿ ಈಗ ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಸೂಕ್ತವಾದ ಕ್ರಮಗಳ ಅಗತ್ಯವಿದೆ. ಈ ಮೂಲಕ ದೇಶದ ಜಿಡಿಪಿ ಸ್ಥಿರತೆಯತ್ತ ಕೊಂಡೊಯ್ಯಲು ಸಕಾಲಿಕವಾಗಿ ಕೆಲಸ ಮಾಡಬೇಕಾಗಿದೆ ಎಂದು ವರದಿಗಳು ಎಚ್ಚರಿಸಿದೆ.
ಕೃಷಿ ವಲಯವು 2015 ಮತ್ತು 2020 ರ ನಡುವೆ ಶೇಕಡಾ 11 ರಷ್ಟು ಸಿಎಜಿಆರ್(Compound Annual Growth Rate) ನಿಂದ ಬೆಳೆದಿದೆ. 2019-20 ರಲ್ಲಿ ಒಟ್ಟು ಗ್ರಾಮೀಣ ಜಿಡಿಪಿಯ ಅದರಲ್ಲೂ ಗ್ರಾಮೀಣ ಆರ್ಥಿಕತೆಯಲ್ಲಿ ಕೃಷಿಯು ಅತಿದೊಡ್ಡ ಉಪ-ವಲಯವಾಗಿ ಕಂಡುಬಂದಿದೆ. ಅಂದರೆ ಕೃಷಿ ವಲಯವು ಈಚೆಗೆ ಶೇ.11 ರಷ್ಟು ಏರಿಕೆ ಕಂಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. 2020-21 ರಲ್ಲಿ ಸ್ಥಿರ ಬೆಲೆಯಲ್ಲಿ ಹಾಗೂ ಗುಣಾತ್ಮಕ ಬೆಳವಣಿಗೆಯನ್ನು ಸಾಧಿಸಿದ ಏಕೈಕ ಕ್ಷೇತ್ರವೆಂದರೆ ಕೃಷಿ. 2020-2021 ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಮಾತ್ರವೇ ಕಳೆದ 17 ವರ್ಷಗಳಲ್ಲಿ ಮೊದಲ ಬಾರಿಗೆ ಸುಮಾರು 20 ಶೇಕಡಾವನ್ನು ತಲುಪಿದೆ. 2020-21 ರ ಒಂದೇ ವರ್ಷದಲ್ಲಿ ಸ್ಥಿರ ಬೆಲೆಯಲ್ಲಿ ಕೃಷಿ ಕ್ಷೇತ್ರವು ಶೇಕಡಾ 3.4 ರಷ್ಟು ಏರಿಕೆ ಕಂಡಿದೆ. ಇತರೆಲ್ಲಾ ಕ್ಷೇತ್ರಗಳೂ ಕುಸಿತ ಕಂಡಿದ್ದು. ಜಿಡಿಪಿಯಲ್ಲಿ ಕೃಷಿಯ ಪಾಲು 2019-20ರಲ್ಲಿ ಶೇ 17.8 ರಿಂದ 2020-21ರಲ್ಲಿ ಶೇ 19.9ಕ್ಕೆ ಏರಿಕೆಯಾಗಿದೆ. ಕೃಷಿ ಕ್ಷೇತ್ರದ ಬೆಳವಣಿಗೆಯ ಕಾರಣದಿಂದ ದೇಶದ ಗ್ರಾಮೀಣ ಆರ್ಥಿಕತೆ ಬೆಳೆಯಿತು, ಗ್ರಾಮೀಣ ಭಾಗವು ಮೂಲಭೂತ ವ್ಯವಸ್ಥೆಗಳ ಕೊರತೆ ನಡುವೆಯೂ ಆರ್ಥಿಕತೆಯಲ್ಲಿ ಗಟ್ಟಿಯಾಗಿತ್ತು ಎಂದು ಸಮೀಕ್ಷಾ ವರದಿ ಹೇಳಿದೆ.
ಕೃಷಿ ಸರಕುಗಳ ನಿರಂತರ ಪೂರೈಕೆ, ವಿಶೇಷವಾಗಿ ಅಕ್ಕಿ, ಗೋಧಿ, ಬೇಳೆಕಾಳುಗಳು ಮತ್ತು ತರಕಾರಿಗಳಂತಹ ಪ್ರಧಾನ ಆಹಾರಗಳು ಸಹ ಆಹಾರ ಭದ್ರತೆಯನ್ನು ಗಟ್ಟಿಗೊಳಿಸಿದ್ದವು. 2019-20 ರಲ್ಲಿ ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆ 296.65 ಮಿಲಿಯನ್ ಟನ್ ಆಗಿತ್ತು. ಅಂದರೆ 2018-19 ಕ್ಕಿಂತ 11.44 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ. ಇದು ಹಿಂದಿನ ಐದು ವರ್ಷಗಳ ಅಂದರೆ 2014-15 ರಿಂದ 2018-19 ರ ಸರಾಸರಿ ಉತ್ಪಾದನೆ 269.78 ಮಿಲಿಯನ್ ಟನ್. ಅಂದರೆ ಒಂದೇ ವರ್ಷ 26.87 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ.
