ಹವಾಮಾನ ಬದಲಾವಣೆ ಹಾಗೂ ವಾತಾವರಣದ ಕಾರಣದಿಂದ ವಿವಿಧ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಸಮಯದಲ್ಲಿ ಭಾರತೀಯ ಹಣ್ಣಿನ ಬೆಳೆಗಳನ್ನು, ತಾಜಾ ಹಣ್ಣಿನ ಮಾರುಕಟ್ಟೆ ವಿಸ್ತರಣೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಬಗ್ಗೆ ಹೆಜ್ಜೆಗಳನ್ನು ಇಡಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರದ ಅಹಲ್ಯಾನಗರದಿಂದ ಅಮೆರಿಕದ ನ್ಯೂಯಾರ್ಕ್‌ಗೆ 14 ಟನ್‌ಗಳಷ್ಟು ದಾಳಿಂಬೆಯನ್ನು ರಫ್ತು ಮಾಡಲಾಗಿದೆ.ಮಾರುಕಟ್ಟೆ ವಿಸ್ತರಣೆಯ ಬಗ್ಗೆ ಚಿಂತನೆ ನಡೆಯುತ್ತಿದೆ. ಇದರ ಜೊತೆಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳ ರಫ್ತನ್ನು ಉತ್ತೇಜಿಸುವ ಭಾರತ ಸರ್ಕಾರವು ಹಣ್ಣುಗಳು ಹಾಳಾಗದಂತೆ ಎಚ್ಚರವಹಿಸಲು ಕೂಡಾ ತಂತ್ರಜ್ಞಾನಗಳ ಬಗ್ಗೆಯೂ ಸಿದ್ಧತೆ ನಡೆಸುತ್ತಿದೆ.…..ಮುಂದೆ ಓದಿ….
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರದಿಂದ ಅಮೆರಿಕಕ್ಕೆ ಭಾರತೀಯ ದಾಳಿಂಬೆ ಹಣ್ಣಿನ ಮೊದಲ ವಾಣಿಜ್ಯ ಸಮುದ್ರ ಸಾಗಣೆಗೆ ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ ಮಹಾರಾಷ್ಟ್ರದ ಅಹಲ್ಯಾನಗರದಿಂದ ಅಮೆರಿಕದ ನ್ಯೂಯಾರ್ಕ್‌ಗೆ 14 ಟನ್‌ಗಳಷ್ಟು ಭಾರತೀಯ ದಾಳಿಂಬೆಯನ್ನು ರಫ್ತು ಮಾಡಲಾಗಿದೆ. ಇದು ಭಾರತದ ತಾಜಾ ಹಣ್ಣುಗಳ ರಫ್ತಿಗೆ ಮಹತ್ವದ ಹೆಜ್ಜೆಯಾಗಿದ್ದು, ಭಾರತದ ಹಣ್ಣಿನ ಬೆಳೆ ಹಾಗೂ ಕೃಷಿಕರಿಗೆ ಪ್ರಮುಖವಾದ ಸೂಚನೆಯಾಗಿದೆ. ಕೃಷಿಯಲ್ಲಿ ಬದಲಾವಣೆ ಮಾಡುವ ಮೂಲಕ ಹಣ್ಣಿನ ಬೆಳೆಗೂ ಸ್ಥಾನ ನೀಡುವ ಅವಕಾಶವೊಂದು ಸೃಷ್ಟಿಯಾಗುತ್ತಿದೆ.
“ದ ರೂರಲ್ ಮಿರರ್.ಕಾಂ” Update ಪಡೆಯಲು WhatsApp ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..
ಭಾರತದ ತಾಜಾ ಹಣ್ಣುಗಳು ಅಂದರೆ ಪ್ರೀಮಿಯಂ ಗುಣಮಟ್ಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ, ಈಗಿನ ಸಾಗಾಣಿಕೆಯು ಪ್ರಮುಖವಾದ ಪಾತ್ರ ವಹಿಸಿದೆ. ಭಾರತೀಯ ದಾಳಿಂಬೆ ಕೃಷಿಯು ಆದ್ಯತೆಯ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗೆ ಸಾಗಾಟದ ವೇಳೆ ಹಣ್ಣುಗಳು ತಾಜಾತನ ಉಳಿಸಿಕೊಳ್ಳುವುದು ಮತ್ತು ಅವುಗಳ ಮೂಲ ಸ್ವಭಾವ, ಉತ್ಪನ್ನದ ಗುಣಲಕ್ಷಣಗಳನ್ನು ಉಳಿಸಿಕೊಳ್ಳಲು ಕೂಡಾ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ತಂಡವು ಕೆಲಸ ಮಾಡುತ್ತಿದೆ.
2023 ರಲ್ಲಿ ಭಾರತಕ್ಕೆ ದಾಳಿಂಬೆ ಬೆಳೆ ಅಂತರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ , ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ವಿಭಾಗ, ರಾಷ್ಟ್ರೀಯ ಸಸ್ಯ ಸಂರಕ್ಷಣಾ ಸಂಸ್ಥೆ ಮತ್ತು ಸೋಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ ಸಹಯೋಗದೊಂದಿಗೆ ವಾಯುಮಾರ್ಗದ ಮೂಲಕ ವಿದೇಶಕ್ಕೆ ದಾಳಿಂಬೆಯ ಪ್ರಾಯೋಗಿಕ ಸಾಗಣೆ ಮಾಡಿ ಯಶಸ್ವಿಯಾಗಿತ್ತು. ದಾಳಿಂಬೆಗಳು ಸುಮಾರು 60 ದಿನಗಳವರೆಗೆ ಉಳಿಸಿಕೊಳ್ಳಲಿ ಕೆಲವು ಪ್ರಯೋಗವನ್ನು ಐಸಿಎಆರ್-ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಡೆಸಿ 12.6 ಟನ್‌ಗಳಷ್ಟು ದಾಳಿಂಬೆಗಳ ಮೊದಲ ಬಾರಿ ಪ್ರಾಯೋಗಿಕ ಸಮುದ್ರದ ಮೂಲಕ ಯಶಸ್ವಿಯಾಗಿ ಸಾಗಾಟ ಮಾಡಲಾಗಿತ್ತು. ಅದು ಕೂಡಾ ಯಶಸ್ವಿಯಾಗಿದೆ. ನ್ಯೂಯಾರ್ಕ್‌ಗೆ ದಾಳಿಂಬೆ ತಲಪಿದ ಬಳಿಕ ಅಲ್ಲಿನ ಮಾರುಕಟ್ಟೆಯಲ್ಲೂ ಬೇಡಿಕೆ ವ್ಯಕ್ತವಾಗಿತ್ತು. ಭಾರತೀಯ ದಾಳಿಂಬೆಗಳನ್ನು ಅವುಗಳ ರುಚಿಗೆ ಆದ್ಯತೆ ನೀಡಲಾಗಿದೆ. ಅತ್ಯುತ್ತಮ ದಾಳಿಂಬೆ ಎಂದು ವರದಿ ಮಾಡಲಾಗಿದೆ. ಈಗ ಭಾರತ ಸರ್ಕಾರವು ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳನ್ನು ರಫ್ತು ಮಾಡುವ ಬಗ್ಗೆ ವಿಶೇಷ ಆಸಕ್ತಿ ತೋರಿದೆ. ಭಾರತೀಯ ಮಾವುಗಳು ಈಗಾಗಲೇ ಸುಮಾರು 3500 ಟನ್‌ಗಳ ವಾರ್ಷಿಕ ರಫ್ತನ್ನು ತಲುಪಿವೆ. ಮುಂಬರುವ ವರ್ಷಗಳಲ್ಲಿ ದಾಳಿಂಬೆ ಕೂಡಾ ಅದೇ ಮಾದರಿಯ ಬೇಡಿಕೆ ಬರಲಿದೆ ಎನ್ನುವ ನಿರೀಕ್ಷೆ ಅಧಿಕಾರಗಳದ್ದಾಗಿದೆ.
ತೋಟಗಾರಿಕೆ ಬೆಳೆಗಳ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಪ್ರಮುಖವಾಗಿ ದಾಳಿಂಬೆ ಉತ್ಪಾದನೆಯನ್ನು ಮಾಡುತ್ತಿದೆ. ಹೀಗಾಗಿ ಇಲ್ಲಿನ ರೈತರು ಈ ಬಗ್ಗೆ ಯೋಚಿಸಬಹುದಾಗಿದೆ.ಭಾರತೀಯ ದಾಳಿಂಬೆ ಅದರಲ್ಲಿ ವಿಶೇಷವಾಗಿ ಭಗ್ವಾ ದಾಳಿಂಬೆ ತಳಿಯು ಸುವಾಸನೆ, ಗಾಢ ಕೆಂಪು ಬಣ್ಣ ಮತ್ತು ಹೆಚ್ಚಿನ ಪೌಷ್ಟಿಕಾಂಶಕ್ಕೆ ಹೆಸರುವಾಸಿಯಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಳೆ ಹಾಗೂ ಇತರ ಹಣ್ಣುಗಳನ್ನು ಕೂಡಾ ಇದೇ ಮಾದರಿಯಲ್ಲಿ ರಫ್ತು ಮಾಡುವ ಬಗ್ಗೆಯೂ ಯೋಚನೆ ನಡೆಯುತ್ತಿದೆ.
“ದ ರೂರಲ್ ಮಿರರ್.ಕಾಂ” Update ಪಡೆಯಲು WhatsApp ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..