ಆತ್ಮನಿರ್ಭರ ಗೋವಂಶ | ಮಲೆನಾಡಗಿಡ್ಡ ಹಸು ನಮಗೆ ಹಲವು ಪಾಠ ಕಲಿಸಬಲ್ಲವು..!

May 9, 2024
7:50 PM
ಮಲೆನಾಡು ಗಿಡ್ಡ ತಳಿ ವಿಶೇಷತೆ ಹಾಗೂ ಭಾರತೀಯ ಗೋತಳಿ ಉಳಿವಿಗೆ ಪ್ರಯತ್ನ ನಡೆಯಬೇಕಿದೆ.

ಹಿಂದೆಲ್ಲ ದಕ್ಷಿಣಕನ್ನಡ ಜಿಲ್ಲೆಯ ಗದ್ದೆಯಲ್ಲಿ ಅಡಿಕೆ ಗಿಡ ನೆಡ್ತಾ ಹೋದಂತೆ ಸ್ವಲ್ಪ ಹಳಬರು ಗದ್ದೆ ಇಲ್ಲ ಅಂತಾದ್ರೆ ಊಟಕ್ಕೇನು ಮಾಡುವುದು ಅಂತ ಚಿಂತಿಸ್ತಿದ್ರು. ಅಂದ್ರೆ ಆಗ ಸರಕು ಸಾಗಣೆಯ ವ್ಯವಸ್ಥೆ ಇನ್ನೂ ಪ್ರಾರಂಭ ಕಾಲದಲ್ಲಿದ್ದಾಗ ಬೇರೆ ಊರಿನಿಂದ ಅರ್ಥಾತ್ ಭತ್ತ ಬೆಳೆಯುವ ಪ್ರದೇಶದಿಂದ ಭತ್ತ ಇಲ್ಲಿಗೆ ಬಂದು ಅಕ್ಕಿಯಾಗಿ ಜನರಿಗೆ ಲಭ್ಯವಾಗುವುದು ಕಠಿಣವಾಗಿದ್ದ ಕಾಲದಲ್ಲಿ ಬದುಕಿದವರು ಈ ಮನಸ್ಥಿತಿ ಹೊಂದಿದ್ರು. ಆದ್ರಿಂದ ಅಡಿಕೆ ಬೆಳೆದ್ರೂ ಮನೆ ಮಂದಿಯ ಊಟಕ್ಕೆ ಬೇಕಾದ ಅಕ್ಕಿಗಾಗಿ ಗದ್ದೆ ಉಳಿಸಿಕೊಳ್ತಿದ್ದರು. ಕಾಲಕ್ರಮೇಣ ಅಡಿಕೆ ಲಾಭದಾಯಕ ಭತ್ತ ವೆಚ್ಚದಾಯಕ ಅನ್ನು ಪರಿಸ್ಥಿತಿ ಬಂದಾಗ ಅಡಿಕೆ ಮಾರಿ ಅಕ್ಕಿ ತರಬಹುದು ಅಂತಾದಾಗ ಗದ್ದೆಯ ಭದ್ರತೆ ಗೌಣವಾಯಿತು.

Advertisement

ದಕ್ಷಿಣ ಕನ್ನಡದ ಮಿಲ್ಲುಗಳಿಗೆ ಕುಚ್ಚುಲಕ್ಕಿ ಮಾಡುವ  ಭತ್ತ ಘಟ್ಟದ ಮೇಲಿಂದ ಬರಲು ಆರಂಭ ಆಯಿತು.ಸೊಪ್ಪು ಸೌದೆಗಾಗಿ ಇದ್ದ ಗುಡ್ಡಗಳು ಅಡಿಕೆ ತೋಟಗಳೋ ರಬ್ಬರ್ ತೋಟಗಳೋ ಆಗಿ ಪರಿವರ್ತನೆಯಾದವು. ಗದ್ದೆಗಳಿದ್ದಾಗ ಗೊಬ್ಬರಕ್ಕಾಗಿ ದನಕರುಗಳೂ ಹೂಟೆಗಾಗಿ ಹೋರಿಗಳೂ ಬೇಕಾಗಿದ್ದವು. ಉಳುವ ಕೆಲಸ ಇಲ್ಲದಿದ್ದರೂ ಗೋವಂಶಾಭಿವೃದ್ಧಿಗಾಗಿ ಹೋರಿಗಳು ಬೇಕಾಗಿದ್ವು. ಅವುಗಳ ಅಗತ್ಯತೆ ಕೃತಕ ಗರ್ಭಧಾರಣೆ ವ್ಯವಸ್ಥೆ ಬಂದ ಮೇಲೆ ಇಲ್ಲವಾಯಿತು. ಹತ್ತಾರು ಸಾಕುವಲ್ಲಿ ಬರುವ ಆದಾಯ ಒಂದೆರಡು ತಳಿ ಉತ್ತಮೀಕರಿಸಿದ ಬ್ರೀಡ್ ಗಳಲ್ಲಿ ಬರುತ್ತದೆ ಅಂತಾಯ್ತು. ಕಾಟು ಪೆತ್ತಗಳು 407 ಗಳಿಗೆ ಲೋಡಾಗಲಾರಂಭವಾಯಿತು.

ಬೆಳಗ್ಗೆ ಹಗ್ಗ ಬಿಚ್ಚಿದರೆ ಗುಡ್ಡ ಮೇಡು ತಿರುಗಿ ಹೊಟ್ಟೆತುಂಬಿಸಿಕೊಂಡು ಬಂದು ಕೊಡ್ತಿದ್ದ ಅಮೂಲ್ಯ ಕುಡ್ತೆ ಹಾಲು ಮೌಲ್ಯ ಕಳಕೊಂಡಿತು. ದಪ್ಪ ಕಾಫಿಗಾಗಿ,ಸ್ಟ್ರಾಂಗ್ ಚಹಕ್ಕಾಗಿ,ಸೇರು ತುಪ್ಪಕ್ಕಾಗಿ,ಹೈನುಗಾರಿಕೆ ಉದ್ಯಮಕ್ಕಾಗಿ ಜೆರ್ಸಿ ಎಚ್ಚೆಫ್ ಗಳು ಅತ್ಯಾಪ್ತವಾಗಲಾರಂಭಿಸಿದವು. ಆಧುನಿಕ ಕ್ರಾಂತಿ,ಆರ್ಥಿಕತೆಯ ದೃಷ್ಟಿಕೋನ ,ಸರಕಾರೀ ಸಹಕಾರೀ ಸಂಸ್ಥೆಗಳ ಪ್ರೋತ್ಸಾಹ-ಜನರ ಉಲ್ಲಾಸ ಎಲ್ಲದರ ಮುಂದೆ ಮಲೆನಾಡ ಗಿಡ್ಡಗಳಿಗೆ ಅಡಿಯಷ್ಟೂ ಜಾಗ ಕೊಡಲು ಮನಸೇ ಬರಲಿಲ್ಲ. ತನ್ನ ಬದುಕಿಗೆ ಯಾರನ್ನೂ ಅವಲಂಬಿಸದೆ ಜೀವನ ಮಾಡಬಲ್ಲ. ಔಷಧ ಬೇಡದ,ಮಳೆ ಗಾಳಿ ಚಳಿಗೆ ಜಗ್ಗದ,ತಿಂಗಳುತುಂಬಿದ ಹಸುವೂ ಗುಡ್ಡದಲ್ಲೆಲ್ಲೋ ಕರು ಹಾಕಿ ಕರು ಸಮೇತ ಮನೆಯ ಹಾದಿ ಹಿಡಿಯಬಲ್ಲ ಸ್ವಾವಲಂಬಿ ಆತ್ಮನಿರ್ಭರ ಗೋ ತಳಿಯೊಂದು ಕಣ್ಮುಂದೆಯೇ ಮರೆಯಾಗಲು ಅದರ ಗೊಬ್ಬರದಿಂದಲೇ ಬೆಳೆದ ಅನ್ನವನ್ನುಂಡ ಮನುಷ್ಯನೆಂಬ ಸ್ವಾರ್ಥಿಯೇ ಕಾರಣವೆಂದರಿತರೆ ಮನುಷ್ಯನಿಗೆ ಇರಬೇಕಾದ ಮಾನವೀಯತೆ ಇದೆ ಎನ್ನಬೇಕೆ ಮಾನವಾಕೃತಿ ಮಾತ್ರವೆನ್ನಬೇಕೇ?.

ಪರಾವಲಂಬಿಗಳಾದ ನಮಗೆ ಹೆಚ್ಚಿನವರಿಗೆ ಇಂದು ನಮ್ಮ ನಿತ್ಯದ ಚಟುವಟಿಕೆಗಳು ಆರಂಭವಾಗುವುದೇ ಒಂದ್ಲೋಟ ಚಹ ಅಥವಾ ಕಾಫಿಯಿಂದ. ಅನೇಕ ಮನೆಗಳಲ್ಲಿ ಬೆಳಗ್ಗೆ ಪೇಪರ್ ಮತ್ತು ಹಾಲು ಅನಿವಾರ್ಯ ವಸ್ತುಗಳು. ಹಾಲಿಲ್ಲದೆ ಕಪ್ಪು ಚಹ ಅಥವಾ ಕಪ್ಪು ಕಾಫಿ ಕುಡಿಯುವವರೂ ಇದ್ದಾರೆ ಬಿಡಿ. ಆದರೆ ಹಾಲು ಮೊಸರು ಮಜ್ಜಿಗೆ ತುಪ್ಪಗಳು ಅನೇಕರ ಅವಿಭಾಜ್ಯ ಅಂಗಗಳಂತೂ ಹೌದು. ನನ್ನ ಬಾಲ್ಯದಲ್ಲಿ ಒಂದು ಲೋಟ ಕಾಫಿಗೆ ಎರಡು ಚಮಚೆ ಹಾಲು ಸಾಕಾಗ್ತಿತ್ತು. ಅಥವಾ ಲಭ್ಯತೆ ಅಷ್ಟೇ ಇತ್ತು ಅಂತ ಅಂದುಕೊಳ್ಳೋಣ. ಹತ್ತಾರು ಮನೆಮಂದಿಯ ಅಗತ್ಯಕ್ಕೆ ಬೇಕಾದ ಹಾಲು ಮಜ್ಜಿಗೆ ತುಪ್ಪಗಳಿಗಾಗಿ ಒಂದಷ್ಟು ಹಸುಗಳು ,ಎಮ್ಮೆಗಳು,ಹೂಟೆಗೆ ಹೋರಿಗಳು ಇವೆಲ್ಲಾ ಇದ್ದರೆ ಅಂತಹ ಮನೆ ಸಾಕಷ್ಟು ಅನುಕೂಲಸ್ಥರ ಮನೆ ಅಂತಲೇ ಪರಿಗಣನೆ. ಸಂಪತ್ತಿನ ಧಾರಳತೆಗೆ ಗೋವುಗಳ ಸಂಖ್ಯೆಯೂ ಒಂದು ಮಾನದಂಡ. ಕೆಲವು ಊರುಗಳಲ್ಲಿ ಹಾಲು ಮಜ್ಜಿಗೆ ತುಪ್ಪಗಳು ಬೇಕಾದರೆ ಸಿಗುವ ಮನೆ ಅಂತಲೂ ಇತ್ತು. ಆದ್ರೆ ಮಾರಾಟ ಅಲ್ಲ. ನೆಂಟರಿಷ್ಟರ ಕಾರ್ಯಕ್ರಮಗಳಲ್ಲಿ ಪರಸ್ಪರ ವಿನಿಮಯವೂ ಆಗ್ತಿತ್ತು. ಗಂಡು-ಹೆಣ್ಣಿ ನ ವಿವಾಹ ಸಂಬಂಧಗಳಾಗುವಾಗಲೂ ಜಾನುವಾರುಗಳೆಷ್ಟಿವೆ ಅಂತ ಕೇಳುವ  ಹೇಳುವ ವಾಡಿಕೆ ಇತ್ತು.ಇಂದು ಹಸು ಇರುವ ಮನೆಗೆ ಹೆಣ್ಣು ಸಿಗದು. ದನಕರುಗಳಿವೆ ಅಂತದ್ರೆ ಸಾಕುವವರಿಗಿಂತ ಎಷ್ಟಿವೆ? ಯಾರ ಕೆಲ್ಸ ಮಾಡುವುದು?ಎಂತ ಕಥೆ?ಹೀಗೆಲ್ಲಾವಿಚಾರಿಸುವವರೇ ತಲೆಬಿಸಿ ಮಾಡಿಕೊಳ್ತಾರೆ.

ಆಂಡ್ರಾಯಿಡ್ ಮೊಬೈಲು ಬರೋದಕ್ಕಿಂತ ಮೊದಲು ಡೈರಿಗರ ಅಚ್ಚುಮೆಚ್ಚಿನ ಜೆರ್ಸಿ ಎಚ್ಚೆಫ್ ಗಳು ಮನೆ ಮಂದಿಯನ್ನೆಲ್ಲಾ ಹಾಲುಮಜ್ಜಿಗೆಯಲ್ಲೇ ಕೈ ತೊಳೆಯುವಂತೆ ಮಾಡಿದರೂ ಈಗ ಅವುಗಳೂ ಬೇಡ,ಪ್ಯಾಕೆಟ್ ಸಾಕಾಗಿದೆ. ಹಿಂದೆ ಕಣ್ಣ(ಕಪ್ಪು/ಹಾಲು ಹಾಕದ) ಕಾಪಿ ಚಹ ಕುಡೀತಿದ್ದವರು ಹಾಲಿನಲ್ಲೇ ಕುದಿಸಿದ ಚಹ ಆಗಬೇಕೆಂಬಲ್ಲಿವರೆಗೆ  ಪರಿಸ್ಥಿತಿ ಬಂತು.
ಯಾಕೋ ಗೊತ್ತಿಲ್ಲ ದಿನಕ್ಕೊಂದು ಲೋಟ ಹಾಲು ಕುಡಿದು ಆರೋಗ್ಯವಂತರಾಗಬೇಕಿತ್ತು. ಆದ್ರೆ ಮೂವತ್ತಕ್ಕೆಲ್ಲಾ ಶುಗರ್ ಬಿಪಿಯವರು ಹೆಚ್ಚಾದರು. ಒಂದು ಅಧ್ಯಯನದ ಪ್ರಕಾರ ಹಿಂದಿಗಿಂತ ಇಂದು ಮರಣ ಪ್ರಮಾಣ ಕಡಿಮೆಯಂತೆ. ಅಂದ್ರೆ ಅತ್ತ ಸಾಯದೆ ಇತ್ತ ಆರೋಗ್ಯವಂತರಾಗಿ ಬದುಕದೆ, ರೋಗಸಾಕುವ ಪರಿಸ್ಥಿತಿ ಬಂದೊದಗಿದೆ ಎಂಬ ಅಧ್ಯಯನ ಬಹುಶಃ ಯಾರೂ ಮಾಡಿಲ್ಲಾಂತ ಕಾಣ್ತದೆ.

ಇಂತಹ ಅವಲೋಕನ ಮಾಡಿದರೆ ಆತ್ಮನಿರ್ಭರವಾಗಿ ಬದುಕಬಲ್ಲ ಅಳಿದುಳಿದ ಮಲೆನಾಡಗಿಡ್ಡಗಳು ನಮಗೆ ಹಲವಾರು ಪಾಠ ಕಲಿಸಬಲ್ಲವು. ನೀನಾರಿಗಾದೆಯೋ ಎಲೆ ಮಾನವಾ ಎಂದು ಕೇಳಬಲ್ಲವು. ನೋಡುವ ಕಣ್ಣು ಕೇಳುವ ಕಿವಿ,ಗಳಲ್ಲದೆ ವಿಶೇಷವಾಗಿ ಆಡುವ ಮಾತಿನ ಸೌಕರ್ಯವುಳ್ಳ ಮಾನವ ತನ್ನ ಇರವ ಅರಿಯಬೇಡವೇ?….  ॥ಶಂ ನ ಏಧಿ ದ್ವಿಪದೇ ಶಂ ಚತುಷ್ಪದೇ॥

ಬರಹ :
ಮುರಲೀಕೃಷ್ಣ.ಕೆ.ಜಿ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಮಸಾಲಾ ಪಲ್ಯ
April 12, 2025
8:00 AM
by: ದಿವ್ಯ ಮಹೇಶ್
ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?
April 10, 2025
8:30 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಅಳತೆ ಬಲ್ಲವ ಅಡುಗೆಯ ನಳಮಹಾರಾಜ…..
April 9, 2025
9:00 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group