ಕ್ರೀಡೆ ಅಂದರೆ ಉತ್ಸಾಹ. ಅದರ ಕೊರತೆ ಈ ಹಿಂದೆ ಭಾರತದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಈಗ ಹಾಗಲ್ಲ. ಕ್ರೀಡಾಳುಗಳಿಗೆ ಕೇಂದ್ರ ಸರ್ಕಾರ ಉತ್ಸಾಹ ತುಂಬುತ್ತಿದೆ. ಹಾಗೆ ಅವರಿಗೆ ಬೇಕಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಅದರ ಫಲವೇಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ #AsianGames ಭಾರತ ದಾಖಲೆ ಬರೆದಿದೆ. ಒಟ್ಟು 71 ಪದಕಗಳನ್ನು ಗೆಲ್ಲುವ ಮೂಲಕ 2018ರ ದಾಖಲೆಯನ್ನು ಬ್ರೇಕ್ ಮಾಡಿದೆ.
ಇಂಡೋನೇಷ್ಯಾದಲ್ಲಿ ನಡೆದ ಈ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನ, 23 ಬೆಳ್ಳಿ, 31 ಕಂಚಿನ ಪದಕ ಸೇರಿ ಒಟ್ಟು 70 ಪದಕಗಳನ್ನು ಗೆದ್ದುಕೊಂಡಿತ್ತು. ಇದು ಇಲ್ಲಿಯವರೆಗೆ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಹಲವು ಪದಕಗಳು ಬರುವ ನಿರೀಕ್ಷೆಯಿದೆ.
ಸದ್ಯ ಭಾರತ 16 ಚಿನ್ನ, 26 ಬೆಳ್ಳಿ, 29 ಕಂಚಿನ ಪದಕ ಸೇರಿ ಒಟ್ಟು 71 ಪದಕಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. 2018ರ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು.
ಇಲ್ಲಿಯವರೆಗೆ ಚೀನಾ 164 ಚಿನ್ನ, 90 ಬೆಳ್ಳಿ, 46 ಕಂಚು ಸೇರಿ 300 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ 33 ಚಿನ್ನ, 48 ಬೆಳ್ಳಿ, 50 ಕಂಚು ಸೇರಿ 131 ಪದಕ ಗೆದ್ದಿರುವ ಜಪಾನ್ ಎರಡನೇ ಸ್ಥಾನದಲ್ಲಿದೆ. 32 ಚಿನ್ನ, 43 ಬೆಳ್ಳಿ, 65 ಕಂಚಿನ ಪದಕ ಸೇರಿ ಒಟ್ಟು 140 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಇಂದು ನಡೆದ ಮಿಶ್ರ ಅರ್ಚರಿ ಸ್ಪರ್ಧೆಯಲ್ಲಿ ಜ್ಯೋತಿ ವೆನ್ನಮ್ ಮತ್ತು ಓಜಸ್ ಡಿಯೋಟಾಲೆ ಚಿನ್ನ ಗೆದ್ದಿದ್ದಾರೆ. ಮಂಜು ರಾಣಿ ಮತ್ತು ರಾಮ್ ಬಾಬೂ ಅವರಿದ್ದ ಮಿಶ್ರ ತಂಡ 35 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು.
- ಅಂತರ್ಜಾಲ ಮಾಹಿತಿ