ನಿನ್ನೆಯ ದಿನ ಅಪರೂಪದಲ್ಲೇ ಅಪರೂಪ ಎಂಬಂತ ಮಳೆ. ಒಂದೂವರೆ ಗಂಟೆಯ ಬಿರುಸಿನ ಮಳೆಗೆ ಜಲ ಪ್ರವಾಹವೇ ಬಂದಿತ್ತು. ಹರಿಯಲು ಜಾಗವಿಲ್ಲದೆ ತಾನು ನುಗ್ಗಿದ್ದೇ ಕಣಿಯಾಯ್ತು, ತೋಡಾಯಿತು. ಸದ್ಯದಲ್ಲಿ ಇಷ್ಟು ಭಯಂಕರವಾದ ಮಳೆಯನ್ನು ನಾ ಕಂಡಿಲ್ಲ. ಸಂಜೆ ನಾಲ್ಕು ಗಂಟೆಗೇ ಮುಸ್ಸಂಜೆಯ ಏಳು ಗಂಟೆಯ ಕತ್ತಲು ಕೂಡ ಆವರಿಸಿತ್ತು. ಮಳೆಯ ಬಿರುಸು ಮತ್ತು ಸಿಡಿಲಿನ ಅಬ್ಬರ ಮನೆಯಿಂದ ಹೊರ ಇಣುಕದಂತೆ ತಡೆಹಿಡಿದಿತ್ತು.…..ಮುಂದೆ ಓದಿ….
ಇಂದು ಮಳೆ ಹಾನಿಯನ್ನು ವೀಕ್ಷಿಸುವ ಸಲುವಾಗಿ ತೋಟ, ಗದ್ದೆಗಳಿಗೆ ಸುತ್ತು ಒಂದು ಹೊಡೆದಾಯಿತು. ಅಲ್ಲಲ್ಲಿ ನುಗ್ಗಿದ ನೀರಿಗೆ ಎಷ್ಟೇ ಹುಲ್ಲಿದ್ದರೂ ಬೇರು ಸಹಿತ ಹುಲ್ಲನ್ನು ಕೊಚ್ಚಿ ಕೊಂಡು ಹೋದ ಕುರುಹು ಬಿಟ್ಟರೆ ಬೇರೆ ದೊಡ್ಡ ಅಪಾಯ ನಡೆದಿಲ್ಲ.
ತೆನೆ ಬಂದು ಹಸಿರಿನ ಚೆಲುವೇ ತಾನೆಂದು ಬೀಗುತ್ತಿದ್ದ ಬತ್ತದ ಪೈರು ಹೆಚ್ಚು ಕಮ್ಮಿ ಧರಾಷಾಹಿಯಾಗಿದೆ. ಕೆಲವೊಂದಷ್ಟು ನೆಲಕ್ಕೆ ಅಂಟಿಯು ಹೋಗಿದೆ. ಮಲಗಿದ ಪೈರಿನ ಮೇಲೆ ಮೂರಡಿಯ ಕೆಸರು ನೀರು ನಿಂತು ತನ್ನ ಅಟ್ಟಹಾಸವನ್ನು ಮೆರೆದು ಖಾಲಿಯಾಗಿತ್ತು. ಪೈರು ಸಂಪೂರ್ಣ ಕೆಂಬಣ್ಣಕ್ಕೆ ತಿರುಗಿತ್ತು. ಜಾನುವಾರಿನ ಮೇವಿಗೆ ಕಷ್ಟವೋ ಎನ್ನುವಂತಿದೆ.
ಭಾರತದ ಕೃಷಿ ಮುಂಗಾರು ಜೊತೆಗೆ ಹೋರಾಟ ಎಂಬುದು ಬಾಲ್ಯದಲ್ಲಿ ಕಲಿತ ಪಾಠ. ಹೌದು, ಎಷ್ಟು ನಿಜ ಅಲ್ಲವೇ? ಆ ಕಾಲ ಅನ್ನಕ್ಕಾಗಿ ಹೋರಾಟದ ಕಾಲ. ಯಾವುದೇ ಆರ್ಥಿಕ ಅನುಕೂಲಗಳು ಇಲ್ಲದಿದ್ದ ಕಾಲ. ಕನಿಷ್ಠ ಮೂಲ ಸೌಲಭ್ಯಗಳು ಇದ್ದ ಕಾಲ.ಮೇಲ್ಕರ್ಚಿಗೆ ಮಾತ್ರ ಅಡಿಕೆ ತೋಟ ಎಂಬ ಕಲ್ಪನೆಯ ಕಾಲ. ಆ ಕಾಲದಲ್ಲಿಯೂ ಇಂತ ಭಯಂಕರ ಮಳೆ ಬಂದು ನೆರೆ ನಿಂತು ಹಾಳು ಮಾಡಿದ್ದು ಎಷ್ಟೋ ಗದ್ದೆಗಳನ್ನು, ಕಟಾವು ಮಾಡಿ ಮನೆಯಂಗಳಕ್ಕೆ ತಂದು ಪೇರಿಸಿಟ್ಟ ಭತ್ತದ ಪೈರನ್ನು ಕೊಚ್ಚಿಕೊಂಡು ಹೋದದ್ದು ಅದೆಷ್ಟೋ, ಮಟ್ಟ ಮಾಡಿದ ಅಂಗಳವನ್ನು ಕುರುಹೇ ಇಲ್ಲದಂತೆ ಮಾಡಿದ್ದು ಅದೆಷ್ಟೋ!
ಇಷ್ಟೆಲ್ಲಾ ನಾಶ ಮಾಡಿದ್ದರೂ ಇದೆಲ್ಲವೂ ಮಾಮೂಲು, ದೇವರು ಕೊಟ್ಟಲ್ಲಿಗೆ ತೃಪ್ತಿ ಪಡಬೇಕೆಂದು ತೃಪ್ತಿಯ ಮುದ್ರೆಯೊತ್ತಿ ಕಷ್ಟಗಳನ್ನು ಮರೆಯುತ್ತಿದುದನ್ನು ನೆನೆಸುವಾಗ ನಮಗಿಂದು ಎಲ್ಲಾ ಅನುಕೂಲ ಇದ್ದು, ಆಧುನಿಕ ಸೌಲಭ್ಯಗಳಿದ್ದು, ಕೃಷಿ ಕಷ್ಟ ಮತ್ತು ಲಾಭ ರಹಿತ ಎಂದು ಕೃಷಿಯಿಂದ ವಿಮುಖ ರಾಗುವ ಮನಸ್ಥಿತಿಗೆ ಏನೆನ್ನಬೇಕು? ಕೇವಲ ಆರ್ಥಿಕ ಬೆಳೆಯನ್ನು ಮಾತ್ರ ಬೆಳೆದು ಸಮಸ್ಯೆ ಮತ್ತು ಪರಿಹಾರಗಳ ಜವಾಬ್ದಾರಿ ಮತ್ತೊಬ್ಬರದು ಎಂಬ ಮನಸ್ಥಿತಿಗೆ ಏನೆನ್ನಬೇಕು?
ಅಷ್ಟೊಂದು ಹೋರಾಟದ ಬದುಕಿನೊಂದಿಗೆ,ಶ್ರಮ ಜೀವನವನ್ನು ಹೇಳಿಕೊಟ್ಟ ಆ ಮಹಾ ಪೀಳಿಗೆಗೆ, ನಷ್ಟವನ್ನು ಲಾಭವನ್ನು ಒಂದೇರೀತಿ ಸ್ವೀಕರಿಸುತ್ತಿದ್ದ ಆ ಮಹಾ ಪೀಳಿಗೆಗೆ ನನ್ನದೊಂದು ನಮನಗಳು .