ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ 300 ರಿಂದ 400 ಡ್ರೋನ್‌ಗಳನ್ನು ಭಾರತ ಹೊಡೆದುರುಳಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ದೆಹಲಿಯಲ್ಲಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ಕುರಿತು ಮಾಹಿತಿ ನೀಡುವ ವಿಶೇಷ ಸುದ್ದಿಗೋಷ್ಠಿಯಲ್ಲಿ ಅವರು, ಭಾರತದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದನ್ನು ನಿರಾಕರಿಸಿರುವ ಪಾಕಿಸ್ತಾನದ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ದೇವಾಲಯ, ಚರ್ಚ್ ಮತ್ತು ಗುರುದ್ವಾರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುವುದನ್ನು ಮುಂದುವರೆಸಿದೆ. ಪುಂಛ್‌ನಲ್ಲಿರುವ ಗುರುದ್ವಾರದ ಮೇಲೆ ದಾಳಿ ನಡೆಸಿದ್ದು, ಇದರಿಂದ ಸಿಖ್ ಸಮುದಾಯದ ಜನರು ಸೇರಿದಂತೆ ಕೆಲವರು ಮೃತಪಟ್ಟಿದ್ದಾರೆ ಎಂದು ಹೇಳಿದರು. ಪಾಕಿಸ್ತಾನವು ಗಡಿ ಪ್ರದೇಶ ಶಾಲೆಯೊಂದರ ಮೇಲೆ ಶೆಲ್ಲಿಂಗ್ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಪಾಲಕರಿಗೆ ಮತ್ತು ಶಾಲಾ ಸಿಬ್ಬಂದಿಗೆ ಗಾಯಗಳಾಗಿವೆ. ಭಾರತದ ಕಡೆಯಿಂದ ಅಲ್ಲಿನ ಧಾರ್ಮಿಕ ನೆಲೆಗಳ ಮೇಲೆ ದಾಳಿಯಾಗಿದೆ ಎಂಬ ಪಾಕಿಸ್ತಾನದ ಹೇಳಿಕೆ ಪ್ರಚೋದನಾಕಾರಿಯಾಗಿದ್ದು, ಸುಳ್ಳಿನಿಂದ ಕೂಡಿದೆ. ಭಾರತದ ಒಗ್ಗಟ್ಟು ಪಾಕಿಸ್ತಾನಕ್ಕೆ ಸವಾಲಾಗಿ ಪರಿಣಮಿಸಿದೆ. ಭಾರತಕ್ಕೆ ಈಗಾಗಲೇ ಅಮೆರಿಕ, ರಷ್ಯಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ ಎಂದರು.
ಸಿಂಧು ನದಿ ನೀರು ಒಪ್ಪಂದದ ಬಗ್ಗೆ ಮಾತನಾಡಿದ ವಿಕ್ರಮ್ ಮಿಸ್ತ್ರಿ, ಪಾಕಿಸ್ತಾನ ಪದೇ ಪದೇ ಭಯೋತ್ಪಾದನಾ ಕೃತ್ಯ ನಡೆಸುತ್ತಿದ್ದರೂ ಇಷ್ಟು ಸುದೀರ್ಘ ಅವಧಿಯವರೆಗೆ ಭಾರತ ಅದನ್ನು ಸಹಿಸಿಕೊಂಡು ಬಂದಿದೆ. ಆದರೆ ಈ ಒಪ್ಪಂದವು 50-60 ವರ್ಷಗಳಷ್ಟು ಹಳೆಯದ್ದಾಗಿದ್ದು, ಅದರಲ್ಲಿ ಕೆಲವೊಂದು ಬದಲಾವಣೆಗಳ ಅಗತ್ಯವಿತ್ತು. ತಂತ್ರಜ್ಞಾನ ಸೇರಿದಂತೆ ಹಲವು ಬದಲಾವಣೆಗೆ ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ಭಾರತದ ಮನವಿಗೆ ಅದು ಸ್ಪಂದಿಸಲಿಲ್ಲ ಎಂದು ಹೇಳಿದರು.
ಆಪರೇಷನ್ ಸಿಂಧೂರ ಕುರಿತು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿ, ನಿನ್ನೆ ರಾತ್ರಿ ಪಾಕಿಸ್ತಾನ ಪೂರ್ವ ಮತ್ತು ಪಶ್ಚಿಮ ಗಡಿ ನಿಯಂತ್ರಣ ರೇಖೆಯ ಬಳಿ ನಡೆಸಿದ್ದ ದಾಳಿಯಲ್ಲಿ ಭಾರತದ ಕೆಲವು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು. ಭಾರತವು ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ. ಅದರ ಹಲವು ಕ್ಷಿಪಣಿಗಳನ್ನು ಧ್ವಂಸ ಮಾಡಲಾಗಿದೆ. ಪಾಕಿಸ್ತಾನದ ಕಡೆಯಿಂದ ಬರುವ ಡ್ರೋನ್‌ಗಳನ್ನು ತಟಸ್ಥಗೊಳಿಸಲಾಗಿದೆ. ಪಾಕಿಸ್ತಾನ ದಾಳಿ ನಡೆಸಿದ್ದ ಡ್ರೋನ್ ಬಗ್ಗೆ ಪರಿಶೀಲಿಸಲಾಗಿದ್ದು, ಇದು ಟರ್ಕಿಯಿಂದ ಬಂದಿರುವುದು ಎಂದು ತಿಳಿದುಬಂದಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…