ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ

November 6, 2024
6:42 AM
ಹಳ್ಳಿಯ ಬದುಕನ್ನು ಮತ್ತು ಮೈ ಮುರಿದು ದುಡಿಯಬೇಕಾದ ಕೃಷಿ ಕೆಲಸಗಳನ್ನು ತಿರಸ್ಕರಿಸುವ ಆಧುನಿಕ ಯುವಪ್ರಜೆಯು ನಿರುದ್ಯೋಗಿಯಾಗಿ ದಿನಕಳೆಯಲು ಸಿದ್ಧನಿರುತ್ತಾನೆ. ಆದರೆ ತನ್ನಿಂದ ಸಾಧ್ಯವಾಗುವ ಬೇರೆನಾದರೂ ಉದ್ಯೋಗಕ್ಕೆ ಸೇರಿ ಸಂಪಾದನೆಗೆ ತೊಡಗುವುದಿಲ್ಲ.....
ಸ್ವಾತಂತ್ರ್ಯ ಬಂದು ಐದು ದಶಕಗಳ ಬಳಿಕ ಬೀಸಿದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಗಾಳಿಯು ಭಾರತೀಯತೆಯ  ಚಿಂತನ ವಿಧಾನವನ್ನು ಬದಲಿಸಿದೆ. ಆಮದು ರಫ್ತುಗಳಲ್ಲಿ ತೆರೆದುಕೊಂಡ ಮುಕ್ತದ್ವಾರವು ದೇಶದ ಉತ್ಪಾದನಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೆಚ್ಚಿಸಿತು. ಪರಿಣಾಮವಾಗಿ ಕೃಷಿಗಿಂತ ಕೈಗಾರಿಕಾ ವಲಯದಲ್ಲಿ ಆಸಕ್ತಿ ತಾಳುವವರ ಪ್ರಮಾಣದಲ್ಲಿ ಏರಿಕೆಯನ್ನುಂಟು ಮಾಡಿತು. ಹಾಗಾಗಿಯೇ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿಯಾಯಿತು. ಅಂದರೆ ಗುಣಮಟ್ಟ ಹೆಚ್ಚಾದದ್ದಲ್ಲ. ಬದಲಾಗಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದತ್ತ ಒಲವು ಅಧಿಕವಾಯಿತು. ಇದು ಉನ್ನತ ವರ್ಗದವರೊಂದಿಗೆ ವಿಸ್ತಾರವಾದ ಮಧ್ಯಮ ವರ್ಗದವರೂ ಸ್ಪರ್ಧಿಸಿ ಸಾಧಿಸುವಷ್ಟು ಪ್ರಬಲವಾಯಿತು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಂಸ್ಕೃತಿ, ಇತಿಹಾಸ, ರಾಜಕೀಯ, ವಾಣಿಜ್ಯ ಮುಂತಾದ  ಶಿಕ್ಷಣ ವಿಭಾಗಗಳು ಕ್ಷೀಣವಾಗಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪದವಿಗಳೇ ಗೌರವಯುತವಾದುವು. ಅಷ್ಟರಲ್ಲೇ ಕಂಪ್ಯೂಟರ್ ಯುಗವು ಪ್ರಭಾವಶಾಲಿಯೆನ್ನಿಸಿ ಇಂಜಿನಿಯರಿಂಗ್‍ನಲ್ಲೂ ಸಿವಿಲ್, ಮೆಕಾನಿಕಲ್ ಮುಂತಾದ ಸಾಂಪ್ರದಾಯಿಕ ಕೋರ್ಸ್‍ಗಳು ಹಿಂದೆ ಬಿದ್ದುವು. ಉದ್ಯೋಗದ ಅವಕಾಶಗಳು ದೇಶಕ್ಕಿಂತಲೂ ಹೆಚ್ಚಾಗಿ ವಿದೇಶಗಳಲ್ಲಿ ತೆರೆದುಕೊಂಡಿದ್ದರಿಂದ ವಿದ್ಯಾರ್ಥಿಗಳ ದೃಷ್ಠಿ ದೇಶಕ್ಕಿಂತ ಆಚೆಗೆ ವ್ಯಾಪಿಸಿತು.