ಈಚೆಗೆ ಹೊಸ ಪೀಳಿಗೆಯ ರೈತರು, ಯುವ ಕೃಷಿಕರು ತಾಂತ್ರಿಕವಾಗಿ ಹೆಚ್ಚು ಅವಲಂಬನೆಯಾಗುತ್ತಿದ್ದಾರೆ ಹಾಗೂ ಹೊಸ ವಿಧಾನಗಳಿಂದ ಕೃಷಿ ಮಾಡುತ್ತಿದ್ದಾರೆ. ಈಚೆಗೆ ಆರಂಭವಾದ ಎಫ್‌ಪಿಒಗಳು , ಯುವಕರು ಡಿಜಿಟಲ್ ಜ್ಞಾನವನ್ನು ಹೊಂದಿರುವುದರಿಂದ, ಕೃಷಿ ಧಾರಣೆ, ಮಾರುಕಟ್ಟೆ, ಸಂಸ್ಕರಣೆ, ಮೌಲ್ಯವರ್ಧನೆ ಕಡೆಗೂ ಗಮನ ಹರಿಸುತ್ತಿದ್ದಾರೆ. ಹೀಗಾಗಿ ರೈತ-ಮಾರುಕಟ್ಟೆ-ಗ್ರಾಹಕರ ನಡುವಿನ ಕೊಂಡಿಯೂ ಗಟ್ಟಿಯಾಗುತ್ತಿದೆ. ಯುವ ಕೃಷಿಕರ ಕಾರಣದಿಂದ ಮಾಹಿತಿ ಮತ್ತು ಪಾರದರ್ಶಕತೆ ಹೆಚ್ಚಾಗುತ್ತಿದೆ. ಇದೆಲ್ಲಾ ಕೃಷಿ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗುತ್ತಿದೆ ಎನ್ನುವುದು ಅಧ್ಯಯನ ವರದಿ. ಈ ನಡುವೆ ರೈತರೇ ನಿರ್ಮಿಸುವ ಎಫ್‌ಪಿಒ ಗಳು ಕೂಡಾ ಕೃಷಿ ವಸ್ತುಗಳ ಮೌಲ್ಯವರ್ಧನೆ, ಮಾರುಕಟ್ಟೆಗೂ ರೈತರಿಗೆ ನೆರವಾಗುತ್ತಿವೆ. ಈ ಎಲ್ಲಾ ಕಾರಣದಿಂದ ಗ್ರಾಮೀಣ ಆರ್ಥಿಕತೆ ಏರಿಕೆಯತ್ತ ಸಾಗುತ್ತಿದೆ. ಸರ್ಕಾರದ ಹೆಜ್ಜೆಗಳು ಗಮನಾರ್ಹವಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಪರಿಸರದಲ್ಲಿ ಕೃಷಿ ಸಾಲದ ಏರಿಕೆ ಕಂಡುಬಂದಿದೆ. ಕಳೆದ ಐದು ವರ್ಷಗಳಲ್ಲಿ ಕೃಷಿ ಸಾಲವು 8 ಲಕ್ಷ ಕೋಟಿಯಿಂದ 14 ಲಕ್ಷ ಕೋಟಿಗೆ ಅಂದರೆ ಸುಮಾರು 10% ಹೆಚ್ಚಾಗಿದೆ. ಗ್ರಾಮೀಣ ಕಿರುಬಂಡವಾಳಗಳೂ ಬೆಳೆದಿವೆ. ಹೀಗಾಗಿ ಗ್ರಾಮೀಣ ಆರ್ಥಿಕತೆ ಈಗ ಬೆಳೆಯುತ್ತಿದೆ. ಸಕಾಲದಲ್ಲಿ ಎಲ್ಲಾ ಸಂಸ್ಥೆಗಳೂ, ರೈತರೂ ಎಚ್ಚೆತ್ತುಕೊಂಡು ದೇಶದ ಆರ್ಥಿಕತೆಯ ಗಟ್ಟಿಗಾಗಿ ಪ್ರಯತ್ನ ಮಾಡಬಹುದಾಗಿದೆ ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದೆ.