ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಭಾರತದಲ್ಲಿ ಮಾರುತ (Monsoon) ಮಳೆಯ ಸ್ವಭಾವವೇ ಬದಲಾಗುತ್ತಿದ್ದು, ಕಡಿಮೆ ಅವಧಿಯಲ್ಲಿ ಭಾರೀ ಮಳೆಯ ಘಟನೆಗಳು ಹೆಚ್ಚಾಗುತ್ತಿರುವುದಾಗಿ ಹೊಸ ಅಧ್ಯಯನ ಎಚ್ಚರಿಸಿದೆ.
ಉಪಗ್ರಹ ಮಾಹಿತಿಯನ್ನು ಆಧರಿಸಿ ನಡೆದ ಅಧ್ಯಯನದಲ್ಲಿ ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಆಳವಾದ ಮಾರುತ ಮಳೆಮೋಡಗಳು (Deep convective clouds) ಹೆಚ್ಚಿನ ಎತ್ತರಕ್ಕೆ ಏರುತ್ತಿದ್ದು ಹಾಗೂ ಅವುಗಳ ಪ್ರಮಾಣ ಹೆಚ್ಚುತ್ತಿರುವುದು ಕಂಡುಬಂದಿದೆ. ಈ ಮೋಡಗಳು ಸಾಮಾನ್ಯವಾಗಿ ತೀವ್ರ ಮಳೆಯೊಂದಿಗೆ ಸಂಬಂಧ ಹೊಂದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಂಶೋಧಕರು 1998 ರಿಂದ ಉಪಗ್ರಹಗಳಿಂದ ಸಂಗ್ರಹಿಸಿದ ಮಾಹಿತಿ ಹಾಗೂ ಹವಾಮಾನ ಮರುಪರಿಶೀಲನೆ ಡೇಟಾವನ್ನು ವಿಶ್ಲೇಷಣೆ ಮಾಡಿ ಈ ಬದಲಾವಣೆಗಳನ್ನು ಗುರುತಿಸಿದ್ದಾರೆ. ಈ ಅಧ್ಯಯನದ ಪ್ರಕಾರ 2000 ರಿಂದ 2020 ರವರೆಗೆ ಮಾರುತ ಮಳೆಯ ತೀವ್ರ ಘಟನೆಗಳ ಪ್ರಮಾಣ ಸ್ಪಷ್ಟವಾಗಿ ಹೆಚ್ಚಾಗಿದೆ.
ವಿಜ್ಞಾನಿಗಳ ಪ್ರಕಾರ ವಾತಾವರಣದ ತಾಪಮಾನ ಹೆಚ್ಚಾದಂತೆ ಗಾಳಿಯಲ್ಲಿ ಹೆಚ್ಚು ನೀರು ಉಳಿಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ತಾಪಮಾನ 1°C ಏರಿದರೆ ಗಾಳಿಯಲ್ಲಿ ಸುಮಾರು 7% ಹೆಚ್ಚು ನೀರಿನ ಅಂಶ ಹಿಡಿದಿಡಲು ಸಾಧ್ಯ. ಇದರ ಪರಿಣಾಮವಾಗಿ ಮಳೆ ಬಂದಾಗ ಅದು ಹೆಚ್ಚು ತೀವ್ರವಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮಾರುತ ಮಳೆಯ ಸ್ವರೂಪದಲ್ಲೇ ಬದಲಾವಣೆ ಕಂಡುಬರುತ್ತಿದ್ದು, ಹಿಂದೆ ನಿಧಾನವಾಗಿ ಹರಡುವ ಮಳೆಯ ಬದಲು ಈಗ ಕಡಿಮೆ ಅವಧಿಯಲ್ಲಿ ಭಾರೀ ಮಳೆಯ ಘಟನೆಗಳು ಹೆಚ್ಚಾಗುತ್ತಿವೆ ಎಂದು ಅಧ್ಯಯನ ಸೂಚಿಸಿದೆ.
ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ 2010 ಅಥವಾ 2015 ನಂತರ ಈ ತೀವ್ರ ಘಟನೆಗಳು ಹೆಚ್ಚು ಗಮನಾರ್ಹವಾಗಿವೆ. ಇದು ಹವಾಮಾನ ವ್ಯವಸ್ಥೆಯಲ್ಲೇ ಒಂದು ಮಹತ್ವದ ಬದಲಾವಣೆ ಸಂಭವಿಸಿರುವ ಸೂಚನೆಯಾಗಿರಬಹುದು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಮಾರುತ ಮಳೆ ಕೃಷಿ, ನೀರು ಸಂಪನ್ಮೂಲ ಹಾಗೂ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಈ ಬದಲಾವಣೆಗಳು ರೈತರು ಮತ್ತು ಸರ್ಕಾರಗಳಿಗೆ ದೊಡ್ಡ ಸವಾಲು ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಬೆಳೆಗಳಿಗೆ ಸಂಭವಿಸಬಹುದಾದ ಪರಿಣಾಮಗಳು:
ಬೆಳೆ ಹಾನಿ ಹೆಚ್ಚಳ : ತೀವ್ರ ಮಳೆಯ ಪರಿಣಾಮವಾಗಿ ಅಕ್ಕಿ, ಅಡಿಕೆ, ಮೆಣಸು, ತೆಂಗು ಸೇರಿದಂತೆ ಹಲವು ಬೆಳೆಗಳಲ್ಲಿ ನೀರು ನಿಂತು ಬೇರು ಹಾನಿ ಸಂಭವಿಸಬಹುದು.
ಮಣ್ಣಿನ ಧೂಳೆ (Soil erosion) : ಭಾರೀ ಮಳೆಯ ಪರಿಣಾಮವಾಗಿ ಬೆಟ್ಟ ಪ್ರದೇಶಗಳು ಹಾಗೂ ತೋಟ ಪ್ರದೇಶಗಳಲ್ಲಿ ಮಣ್ಣು ಹರಿದು ಹೋಗುವ ಸಾಧ್ಯತೆ ಹೆಚ್ಚುತ್ತದೆ.
ಪೋಷಕಾಂಶಗಳ ನಷ್ಟ : ಮಣ್ಣುಗಳಲ್ಲಿ ಇರುವ ಪ್ರಮುಖ ಪೋಷಕಾಂಶಗಳು ಮಳೆಯೊಂದಿಗೆ ಹರಿದು ಹೋಗಿ ಬೆಳೆ ಉತ್ಪಾದನೆ ಕಡಿಮೆಯಾಗಬಹುದು. ಗಿಡಗಳಿಗೆ ಪೋಷಕಾಂಶ ಕೊರತೆ ಕಾಡಬಹುದು.
ರೋಗ ಮತ್ತು ಕೀಟ ಸಮಸ್ಯೆ : ಅತಿಯಾದ ತೇವಾಂಶದ ಪರಿಸ್ಥಿತಿಯಲ್ಲಿ ಹಲವು ಬೆಳೆ ರೋಗಗಳು ಹಾಗೂ ಕೀಟ ದಾಳಿ ಹೆಚ್ಚಾಗುವ ಸಾಧ್ಯತೆ ಇದೆ. ಕಾಡಿನ ಅಂಚಿನ ಪ್ರದೇಶಗಳಲ್ಲಿ ಈ ಸಾಧ್ಯತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರೈತರಿಗೆ ಬೇಕಾಗುವ ಹೊಸ ಕ್ರಮಗಳು : ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ರೈತರು ಮಳೆ ಮಾದರಿಯ ಬದಲಾವಣೆಗೆ ಹೊಂದಿಕೊಳ್ಳುವ ರೀತಿಯಲ್ಲಿ ಕೃಷಿ ಪದ್ಧತಿಗಳನ್ನು ಬದಲಾಯಿಸಬೇಕಾಗಬಹುದು.
-
ಉತ್ತಮ ನೀರು ಹರಿವು ವ್ಯವಸ್ಥೆ (drainage)
-
ಮಣ್ಣಿನ ಸಂರಕ್ಷಣೆ ಕ್ರಮಗಳು
-
ಹವಾಮಾನ ಮಾಹಿತಿ ಆಧಾರಿತ ಕೃಷಿ ಯೋಜನೆ
-
ತೀವ್ರ ಮಳೆಯನ್ನೂ ತಾಳುವ ಬೆಳೆ ತಳಿಗಳ ಅಭಿವೃದ್ಧಿ
ಇಂತಹ ಕ್ರಮಗಳು ಮುಂದಿನ ದಿನಗಳಲ್ಲಿ ಕೃಷಿಯನ್ನು ಸ್ಥಿರಗೊಳಿಸಲು ಸಹಾಯ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
A recent study based on satellite data shows that rising global temperatures are intensifying the Indian monsoon. Warmer air holds more moisture, leading to more frequent deep convective clouds and heavier rainfall events in shorter periods across India.