ಹಿಂದೆ ನಮ್ಮ ದೇಶದ ಶಾಲೆ ಕಾಲೇಜುಗಳಲ್ಲಿ ವಿಜ್ಞಾನ ಕಲಿತವರು ಇಂಜಿನಿಯರ್ ಗಳಾಗಿದ್ದಾರೆ ಮತ್ತು ಪ್ರಸಿದ್ಧ ವೈದ್ಯರಾಗಿದ್ದಾರೆ. ಅವರು ಕನ್ನಡ ಮಾಧ್ಯಮದಲ್ಲೇ ಕಲಿತಿದ್ದರೂ ಉತ್ತಮ ಪ್ರಾಧ್ಯಾಪಕರಾಗಿ ಹಾಗೂ ಪ್ರೊಫೆಸರ್‍ಗಳಾಗಿ ದೇಶವಿದೇಶಗಳಲ್ಲಿ ಪ್ರಸಿದ್ಧರಾದರು. ಆದರೆ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಿಡಿಯಂನಲ್ಲಿ ವಿದ್ಯೆ ಪಡೆದರೆ ಈ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಮೇಲುಗೈ ಸಾಧಿಸಬಹುದೆಂಬ ಪುಕಾರು ಹಬ್ಬಿತು. ಅದಕ್ಕೆ ಪೂರಕವಾಗಿ ಯಾವುದೋ ಒಂದು ಭಾಷಣದಲ್ಲಿ ಇನ್ಫೊಸಿಸ್ ಸ್ಥಾಪಕ  ಶ್ರೀ ನಾರಾಯಣ ಮೂರ್ತಿಯವರು ಇಂಗ್ಲಿಷ್  ಪರವಾಗಿ ಮಾತಾಡಿದರು. ಇದು ಇಂಗ್ಲಿಷ್ ಮಿಡಿಯಂ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಕುಮ್ಮಕ್ಕು ನೀಡಿತು. ಈ ಬೆಳವಣಿಗೆಯು ನಗರಗಳಿಗೆ ಸೀಮಿತವಾಗಿದ್ದದ್ದು 1990ರ ಹಾಗೂ ನಂತರದ ದಶಕಗಳಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಹೆಚ್ಚಿತು. ಇಂಗ್ಲಿಷ್ ಮಿಡಿಯಂನಲ್ಲಿ ವಿದ್ಯಾಭ್ಯಾಸ ಪಡೆಯುವುದು ಹಾಗೂ ಅದಕ್ಕಾಗಿ ಟ್ಯೂಶನ್ ಕ್ಲಾಸ್‍ಗಳಿಗೆ ಹೋಗುವುದು ಪ್ರತಿಷ್ಠೆಯ ವಿಷಯವಾಯಿತು. ಅಣಬೆಗಳಂತೆ ಇಂಗ್ಲಿಷ್ ಮಿಡಿಯಂ ಶಾಲೆಗಳು ತೆರೆಯುತ್ತಿವೆಯೆಂಬ ಮಾತು ಪ್ರಚಲಿತವಾಗಿ ಕೇಳಿ ಬರುತ್ತಿತ್ತು. ಕಾನೂನು ಪ್ರಕಾರ ಸರಕಾರಿ ಶಿಕ್ಷಣ ಇಲಾಖೆಯು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸಲು ಸಾಧ್ಯವಿಲ್ಲದ್ದರಿಂದ ಖಾಸಗಿಯವರಿಗೆ ಮೈದಾನವನ್ನು ತೆರೆದಿಟ್ಟ ಹಾಗಾಗಿತ್ತು. ವಿವಿಧ ಗುಣಮಟ್ಟ ಮತ್ತು ಸೌಲಭ್ಯಗಳ ಫೋಷಣೆಗಳ ಜಾಹಿರಾತುಗಳೊಂದಿಗೆ ಖಾಸಗಿ ಶಾಲೆಗಳು ಪೋಷಕರನ್ನು ಆಕರ್ಷಿಸಿದುವು. ಹೆಚ್ಚಿನ ಶುಲ್ಕ ಮತ್ತು ಹೆಚ್ಚಿನ ಗುಣಮಟ್ಟಗಳ ನಡುವೆ ಸಮೀಕರಣ ಇದೆಯೆಂಬ ವಿಶ್ವಾಸ ತಾಳಿದ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಬೆಲೆ ತೆರಲು ಸಿದ್ಧರಾದರು. ಮಕ್ಕಳನ್ನು ಹಳ್ಳಿಗಳಿಂದ ಹೆಕ್ಕಿ ಸಾಗಿಸುವ ಹಳದಿ ಬಸ್ಸುಗಳ ಸರಣಿ ರಸ್ತೆಗಳಲ್ಲಿ ರಂಜಿಸತೊಡಗಿತು. ಶಿಕ್ಷಣದ ಮೂಲಕ ಸಮಾನತೆಯೆಂಬ ಪರಿಕಲ್ಪನೆ ತೆರೆಯ ಮರೆಗೆ ಸರಿಯಿತು. ಸಾಮಾಜಿಕ ಅಸಮಾನತೆಗೆ ಶಿಕ್ಷಣವೇ ಪಂಚಾಂಗ ತೋಡಿತು. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತ ಸಾಗಿತು. ಊರಿನವರು ಯಾರೂ ತಮ್ಮ ಮಕ್ಕಳನ್ನು ಕಳಿಸದಿದ್ದಾಗ ಸರಕಾರಿ ಶಾಲೆಗಳು ವಲಸೆ ಕಾರ್ಮಿಕರ ಮಕ್ಕಳನ್ನು ಸೆಳೆದು ಅಸ್ತಿತ್ವವನ್ನು ಉಳಿಸಿಕೊಳ್ಳುವ ಸ್ಥಿತಿಗೆ ತಲುಪಿತು. ಈ ಹಂತದಲ್ಲಿ ಶಿಕ್ಷಣ ಇಲಾಖೆಯು ತನ್ನ ಕಾನೂನಿನ ಬದ್ಧತೆಯನ್ನು ಮರೆತು ಸರಕಾರಿ ಶಾಲೆಗಳಲ್ಲಿಯೇ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್.) ಹೆಸರಿನಲ್ಲಿ ಇಂಗ್ಲಿಷ್ ಮಿಡಿಯಂನ್ನು ಆರಂಭಿಸಿತು. ಇದಕ್ಕೆ ಬಡ ಪೋಷಕರಿಂದಲೂ ಪ್ರತಿಸ್ಪಂದನೆ ದೊರಕಿತು. ಪರಿಣಾಮವಾಗಿ ಒಂದೇ ಶಾಲೆಯಲ್ಲಿ ಇಂಗ್ಲಿಷ್ ಮತ್ತು ಕನ್ನಡದ ವಿಭಾಗಗಳು ತೆರೆಯಲ್ಪಟ್ಟವು. ಅರ್ಥಾತ್ ವಿದ್ಯಾರ್ಥಿಗಳ  ಮಧ್ಯೆ ಮೇಲು-ಕೀಳಿನ ಸ್ತರ ವಿನ್ಯಾಸವು ಏರ್ಪಟ್ಟಿತು. ಕ್ರಮೇಣ ಸಮಾಜದಲ್ಲಿ ಅಸಮಾನ ನಾಗರಿಕರು ರೂಪುಗೊಳ್ಳುವ ಪರಿಣಾಮದ ಬಗ್ಗೆ ಶಿಕ್ಷಣ ಇಲಾಖೆಯು ವಿಮರ್ಶೆಯನ್ನು ನಡೆಸಲೇ ಇಲ್ಲ. ಹಾಗಾಗಿ “ಅಲ್ಲಿ ಆಗಬಹುದಾದರೆ ನಮ್ಮಲ್ಲಿ ಯಾಕಾಗದು?” ಎಂಬ ಜಿದ್ದಿನೊಂದಿಗೆ ಕೆ.ಪಿ.ಎಸ್. ಲೇಬಲ್‍ನ ಹೊರತಾಗಿಯೂ ಗ್ರಾಮೀಣ ಸರಕಾರಿ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತೇವೆಂದು ಪ್ರಚಾರ ನೀಡಿ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಈ ರೀತಿಯಲ್ಲಿ ಶಿಕ್ಷಣವೆಂಬ ಹರಿದ ಬಟ್ಟೆ ಎಷ್ಟು ದುರ್ಬಲವಾಗಿದೆಯೆಂದರೆ  “ಭಾರತದ ಭವಿಷ್ಯವು ತರಗತಿಗಳಲ್ಲಿ ರೂಪುಗೊಳ್ಳುತ್ತಿದೆ” ಎಂಬ ನೆಹರೂರವರ ಮಾತು ಪುಡಿಪುಡಿಯಾಗಿ ನೆಲಕ್ಕೆ  ಸುರಿಯುತ್ತಿದೆ.
ಇಂದಿನ ಭಾರತೀಯ ಪ್ರಜೆಯ ದೇಸೀ ಪ್ರಜ್ಞೆಯು ಹರಿದ ಬಟ್ಟೆಯ ಒಂದು ಚಿಂದಿ ಅಷ್ಟೇ. ಚಿಂದಿಗಳಿಂದ ಅಂಗಿ ಹೊಲಿಯಲು ಸಾಧ್ಯವಿಲ್ಲ. ಇಂದು ಯುವಕರಾದ ಅನೇಕರಿಗೆ ಸ್ಥಳೀಯ ಸಮುದಾಯದ ಚರಿತ್ರೆ ಗೊತ್ತಿರುವುದಿಲ್ಲ. ಹಾಗೆಯೇ ರಾಷ್ಟ್ರೀಯ ಇತಿಹಾಸದ ಅರಿವೂ ಇರುವುದಿಲ್ಲ. “ನಮ್ಮ ದೇಶ ಸ್ವಾತಂತ್ರ್ಯ ಪಡೆದಿದ್ದು ಯಾವಾಗ?” ಎಂತ ಕೇಳಿದರೆ ಅಚ್ಚರಿಯಿಂದ “ಹೌದೇ? ಸ್ವತಂತ್ರವಾಗಿದೆಯೆ? ಯಾವಾಗ ಮಾರಾಯ?” ಎಂದು ಪಕ್ಕದವನಲ್ಲಿ ಕೇಳಿದ ಪ್ರಸಂಗಗಳು ದೃಶ್ಯವಾಹಿನಿಗಳಲ್ಲಿ ಬಿತ್ತರವಾಗುತ್ತವೆ. ದೇಶದ ಅಖಂಡತೆ, ಸಾರ್ವಭೌಮತೆ, ಸಾಂಸ್ಕೃತಿಕ ಸಾರೂಪ್ಯತೆ, ಪರಂಪರೆಯ ಅನನ್ಯತೆ, ವಿಭಿನ್ನತೆಯಲ್ಲಿ ಏಕತೆ, ದೀರ್ಘ ಇತಿಹಾಸದ ದಾಖಲೆ  ಇತ್ಯಾದಿ ಪರಿಕಲ್ಪನೆಗಳ ಪರಿಚಯವನ್ನೇ ಹೊಂದಿರುವುದಿಲ್ಲ. ಸಮೃದ್ಧ ಭಾರತವು ವಿದೇಶೀಯರ ಆಳ್ವಿಕೆಯಲ್ಲಿ ಬಡತನಕ್ಕೆ ಇಳಿದದ್ದು, ಬ್ರಿಟಿಷರ ಆಡಳಿತದಲ್ಲಿ ಸೂರೆಗೆ ಒಳಗಾದದ್ದು, ಸುದೀರ್ಘ ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಮಜಲುಗಳು, ಸ್ವತಂತ್ರ ಭಾರತ ಎದುರಿಸಿದ ಸವಾಲುಗಳು ಇವು ಯಾವುವೂ ಯುವಜನರ ಪ್ರಜ್ಞೆಯ ಪಾತಳಿಯಲ್ಲಿ ಇಲ್ಲ. ಇದೆಲ್ಲವೂ ಅವರ ಪಾಠಗಳಲ್ಲಿ ಇರುತ್ತದೆ, ಆದರೆ  ಅವರ ಕಲಿಕೆಯ ಸಿಲೆಬಸ್ ನಿಂದ ತಪ್ಪಿಹೋಗಿರುತ್ತದೆ. ಅವರಿಗೆ “ನಿನ್ನೆ ಮತ್ತು ನಾಳೆಗಳನ್ನು ಬಿಟ್ಟು, ಇಂದಿನ ದಿನದಲ್ಲಿ ಬದುಕಿ” ಎಂಬ ಪಾಠ ಆಗಿದೆ. ಹಾಗಾಗಿ ಭಾರತ ಹೇಗಿದ್ದರೇನು? ಅದರ ಬಗ್ಗೆ ಯೋಚಿಸಿ ಫಲವೇನು? ಆಗಬೇಕಾದ ಹಾಗೆ ಆಗುತ್ತದೆ ಎಂಬ ನಿರ್ಲಪ್ತತೆ ಅವರಲ್ಲಿದೆ. ಈ ಮನೋಧರ್ಮವೇ ಆಧುನಿಕ ಯುಗದ ಭಾರತದ ಪ್ರಜೆಯ ವ್ಯಕ್ತಿತ್ವವನ್ನು ರೂಪಿಸುತ್ತಿದೆ. ಹಾಗಾಗಿ ವೈಯಕ್ತಿಕತೆ (Individualism) ಹಾಗೂ ಹಣವೇ ಜೀವನದ ಲಕ್ಷ್ಯವಾಗಿದೆ. ದೇಶಭಕ್ತಿ, ಸಮಾಜಸೇವೆ, ಸಹಕಾರ, ಸಮಾನತೆ, ಪ್ರಾಮಾಣಿಕತೆ ಮುಂತಾದುವುಗಳು ತೋರ್ಪಡಿಕೆಯ ವರ್ತನೆಗಳಾಗಿವೆ.
ಆಧುನಿಕ ಭಾರತದ ಪ್ರಜೆಯು ಕಡಿಮೆ ದುಡಿಮೆಗೆ ಹೆಚ್ಚು ವೇತನವನ್ನು ಅಪೇಕ್ಷಿಸುತ್ತಾನೆ. ತಾನು ಪಡೆಯುವ ವಸ್ತುಗಳ ಮೇಲೆ ಡಿಸ್ಕೌಂಟನ್ನು ಮತ್ತು ತಾನು ಕೊಡುವ ವಸ್ತುಗಳ ಮೇಲೆ  ಕಮಿಶನನ್ನು ಬಯಸುತ್ತಾನೆ. ತನ್ನ ಹೊಣೆಗಾರಿಕೆಗಳ ನಿರ್ವಹಣೆಯಲ್ಲಿ ಜಿಪುಣತನವನ್ನು ಹಾಗೂ ಸೌಲಭ್ಯಗಳ ಮತ್ತು ವೇತನದ ಲೆಕ್ಕಾಚಾರದಲ್ಲಿ ಅರ್ಹತೆಗೆ ಮೀರಿದ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾನೆ. ಹಕ್ಕುಗಳ ಆಯ್ಕೆಯಲ್ಲಿ ಸ್ವಂತ ಸುಖವನ್ನು ಅಪೇಕ್ಷಿಸುತ್ತ ತಾನು ಕರ್ತವ್ಯಗಳ ಅವಗಣನೆ ಮಾಡಿದಾಗ ಕ್ಷಮೆಯನ್ನು ಬಯಸುತ್ತಾನೆ. ಕಠಿಣ ಪ್ರಯತ್ನ ಮಾಡಬೇಕಾದಲ್ಲಿ ಸುಲಭಶೀಲತೆಯ ದಾರಿ ಹಿಡಿದು ಗ್ರೇಸ್ ಮಾರ್ಕ್ ಗಳ ಬಲದಿಂದ ತೇರ್ಗಡೆಯಾದ ವಿದ್ಯಾರ್ಥಿಯ ಜಡ ಮನಸ್ಸೇ ಭಾರತೀಯ ಯುವಜನರ ಜೀವನ ದೃಷ್ಠಿಯನ್ನು ನಿರೂಪಿಸುತ್ತಿರುವ ದುರಂತ ಕಂಡು ಬರುತ್ತಿದೆ.
ಹಳ್ಳಿಯ ಬದುಕನ್ನು ಮತ್ತು ಮೈ ಮುರಿದು ದುಡಿಯಬೇಕಾದ ಕೃಷಿ ಕೆಲಸಗಳನ್ನು ತಿರಸ್ಕರಿಸುವ ಆಧುನಿಕ ಯುವಪ್ರಜೆಯು ನಿರುದ್ಯೋಗಿಯಾಗಿ ದಿನಕಳೆಯಲು ಸಿದ್ಧನಿರುತ್ತಾನೆ. ಆದರೆ ತನ್ನಿಂದ ಸಾಧ್ಯವಾಗುವ ಬೇರೆನಾದರೂ ಉದ್ಯೋಗಕ್ಕೆ ಸೇರಿ ಸಂಪಾದನೆಗೆ ತೊಡಗುವುದಿಲ್ಲ. ಸರಿಯಾಗಿ ಕೆಲಸ ಮಾಡಿ ಕೌಶಲವನ್ನು ಗಳಿಸಿದರೆ ಯಾವುದೇ ಉದ್ಯೋಗದಲ್ಲಿ ಉನ್ನತಿಯನ್ನು ಸಾಧಿಸಬಹುದು ಎಂಬ ಸಲಹೆ ಆತನಿಗೆ ಪಥ್ಯವಾಗುವುದಿಲ್ಲ. ತಂದೆ-ತಾಯಿಯ ಜತೆಯಲ್ಲಿರುವ ಕೃಷಿಕ ಉದ್ಯೋಗದ ಹುಡುಗನನ್ನು ಮದುವೆಯಾಗಲು ಹೆಣ್ಣು ಇಷ್ಟ ಪಡದಿರುವುದಷ್ಟೇ ಅಲ್ಲ, ಆಕೆಯ ಹೆತ್ತವರೂ ಅಂತಹ ಸಂಬಂಧ ಇಷ್ಟ ಪಡುವುದಿಲ್ಲ.  ಈ ಮನೋಧರ್ಮದ ಆಧುನಿಕ ಯುಗದ ಭಾರತೀಯ ಪ್ರಜೆ ಮುಂದೆ ತಮ್ಮ ಪೀಳಿಗೆಗೆ ಕೊಡುವುದಕ್ಕಾದರೂ ತಮ್ಮಲ್ಲಿ ಏನು ಉಳಿದಿರುತ್ತದೆಂದು ಯೋಚಿಸುವುದಿಲ್ಲ.
ಸ್ವಾತಂತ್ರ್ಯದ ಪೂರ್ವದಲ್ಲಿ ಭಾರತೀಯ ಪ್ರಜೆಯಲ್ಲಿ ಸಾಮುದಾಯಿಕ ಅಭಿವೃದ್ಧಿಯ ಚಿಂತನೆ ಇತ್ತು. ಸ್ವಾತಂತ್ರ್ಯ ಪಡೆದ ನಂತರದ ನಾಲ್ಕೈದು ದಶಕಗಳಲ್ಲಿಯೂ ಅದು ಮುಂದುವರಿದಿತ್ತು. ಉದಾಹರಣೆಗೆ ಊರಿನ ಗಣ್ಯರು ಶಾಲೆಗೆ, ಸಹಕಾರಿ ಸಂಘಕ್ಕೆ, ಯುವಜನ ಚಟುವಟಿಕೆ ಮುಂತಾದುವುಗಳಿಗೆ ಸ್ಥಳದಾನ ಮಾಡುತ್ತಿದ್ದರು. ಆದರೆ ಖಾಸಗೀಕರಣದ ಬಳಿಕ ಇಂತಹ ದಾನಗಳಿಗೆ ಸಾರ್ವಜನಿಕರ ಕೃತಜ್ಞತೆಯೂ ಕಡಿಮೆಯಾಯಿತು, ದಾನ ಕೊಡುವ ಮನಸ್ಸೂ ಇಲ್ಲವಾಯಿತು. ರಾಜಕಾರಣಿಗಳ ಹಾಗೂ ಅಧಿಕಾರಿ ವರ್ಗದ ಔಪಚಾರಿಕ ವ್ಯವಹಾರಗಳು ಜನರಲ್ಲಿಯೂ ಸ್ವಾರ್ಥ ಚಿಂತನೆಯನ್ನು ಮೂಡಿಸಿತು. ಈಗ ಎಲ್ಲವೂ ಕ್ರಯ ಕೊಟ್ಟು ಪಡೆಯುವ ಪ್ರಪಂಚವಾಯಿತು.  ಇದು ಕೌಟುಂಬಿಕ ಸಂಬಂಧಗಳಲ್ಲಿಯೂ ನುಸುಳಿ ಮಕ್ಕಳಿಗೆ ಆಸ್ತಿ ಪಾಲು ಮಾಡುವಾಗ ತಮಗೂ ಒಂದು ಪಾಲನ್ನು ಹೆತ್ತವರು ಇಟ್ಟುಕೊಳ್ಳುವ ಪರಿ ಶುರುವಾಯಿತು. ಏಕೆಂದರೆ ಸ್ವಂತ ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮನ್ನು ಗೌರವಯುತವಾಗಿ ಸಾಕುವರೆಂಬ ವಿಶ್ವಾಸ ಇಲ್ಲದಂತಾಯ್ತು. ಹೀಗೆ ಭಾರತದ ಪ್ರಜೆಯ ಪ್ರಜ್ಞೆಯ ನೆಲೆಯಲ್ಲಿ ಅನೇಕ ಪರಿವರ್ತನೆಗಳಾದುವು. ಸರಕಾರದಿಂದ ಸಹಾಯಧನ ಪಡೆಯಲು ಅರ್ಜಿ ಹಾಕುವಲ್ಲಿ, ಗ್ಯಾರಂಟಿ ಸ್ಕೀಮ್‍ಗಳ ಫಲಾನುಭವಿಗಳಾಗುವಲ್ಲಿ, ಅಭಿವೃದ್ಧಿ ಯೋಜನೆಗಳ ಹಣ ಲಪಟಾಯಿಸುವಲ್ಲಿ ಯಾವುದೇ ಮುಜುಗರಗಳಿಲ್ಲದ ಇಂದಿನ ಭಾರತೀಯ ಪ್ರಜೆಯ ನಡೆ ವಿಶ್ವಗುರುವಾಗುವತ್ತ ಇದೆಯೇ? ಅಥವಾ ಮತ್ತೊಮ್ಮೆ ಪರಾವಲಂಬಿಯಾಗುವ ಕಡೆಗಿದೆಯೇ ಎಂಬುದು ಚಿಂತನೀಯ ಸಂಗತಿ.
ಬರಹ :
ಚಂದ್ರಶೇಖರ ದಾಮ್ಲೆ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ
ಹಲವಾರು ಸವಾಲುಗಳ ನಡುವೆ ಅಡಿಕೆ ಬೆಳೆ ಭವಿಷ್ಯವೇನು…?
November 3, 2024
7:08 AM
by: ಪ್ರಬಂಧ ಅಂಬುತೀರ್ಥ
ಭಾರತೀಯ ಪ್ರಜೆ
October 31, 2024
6:25 AM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆಗೆ ಗುಟ್ಕಾ ನಂಟು ಶಾಶ್ವತವಲ್ಲ | ಅಡಿಕೆಯ ಹಿಂದಿನ ಕಾಲದ ವೈಭವ ಮರಳಿ ಪಡೆಯಲು ಏನು ಮಾಡಬಹುದು..?
October 26, 2024
11:04 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror