ಪಶು ಆಹಾರ : ಈ ವಿಷಯ ನಿಮಗೆ ತಿಳಿದಿರಲಿ !

June 24, 2025
10:26 AM
ಪಶುಪಾಲಕರು ಗಮನಿಸಬೇಕಾದ ಹಲವು ಅಂಶಗಳಗಳ ಬಗ್ಗೆ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಔಷಧಶಾಸ್ತ್ರಮತ್ತು ವಿಷಶಾಸ್ತ್ರವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ:ಎನ್.ಬಿ.ಶ್ರೀಧರ ಅವರು ಇಲ್ಲಿ ಬರೆದಿದ್ದಾರೆ...
ಇಂದಿನ ಕಾಲಘಟ್ಟದಲ್ಲಿ ಹೈನುಗಾರಿಕೆ ಪಶುವಿಗೆ ನೀಡುವ ಆಹಾರದ ಮೇಲೆಯೇ ಅವಲಂಭಿತವಾಗಿದೆ. ಆದರೆ ಅನೇಕರಿಗೆ ಇದು ಇನ್ನೂ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಅದರಲ್ಲಿಯೂ ಸಹ  ಶರ್ಕರಪಿಷ್ಟ, ಪ್ರೊಟೀನ್, ಕೊಬ್ಬು ಇವೆಲ್ಲಾ ಎಷ್ಟು ಪ್ರಮಾಣದಲ್ಲಿ ಬೇಕು, ಅದು ಯಾವ ಹಿಂಡಿಯಲ್ಲಿದೆ, ಅದರ ಬೆಲೆ ಹೇಗೆ ನಿರ್ಧಾರವಾಗುತ್ತದೆ ಎಂಬುದೆಲ್ಲಾ ಅನೇಕ ಜನರು ತಿಳಿಯಬೇಕಾದ ವಿಷಯ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನ ಹಿಂಡಿಯ ಕೊರತೆ.  ವಾಣಿಜ್ಯ ಪಶು ಆಹಾರಗಳ ವರ್ತಕರ ಆಮಿಷಗಳು, ಜಾಹಿರಾತುಗಳು, ತಪ್ಪು ನಂಬಿಕೆಗಳು ಪಶುಪಾಲಕರ ದಾರಿ ತಪ್ಪಿಸಿರುವುದು ನೈಜ ವಿಷಯ. …… ಮುಂದೆ ಓದಿ……
ಅಷ್ಟಕ್ಕೂ ಪಶು ಆಹಾರಕ್ಕೂ ನನಗೂ ಇರುವ ನಂಟು ಸುಮಾರು 12 ವರ್ಷ ಹಳೆಯದು. ಆಗ ಹಿಂದೆ ಮಲೆನಾಡಿನ ಭಾಗದ ಜಾನುವಾರುಗಳಲ್ಲಿ ಹಿಂಗಾಲಿನ ಗೊರಸಿನ ಮೇಲ್ಭಾಗದಿಂದ ಕೆಚ್ಚಲಿನವರೆಗೆ ಹಬ್ಬುವ ತುರಿಕೆಯಿಂದ ಕೂಡಿದ ಕಜ್ಜಿ ಮಿಶ್ರ ತಳಿಯ ಹಾಗೂ ಇತರ ಜಾನುವಾರುಗಳಲ್ಲಿ ಪ್ರಾರಂಭವಾದಾಗ ಪಶುವೈದ್ಯರು ಹಾಗೂ ರೈತರು ತಲೆ ಕೆಡಿಸಿಕೊಳ್ಳವ ಪರಿಸ್ಥಿತಿ ಬಂತು. ದಕ್ಷಿಣ ಕನ್ನಡದ ಪಶುಪಾಲಕರು ಇದನ್ನುಪ್ರತಿಭಟಿಸಿದವರಲ್ಲಿ ಮೊದಲಿಗರು. ವಾಣಿಜ್ಯ ಪಶು ಆಹಾರಗಳಲ್ಲಿ ಬಳಸುವ ಯೂರಿಯಾದಿಂದ ಈ ರೀತಿಯ ಚರ್ಮರೋಗ ಬರುವುದೆಂದ ಪ್ರಾರಂಭಿಕವಾಗಿ ಯೋಚಿಸಲಾಗಿತ್ತು.ಅವರು ಯೂರಿಯಾವೇ ಇದಕ್ಕೆಮುಖ್ಯ ಕಾರಣವೆಂದು ಪ್ರತಿಭಟಿಸಿದರು. ಕೆಲವೊಂದು ಸಾವಯವ ಕೃಷಿಪ್ರತಿಪಾದಕರು ಎಂದಿನಂತೆ “ ಗದ್ದೆಗೆ ಹಾಕುವ ರಾಸಾಯನಿಕ ಮಾರಿ ಯೂರಿಯಾ ಗೊಬ್ಬರವನ್ನು ಪಶು ಆಹಾರಕ್ಕೆ ಆಗುವ ಮನುಷ್ಯನ ಲಾಲಸೆಯ ಅನಾಹುತವೇ ಇದು” ಎಂದು ಯೂರಿಯಾವೇ ಇದಕ್ಕೆ ಕಾರಣ ಎಂಬ ಹಾಗೆ ಬೊಬ್ಬಿಟ್ಟು  ಬಿಂಬಿಸಿಬಿಟ್ಟಿದ್ದರು. ನಿರಂತರ ಶೋಧನೆಗಳ ನಂತರ  ಈ ಕಾಯಿಲೆಪಶುಗಳಲ್ಲಿ ವಾಣಿಜ್ಯ ಪಶು ಆಹಾರದಿಂದ ಬರುವುದೆಂದು ಖಚಿತವಾಗಿ ತಿಳಿದುಬಂದಿತು.ಈ ಕುರಿತು ಸಾಗರದ ಪಶು ಚಿಕಿತ್ಸಾಲಯ, ತಾಳಗುಪ್ಪದಲ್ಲಿ ವಿವಿಧ ಜಾನುವಾರುಗಳಿಗೆ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಪಶು ಅಹಾರಗಳನ್ನು ತಿನ್ನಿಸಿ ಕಾಯಿಲೆ ಬರುವಿಕೆ ವಿಧಾನವನ್ನು ಖಚಿತಪಡಿಸಿಕೊಳ್ಳಲಾಯಿತು.
ಚರ್ಮ ರೋಗವನ್ನುಂಟು ಮಾಡಿದ ಸುಮಾರು 34 ಪಶು ಆಹಾರಗಳ ವಿಶ್ಲೇಷಣೆ ಮಾಡಿದಾಗ ಮತ್ತು  ಈ ರೀತಿಯ ಚರ್ಮರೋಗವು ಪಶು ಆಹಾರದಲ್ಲಿ ಯೂರಿಯಾ ಇಲ್ಲದಿದ್ದರೂ ಸಹ ಬರುವುದೆಂದು ಮತ್ತು ಇದಕ್ಕೆ ಬೇರೇನೋ ಕಾರಣವಿರಬಹುದೆಂದು ಖಚಿತವಾಯ್ತು. ಇದು ಗಂಧಕದ ಅಂಶ ಹೊಂದಿದ ಅಮೈನೋ ಆಮ್ಲಗಳ ಕೊರತೆಯಿಂದ ಬರುವುದೆಂದು ತಜ್ಞರ ಅನಿಸಿಕೆ. ಆದರೆ ಈ ರೀತಿಯ ಗಂಧಕದ ಅಂಶ ಹೊಂದಿದ ಆಮೈನೊ ಆಮ್ಲಗಳ ಕೊರತೆ ಪಶು ಆಹಾರದ ಯಾವ ಅಂಶದಿಂದ ಬರುತ್ತದೆ ಎಂಬ ಅಂಶವನ್ನು ಪ್ರಾಯೋಗಿಕವಾಗಿ ದೃಢಪಡಿಸಿಕೊಳ್ಳಲು ಪಶುಆಹಾರ ಕಂಪನಿಗಳ ಅಸಹಕಾರದಿಂದ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಅವರು ಪಶು ಆಹಾರದಲ್ಲಿ ಹಾಕುವ ವಿವಿಧ ಮೂಲವಸ್ತುಗಳ ಗುಟ್ಟು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಮಲೆನಾಡಿನ ಹಾಲುಹಿಂಡುವ ರಾಸುಗಳನ್ನುಹೆಚ್ಚಾಗಿ ಬಾಧಿಸುವ ಈ ವಾಣಿಜ್ಯ ಪಶು ಆಹಾರಗಳಿಂದ ಬರುವ ಚರ್ಮದ ಕಾಯಿಲೆಯ ಈಗ ಅದರಲ್ಲಿ ಬೆರೆಸುವ ಎಣ್ಣೆ ತೆಗೆದ ಅಕ್ಕಿಯ ತೌಡಿಗೆ ಆಗುವ ಅಲರ್ಜಿ ಎಂದು ಅಧ್ಯಯನದ ಮೂಲಕ ಮತ್ತು ಇದಕ್ಕೆ ಯೂರಿಯಾ ಕಾರಣವಲ್ಲ ಎಂಬುದು ನಿಖರವಾಗಿ ಖಚಿತಪಟ್ಟಿದೆ.
ಸಮತೋಲ ಪಶು ಆಹಾರ ಏಕೆ ಬೇಕು? : ಮಿಶ್ರ ತಳಿಯ ಯುಗ ಆರಂಭವಾದಾಗಿನಿಂದ ಕ್ಷ್ರೀರ ಕ್ರಾಂತಿಯ ಶಕೆ ಪ್ರಾರಂಭವಾಗಿದೆ. ಸದ್ಯ ಭಾರತ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಪ್ರಥಮ. ಮಿಶ್ರ ತಳಿಯ ಪರಂಪರೆಯ ಹಿಂದೆಯೇ ಬಂದಿದ್ದು ಈ ಪಶು ಅಹಾರದ ಉದ್ಯಮ. ಮೊದಲೋ 2-4 ಲೀಟರ್ ಹಾಲು ಹಿಂಡುವ ನಾಟಿ ಹಸುಗಳು ಬೆಟ್ಟದಲ್ಲಿ ಹೇರಳವಾಗಿ ಸಿಗುವ ಹಸಿರು ಹುಲ್ಲನ್ನುಮೇಯ್ದು ಅವುಗಳ ಸಾಮರ್ಥ್ಯ ತಕ್ಕಂತೆ ಹಾಲು ಕೊಡುತ್ತಿದ್ದವು. ಸದ್ಯ ಜಾನುವಾರುಗಳು ಮೇಯಲು ಗೋಮಾಳಗಳು ಇಲ್ಲದೇ ಹಸಿರು ಹುಲ್ಲಿನ ಅಭಾವದಿಂದ ನಮ್ಮ ಜಾನುವಾರುಗಳು ಕೇವಲ ಪಶು ಅಹಾರದ ಮೇಲೆಯೇ ಅವಲಂಭಿತವಾಗುವ ಕಾಲ ಬಂದಿದೆ. ಪಶು ಪಾಲನೆಯ ಶೇ: 60 ರಷ್ಟು ಖರ್ಚು ಪಶುಗಳ ಆಹಾರಕ್ಕೆ ವ್ಯಯವಾಗುವುದರಿಂದ ಇದೊಂದು ಪ್ರಮುಖ ವಿಷಯವೂ ಸಹ ಹೌದು. ಕಾರಣ ಈ ವೇಳೆಯಲ್ಲಿ ರೈತರಿಗೆ ಪಶು ಆಹಾರದಲ್ಲಿನ ಹೊಸ ಅವಿಷ್ಕಾರಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಯಪಡಿಸುವುದು ಅವಶ್ಯವಾಗಿದೆ.
ನಮಗೆ ಹೇಗೆ ಸಮತೋಲವಾದ ಆಹಾರ ಬೇಕೋ ಹಾಗೆಯೇ ಪಶುಗಳಿಗೂ ಪ್ರೊಟೀನ್, ಶರ್ಕರ ಪಿಷ್ಟ (ಕಾರ್ಬೋಹೈಡ್ರೇಟ್), ಕೊಬ್ಬು, ಖನಿಜಗಳು, ಜೀವಸತ್ವಗಳು ಇವೆಲ್ಲಾ ಬೆಳವಣಿಗೆಗೆ, ಉತ್ಪಾದನೆಗೆ ಬೇಕೆ ಬೇಕು.  ಸಮತೋಲ ಪಶು ಅಹಾರವೆಂದರೆ ಒಂದು ನಿಗದಿತ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೊಟೀನ್ ,ಕೊಬ್ಬಿನ ಅಂಶ‌ , ನಾರಿನಂಶ ಇತ್ಯಾದಿಗಳನ್ನು ಒದಗಿಸುವ ಜೋಳದ ಹುಡಿ, ರಾಗಿ ಹಿಟ್ಟು, ಅಕ್ಕಿನುಚ್ಚು, ಗೋದಿ ಬೂಸಾ, ನೆಲಗಡಲೆಹಿಂಡಿ, ಹತ್ತಿಕಾಳುಹಿಂಡಿ, ಸಾಸಿವೆಹಿಂಡಿ, ಸೂರ್ಯಕಾಂತಿಹಿಂಡಿ, ಕಾಕಂಬಿ, ಯೂರಿಯಾ, ಉಪ್ಪು ಮತ್ತು ಖನಿಜ ಮಿಶ್ರಣ ಇತ್ಯಾದಿಗಳನ್ನು ಬಳಸಿ ತಯಾರಿಸುವ ಒಂದು ಮಿಶ್ರಣ. ಇವುಗಳನ್ನು ವೈಜ್ಞಾನಿಕವಾಗಿ ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿದಾಗ ಮಾತ್ರ ಸಮತೋಲ ಪಶು ಅಹಾರವನ್ನು ತಯಾರಿಸಲುಸಾಧ್ಯ.
ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಪಶು ಆಹಾರ (ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣದ ವಿನಿಯಮನ) ಅಧಿನಿಯಮ 2025 ಅಥವಾ ಸರಳವಾಗಿ ಪಶು ಆಹಾರ ನಿಯಂತ್ರಣ ಕಾಯ್ದೆ 2025 ಇದು 7-4-2025 ರಂದು ರಾಜ್ಯಸರ್ಕಾರದ ಗೆಜೆಟ್ ಅಧಿಸೂಚನೆಯ ಪ್ರಕಾರ ಜಾರಿಗೆ ಬಂದಿದೆ. ಈ ಕಾಯ್ದೆಯ ಪ್ರಕಾರ “ಸಂಯುಕ್ತ ಪಶು ಆಹಾರ” ಎಂದರೆ ಪ್ರಾಣಿಗಳ ಆಹಾರಕ್ಕಾಗಿ ಉದ್ದೇಶಿಸಲಾದ ಯಾವುದೇ ಪೌಷ್ಟಿಕಾಂಶ ಸಮತೋಲಿತ ಪುಡಿಮಾಡಿದ, ಉಂಡೆಗಳಾಗಿ ಕತ್ತರಿಸಿದ,  ಪುಡಿಮಾಡಿದ, ಹಿಸುಕಿದ ಅಥವಾ ಹೊರತೆಗೆಯಲಾದ ಆಹಾರ.  ಸದ್ಯ ಮಾರುಕಟ್ಟೆಯಲ್ಲಿ  ಸಿಗುವ “ಗುಳಿಗೆ ಹಿಂಡಿ” ಎಂದರೆ ಯಾವುದೇ ಯಾಂತ್ರಿಕ ಪ್ರಕ್ರಿಯೆಯಿಂದ ಗಾತ್ರವನ್ನು ಕುಗ್ಗಿಸಿ ಒತ್ತುವಿಕೆಯ ಮೂಲಕ ಪಡೆದ ಪಶುಗಳ ಆಹಾರ.
ಕರ್ನಾಟಕದಲ್ಲಿಸದ್ಯದಲ್ಲಿ ಹಲವಾರು ಪಶು ಅಹಾರ ತಯಾರಿಕಾ ಕಂಪನಿಗಳಿದ್ದು ಅವೆಲ್ಲವೂ ಏಕ ರೂಪದ ಪಶು ಅಹಾರವನ್ನು ರೈತರಿಗೆ ಒದಗಿಸಲು ಕರ್ನಾಟಕದಲ್ಲಿ ಪಶು ಆಹಾರ ತಜ್ಞರ ಸಮಿತಿಯೊಂದಿದ್ದು ಅದು ಕಾಲಕಾಲಕ್ಕೆ ರೈತರ ಜಾನುವಾರುಗಳ ಅವಶ್ಯಕತೆಗಳಿಗನುಗುಣವಾಗಿ ಸಲಹೆಸೂಚನೆಗಳನ್ನು ನೀಡುತ್ತಾ ಇರುತ್ತದೆ. ಈ ಸಮಿತಿಯ ಪ್ರಕಾರ ಪಶು ಆಹಾರಗಳನ್ನು ಅವುಗಳ ಗುಣಮಟ್ಟದ ಮೇಲೆ ಮತ್ತು ಭಾರತೀಯ ಮಾನದಂಡಗಳ ಬ್ಯೂರೋ (ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ) ಇದರ ಪ್ರಕಾರ  ವಿವಿಧ ಮಾದರಿಯ ಪಶು ಆಹಾರಗಳೆಂದು ವರ್ಗೀಕರಿಸಿದ್ದು  ಅವುಗಳನ್ನು ನೀಡುವ ಪ್ರ ಮಾಣ ಹಾಗೂ ಹಾಕುವ ಬಗೆಯನ್ನು ಆಕಳಿನ ಹಾಲಿನ ಇಳುವರಿಯ ಮೇಲೆ, ದೇಹದ ತೂಕದ ಮೇಲೆ ಮತ್ತು ಗರ್ಭಧಾರಣೆ ಇತ್ಯಾದಿಗಳ ಮೇಲೆ ನಿರ್ಧರಿಸುತ್ತಾರೆ. ಪಶು ಆಹಾರವನ್ನು ಜಾನುವಾರಿನ ಹಾಲಿನ ಇಳುವರಿಯ ಮೇಲೆ ಅವುಗಳಿಗೆ ನೀಡಬೇಕಾದ ಪ್ರಮಾಣವನ್ನು ಈ ಕೆಳಗಿನಂತೆ ರಾಜ್ಯಪಶು ಆಹಾರ ತಜ್ಞರ ಸಮಿತಿಯು ತೀರ್ಮಾನಿಸಿರುತ್ತದೆ.
ಉದಾಹರಣೆಗೆ ಹೊತ್ತಿಗೆ 5 ಲೀಟರ್ ನಂತೆ ದಿನಕ್ಕೆ 10-15 ಲೀಟರ್ ಹಾಲುನೀಡಬೇಕಾದ ಹಸುವಿಗೆ ನೀಡಬೇಕಾದ ಪಶು ಆಹಾರ ಮಾದರಿ 2 ಶರೀರ ನಿರ್ವಹಣೆಗೆ 1.5-2 ಕಿಲೊ ಮತ್ತು ಹಾಲಿನ ಉತ್ಪಾದನೆಗೆ 4 ಕಿಲೊ ಒಟ್ಟು 6 ಕಿಲೊ ಮುಂಜಾನೆ 3 ಕಿಲೋ ಹಾಗೂ ಸಂಜೆ 3 ಕೆಜಿ ನೀಡಬೇಕು.
ಇದೇ ಉದಾಹರಣೆ ಅನುಸರಿಸಿ ಎಲ್ಲ ವಿಧದ ಹಾಲು ಉತ್ಪಾದನೆಯ ಹಸುಗಳಿಗೆ ಪಶು ಆಹಾರ ಲೆಕ್ಕಹಾಕಬಹುದು. ಕೆಲಸಮಾಡುವ ಎತ್ತುಗಳಿಗೆ 2ನೇ ಮಾದರಿಯ ಪಶು ಆಹಾರವನ್ನು ದಿನಕ್ಕೆ2.5 ಕಿಲೊ ಪ್ರತಿ ಎತ್ತಿಗೆ ನಿಗದಿಪಡಿಸಿದೆ. ಹೇರಳ ಹಸಿರುಹುಲ್ಲು,ದ್ವಿದಳ ಧಾನ್ಯಗಳ ಮೇವು ಲಭ್ಯವಿದ್ದಲ್ಲಿ ನೀಡಬೇಕಾದ ಪಶು ಆಹಾರವನ್ನು ಶೇ:30 ರಷ್ಟು ಕಡಿಮೆ ಮಾಡಬಹುದು.
ಬೈಪಾಸ್‍ ಪಶು ಅಹಾರವು ನೇರವಾಗಿ ಸಣ್ಣ ಕರುಳನ್ನು ಸೇರಿ ಬೇಗ ಜೀರ್ಣವಾಗುವುದರಿಂದ ಹಾಲಿನ ಉತ್ಪಾದನೆಯಲ್ಲಿ ಕೂಡಲೇ ಹೆಚ್ಚಳವನ್ನು ಕಾಣಬಹುದು. ಆದರೆ ಜಾನುವಾರಿನ ದೊಡ್ಡಹೊಟ್ಟೆಯಲ್ಲಿನ ಸೂಕ್ಷ್ಮಾಣು ಜೀವಿಗಳಿಗೆ ಅದು ಜೀರ್ಣಮಾಡಲು ಸಿಗದೇ ನೇರವಾಗಿ ಸಣ್ಣ ಕರುಳನ್ನು ಸೇರುವುದರಿಂದ ಹಾಲಿನಲ್ಲಿನ ಈ ಹೆಚ್ಚಳ ಸ್ವಾಭಾವಿಕ. ಆದರೆ ಕ್ರಮೇಣ ಇದೇ ಪಶು ಆಹಾರವನ್ನು ಜಾನುವಾರಿಗೆ ಅವಶ್ಯವಿಲ್ಲದಿದ್ದರೂ ಬಹಳ ದಿನಗಳವರೆಗೆ ಬಳಸಿದರೆ ಪಶುವಿನ ಮೆಲುಕು ಚೀಲದಲ್ಲಿ ಸೂಕ್ಷ್ಮಾಣು ಜೀವಿಗಳು ಕ್ರಮೇಣ ನಿಷ್ಕ್ರಿಯಗೊಳ್ಳುತ್ತವೆ. ಅಕಸ್ಮಾತ್‍ ಬೈಪಾಸ್‍ ಪಶು ಅಹಾರ ಸಿಗದಿದ್ದಲ್ಲಿ ಹಾಲಿನ ಇಳುವರಿಯಲ್ಲಿ ತೀವ್ರವಾದ ಇಳಿತ ಸ್ವಾಭಾವಿಕ. ಕಾರಣ ಜಾನುವಾರುಗಳಿಗೆ ಅವುಗಳ ಹಾಲಿನ ಇಳುವರಿಗೆ ತಕ್ಕಂತೆ ನಿಗದಿತ ಮಾದರಿಯ ಪಶು ಆಹಾರವನ್ನು ನೀಡುವುದು ಒಳ್ಳೆಯದೇ ಹೊರತು ಹಾಲು ಜಾಸ್ತಿಯಾಗಲೆಂದು ಬೈಪಾಸ್‍ ಪಶು ಆಹಾರವನ್ನು ಬಳಸುವುದು ಸೂಕ್ತವಲ್ಲ.
     ಕರ್ನಾಟಕ ಪಶು ಆಹಾರ ನಿಯಂತ್ರಣ ಕಾಯ್ದೆ 2025  ಇದರ ಪ್ರಕಾರ ಪಶು ಅಹಾರ,ಕೋಳಿ ಅಹಾರ ಇತ್ಯಾದಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ರಹದಾರಿ ನೀಡುವ ಬಗ್ಗೆ ನಿಗದಿತವಾದ ನೀತಿ ನಿಯಮಗಳಿವೆ. ಇದರ ಸಾರಾಂಶವನ್ನು ಈ ಕೆಳಗಿನಂತೆ ಇದೆ..
  1.  ಪಶು ಆಹಾರ ತಯಾರಿಕ ಘಟಕ ಸ್ಥಾಪಿಸಲು ಇಚ್ಚಿಸುವವರು  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದನಿಗದಿತ ರಹದಾರಿ(ಲೈಸನ್ಸ್) ಪಡೆದಿರಬೇಕು. ಮೊದಲ ಅವಧಿಗೆ ಇದನ್ನು 3 ವರ್ಷಕ್ಕೆ ನೀಡುತ್ತಿದ್ದು ನಂತರ ಅದನ್ನು ನಿಗದಿತವಾಗಿ ನವೀಕರಿಸಬೇಕು. ಪ್ರತಿ ಪಶು ಆಹಾರದ ಚೀಲದಮೇಲೂ ಲೈಸನ್ಸ್ ಸಂಖ್ಯೆಯ ನಮೂದು ಕಡ್ಡಾಯ.
  2.  ಪ್ರತೀ ಪಶು ಆಹಾರದ ಚೀಲದ ಮೇಲೆ ಪಶು ಆಹಾರದ ತಯಾರಿಕಾ ದಿನಾಂಕ, ಬ್ಯಾಚ್‍ಸಂಖ್ಯೆ,ನಿವ್ವಳ ತೂಕ,ಪಶು ಅಹಾರದಮಾದರಿ (1,2, ಬೈಪಾಸ್‍ಇತ್ಯಾದಿ), ಗರಿಷ್ಟ ಮಾರುಕಟ್ಟೆ ದರ, ಉಪಯೋಗಿಸಲು ಅಂತಿಮ ದಿನಾಂಕ,ತಯಾರಿಕಾದಾರರ ಸ್ಪಷ್ಟವಿಳಾಸ, ಪಶು ಆಹಾರದ ಬ್ರಾಂಡ್ ಹೆಸರು,ಅಧಿಕೃತ ಮುದ್ರೆ, ಅದು ಒದಗಿಸುವ ಕನಿಷ್ಟ ಪೌಷ್ಟಿಕಾಂಶಗಳ ಸಂಯೋಜನೆ(ಪ್ರಾಕ್ಸಿಮೇಟ್ ಪ್ರಿನ್ಸಿಪಲ್ಸ್), ವಿಟಾಮಿನ್‍ಗಳು, ಖನಿಜಾಂಶಗಳು, ಜೀವನಿರೋಧಕಗಳು ಮತ್ತು ಅವುಗಳ ಪ್ರಮಾಣ, ಪಶು ಅಹಾರವನ್ನು ನೀಡುವ ಮತ್ತು  ವಿಧಾನ ಇತ್ಯಾದಿಗಳನ್ನುನಮೂದಿಸಬೇಕು. ಇದಲ್ಲದೇ ಚೀಲದಲ್ಲಿ ಒಂದು ಚೀಟಿ ಲಗತ್ತಿಸಿ ಈ ಎಲ್ಲಾ ವಿವರಗಳನ್ನು ಮುದ್ರಿಸಿ ಕಡ್ಡಾಯವಾಗಿ ಹಾಕಬೇಕು.
  3.  ರಾಜ್ಯಪಶು ಆಹಾರ ತಜ್ಞರ ಸಮಿತಿಯು ನಿಗದಿಪಡಿಸಿದಂತೆ,  ಭಾರತೀಯ ಮಾನದಂಡಗಳ ಬ್ಯೂರೋ (ಬಿ ಐ ಎಸ್) ಅಥವಾ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಗಳ ಪ್ರಕಾರ ಪಶು ಆಹಾರದ ಮಾದರಿಗೆ ತಕ್ಕಂತೆ ಪಶು ಆಹಾರವು ಕನಿಷ್ಟ ಪೌಷ್ಟಿಕಾಂಶಗಳನ್ನು  ಒದಗಿಸಬೇಕು ಹಾಗೂ ಐಎಸ್‍ಐ ಗುಣಮಟ್ಟ ಹಾಗೂ ಮುದ್ರೆಯನ್ನು ಹೊಂದಿದ್ದರೆ ಇದರ ಖಚಿತತೆ ಜಾಸ್ತಿ.
  4.  ಪಶು ಆಹಾರದ ವರ್ತಕರು ನಿಗದಿತ ಪಶು ಆಹಾರವನ್ನು ಮಾರಾಟ ಮಾಡಲು ಪರವಾನಗಿ ಪ್ರಾಧಿಕಾರಿಗಳಾದ ಪ್ರತಿ ಜಿಲ್ಲೆಯ ಉಪನಿರ್ದೇಶಕರು (ಪಾಲಿಕ್ಲಿನಿಕ್) ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೂಕ್ತ ಪರವಾನಗಿ ಪಡೆದಿರಬೇಕು ಹಾಗೂ ಇದನ್ನು ಅವರ ಅಂಗಡಿಯಲ್ಲಿ ಸಾರ್ವಜನಿಕರ ಗಮನಕ್ಕೆ ಸುಲಭವಾಗಿ ಬರುವಂತ ಸ್ಥಳದಲ್ಲಿಪ್ರದರ್ಶಿಸಬೇಕು.
  5.  ಪಶು ಆಹಾರವನ್ನುಸಂಗ್ರಹಿಸಿಡಲು ತೇವಾಂಶ ರಹಿತವಾದ ಉತ್ತಮ ಗೋದಾಮುಗಳನ್ನು ಹೊಂದಿರಬೇಕು. 20 ದಿನಗಳಿಗಿಂತ ಜಾಸ್ತಿ ದಿನ ಪಶು ಆಹಾರವನ್ನು ಶೇಖರಿಸಿ ಇಡಬಾರದು ಮತ್ತು ಪಶು ಆಹಾರ ತಜ್ಞರ ಸಮಿತಿಯು ನಿಗದಿಪಡಿಸಿದ ನಿಯಮಗಳನ್ನು ಪಾಲಿಸುವ ಕಂಪನಿಗಳ ಪಶು ಆಹಾರವನ್ನು ಮಾತ್ರ ಮಾರಾಟ ಮಾಡಬೇಕು. ಅವರದೇ ಹೆಸರಿನಲ್ಲಿ ರಹದಾರಿ ಇಲ್ಲದೇ ಪಶು ಆಹಾರ ಮಾರುವಂತಿಲ್ಲ.
  6. ಹೊರರಾಜ್ಯಗಳಲ್ಲಿ ತಯಾರಾಗುವ ಹಲವು ಪಶು ಆಹಾರಗಳು ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಪಾಲಿಸದಿದ್ದಲ್ಲಿ ನಮ್ಮ ರಾಜ್ಯದಲ್ಲಿ ಅದನ್ನು ಮಾರುವ ಹಾಗಿಲ್ಲ. ಈ ಕಾರಣದಿಂದ ನಮ್ಮಲ್ಲಿನ ವರ್ತಕರು ಅವುಗಳನ್ನು ಮಾರದಿರುವುದು ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ.
  7.  ವರ್ತಕರು ಗ್ರಾಹಕರಿಗೆ ಪಶು ಆಹಾರದ ಬ್ರಾಂಡ್ ಹೆಸರು, ಮಾದರಿ, ಬ್ಯಾಚ್ ಸಂಖ್ಯೆ ಹಾಗೂ ತಯಾರಿಕಾ ದಿನಾಂಕಗಳನ್ನು ಸ್ಪಷ್ಟವಾಗಿ ಹಾಕಿ ಸೂಕ್ತ ಜಿ ಎಸ್ ಟಿ ಸಂಖ್ಯೆ ಇರುವ ರಸೀದಿ ನೀಡುವುದು ಮತ್ತು ಪಶು ಆಹಾರದ ಲೋಪದೋಷಗಳು, ಗುಣಮಟ್ಟದ ಬಗ್ಗೆ ದೂರುಗಳು ಬಂದಾಗ ಸಂಬಂಧಿಸಿದ ಪಶು ಆಹಾರ ಕಂಪನಿಗೆ ಅಥವಾ ರಹದಾರಿ ಪ್ರಾಧಿಕಾರಕ್ಕೆ ವಿಷಯ ತಿಳಿಸಿ ಲೋಪದೋಷ ಇತ್ಯಾದಿಗಳ ಪರಿಹಾರದ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಸಹ ಕರ್ತವ್ಯ.
ಪಶುಪಾಲಕರು ಗಮನಿಸಬೇಕಾದ ಅಂಶಗಳು :
  1.  ಪಶು ಆಹಾರ ಖರೀದಿಸಿದಾಗ ತಪ್ಪದೇ ರಸೀದಿ ಪಡೆಯಿರಿ.
  2.  ರಸೀದಿಯಲ್ಲಿ ಪಶು ಆಹಾರದ ಹೆಸರು, ಮಾದರಿ, ತಯಾರಿಕಾ ದಿನಾಂಕ, ನಿವ್ವಳ ತೂಕ, ಬೆಲೆ ಇವುಗಳ ನಮೂದನ್ನುಸರಿಯಾಗಿ ಮಾಡಿಸಿಕೊಳ್ಳಿ
  3. ನಿಯಮಿತವಾಗಿ ಅಥವಾ ಆಗಾಗ ನೀವು ಖರೀದಿಸಿದ ಪಶು ಆಹಾರದ ಚೀಲದ ಮೇಲಿನ ನಿವ್ವಳತೂಕ ಗಮನಿಸಿ. ಅದನ್ನು ತೂಕಮಾಡಿ ಖಚಿತಪಡಿಸಿಕೊಳ್ಳುತ್ತಿರಿ. ನಿವ್ವಳ  ತೂಕವೆಂದರೆ ಚೀಲವನ್ನು ಹೊರತು ಪಡಿಸಿಪಶು ಆಹಾರದ ತೂಕ ಎಂಬುದು ಗಮನದಲ್ಲಿರಲಿ. ಚೀಲವನ್ನೂ ಸೇರಿಸಿ ತೂಗಿದಾಗ 1.5-2 ಕಿಲೋ ವ್ಯತ್ಯಾಸ ಬರುತ್ತದೆ.
  4.  ಪಶು ಆಹಾರದ ಚೀಲವನ್ನು ಬಿಡಿಸಿದಾಗ ಅದರಲ್ಲಿ ಪಶು ಆಹಾರದ ವಿವರ ಹೊಂದಿದ ಒಂದು ಚೀಟಿ ಇದೆಯೇ ಎಂಬುದನ್ನು ಗಮನಿಸಿ. ಇಲ್ಲದಿದ್ದರೆ ಅಥವಾ ಪಶು ಆಹಾರಕ್ಕೆ ಬೂಸ್ಟು ಹಿಡಿದಿದ್ದಲ್ಲಿ ವರ್ತಕರು ಅಥವಾ ಕಂಪನಿಗೆ ಅಥವಾ ಜಿಲ್ಲೆಯ ಪರವಾನಗಿ ಪ್ರಾಧಿಕಾರಕ್ಕೆ ದೂರು ನೀಡಿ.
  5.  ಆದಷ್ಟುನಿಮ್ಮ ಜಾನುವಾರುಗಳಿಗೆ ಯಾವಾಗಲೂ ಉಪಯೋಗಿಸುವ ಪಶು ಆಹಾರವನ್ನೇ ಬಳಸಿ. ಅದರಲ್ಲೂ ನಿಮ್ಮ ಜಾನುವಾರಿಗೆ   ಅವಶ್ಯವಿರುವ ಮಾದರಿಯನ್ನೇ (ಮಾದರಿ 1,2, ಬೈಪಾಸ್ ಇತ್ಯಾದಿ) ನಿಗದಿತ ಪ್ರಮಾಣದಲ್ಲಿಬಳಸಿರಿ.
  6.  ಒಂದು ವೇಳೆ ಆ ಕಂಪನಿಯ ಆಹಾರ ಲಭ್ಯವಿಲ್ಲದಿದರೆ, ಬೇರೆ ಕಂಪನಿಯ ಪಶು ಆಹಾರ ಬಳಸಬೇಕಾದ ಪ್ರಸಂಗ ಬಂದಲ್ಲಿ ಪಶುವಿಗೆ ಮೊದಲು ಯಾವ ಮಾದರಿಯ ಪಶು ಆಹಾರ ಬಳಸುತ್ತಿದ್ದಿರೋ ಅದನ್ನೇ   ಖರೀದಿಸಿ ಬಳಸಿ.  ಏಕೆಂದರೆ ಜಾನುವಾರಿನ ಮೆಲುಕು ಚೀಲದಲ್ಲಿನ ಸೂಕ್ಷ್ಮಾಣುಗಳು ಆ ರೀತಿಯ ಪಶು ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಂದಿಕೊಂಡಿರುತ್ತವೆ.
  7.  ಎರಡು ಮೂರು ಕಂಪನಿಗಳ ಪಶು ಆಹಾರಗಳನ್ನು ಮಿಶ್ರಣ ಮಾಡಿ ಕೊಡುವ ಪದ್ದತಿಯನ್ನು ಕೆಲವು ಗೋಪಾಲಕರು ಬಳಸಿ ಹಾಲು ಜಾಸ್ತಿ ಉತ್ಪಾದನೆಯಾಗುವುದು ಎಂದು ಭಾವಿಸುತ್ತಾರೆ. ಇದು ಅನಾವಶ್ಯಕ. ಏಕೆಂದರೆ ಮೂಲತ: ಎಲ್ಲ ಪಶು    ಆಹಾರಗಳೂ ಅವುಗಳ ಮಾದರಿಗೆ ತಕ್ಕಂತೆ ಅವಶ್ಯಕ ಪೋಷಕಾಂಶಗಳನ್ನು   ಒದಗಿಸಬೇಕು. ಬದಲಿಗೆ ನಿಮ್ಮ ಜಾನುವಾರಿನ ಹಾಲಿನ ಇಳುವರಿಗೆ ತಕ್ಕಂತೆ ನಿಗದಿತ ಮಾದರಿಯ ಪಶುಆಹಾರವನ್ನು ಸರಿಯಾಗಿ ಶರೀರ ನಿರ್ವಹಣೆ ಮತ್ತು ಹಾಲಿನ    ಉತ್ಪಾದನೆಗೆ ತೂಕಹಾಕಿ ನೀಡುವುದಷ್ಟೆ ನಿಮ್ಮ ಕೆಲಸ.
  8. ಕಣ್ಣಳತೆ ಅಥವ ಅಂದಾಜಿನಂತೆ ಪಶು ಆಹಾರವನ್ನು ನಿಮ್ಮ ಹಸುವಿಗೆ ನೀಡದಿರಿ. ಬದಲಾಗಿ ನೀವು ಒಂದು ಅಳತೆ ಪಾತ್ರೆ ಮಾಡಿಟ್ಟು ಅದರಲ್ಲಿ ಒಂದು ಅಳತೆ ಹಾಕಿದರೆ ಎಷ್ಟು ಕಿಲೋಪಶು ಆಹಾರಬರುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಹಾಲನ್ನು ಮಾರುವಾಗ ಎಂದಾದರೂ ಅಳತೆ ಮಾಡದೇ ಅಂದಾಜಿಗೆ ಮಾರುತ್ತೀರಾ?  ಹಾಗಾದರೆ ಹಸುವಿಗೇಕೆ ಈ ಅಳತೆ ಮೋಸ?.
  9.  ಪಶು ಆಹಾರವನ್ನು ಶರೀರ ನಿರ್ವಹಣೆ ಮತ್ತು ಹಾಲು ಉತ್ಪಾದನೆಗೆ ಎಂದು ಲೆಕ್ಕ ಹಾಕಿದಾಗ ಬರುವ ಪ್ರಮಾಣದಲ್ಲಿ 2 ಹೊತ್ತಿನ ಬದಲಾಗಿ 3 ಹೊತ್ತು ಅಂದರೆ ಮಧ್ಯಾಹ್ನವೂ ಸಾಧ್ಯವಾದರೆ ಸ್ವಲ್ಪ ಕೊಡಿ. ಇದರಿಂದ ಇಡೀ ದಿನ ಹಸುವಿನ ಕರುಳಿನಲ್ಲಿ ಆಹಾರವು ಇದ್ದು ಜೀರ್ಣ ಕ್ರಿಯೆ ಸುಲಭವಾಗಿ ಹಾಲಿನ ಇಳುವರಿ  ಹೆಚ್ಚುತ್ತದೆ ಎನ್ನುತ್ತದೆ ಸಂಶೋಧನೆ.
  10.  ಪಶುಆಹಾರವನ್ನು ನೀಡುವ ಮೊದಲು ಒಂದು ಗಂಟೆ ನೆನೆಹಾಕಿ ತಿನ್ನಲು ಕೊಡಿ. ಇದರಿಂದ ಜೀರ್ಣ ಕ್ರಿಯೆ ಸುಲಭ. ಆಹಾರ ನೀಡುವ ಮೊದಲು ಅದರಲ್ಲಿ ಒಮ್ಮೆ ಕೈಯಾಡಿಸಿ ಮೊಳೆ, ತಂತಿ ಇತ್ಯಾದಿಗಳಿವೆಯೋ ಪರೀಕ್ಷಿಸಿ. ಏಕೆಂದರೆ ಇಂತಹ ವಸ್ತುಗಳು ಹೊಟ್ಟೆಗೆ ಹೋದರೆ ಅಲ್ಲಿಂದ ಎದೆ ಗುಂಡಿಗೆ ಸೇರಿ ಸಾವನ್ನುಂಟುಮಾಡುವುದು ಇತ್ತೀಚೆಗೆ ಜಾಸ್ತಿಯಾಗಿದೆ.
  11. ಪಶು ಆಹಾರವನ್ನು ಹಾಲು ಹಿಂಡುವ ಪ್ರಾರಂಭದಲ್ಲಿ ಸ್ವಲ್ಪ ನೀಡಿ  ಹಿಂಡಿದ ನಂತರ ಉಳಿದಿದ್ದನ್ನು ನೀಡಿದರೆ ತೊರೆ ಬಿಡುವಿಕೆ ಸಕಾಲದಲ್ಲಿ ಆಗಿ ಪೂರ್ಣ ಹಾಲು ದೊರೆಯುತ್ತದೆ. ನಂತರ  ಹಸು  ಮಲಗದೇ ಆಹಾರವನ್ನು ಮೆಲ್ಲುವುದರಿಂದ ಕೆಚ್ಚಲು ಬಾವನ್ನುಂಟು ಮಾಡುವ ಬ್ಯಾಕ್ಟಿರಿಯಾಗಳು ಮೊಲೆಯ ಸಂಪರ್ಕಕ್ಕೆ ಬರುವುದು ಕಡಿಮೆಯಾಗುವುದು.
  12.  ಕರುಗಳಿಗೆ ಹುಟ್ಟಿದ ಕೂಡಲೇ ಅಥವ ಸ್ವಲ್ಪ ದಿನಗಳವರೆಗೆ ಪಶು ಆಹಾರವನ್ನು ಕೊಡಬೇಡಿ. ಕರುಗಳು ಪಶು ಆಹಾರವನ್ನು ಅದರ ರುಚಿಗೆ ಮಾರುಹೋಗಿ ಚೆನ್ನಾಗಿ ತಿಂದುಬಿಡುತ್ತದೆ. ಪಶು ಆಹಾರದಲ್ಲಿ  ಕರುಗಳಿಗೆ   ಸಾಲುವಷ್ಟು ಪ್ರೊಟೀನ್ ಇಲ್ಲದಿರುವುದರಿಂದ  ಅವುಗಳಿಗೆ ಹೊಟ್ಟೆ ಬರಲು ಪ್ರಾರಂಭವಾಗಿ  ಉದ್ದ ಕೂದಲು, ನಿಸ್ತೇಜ ಮುಖ, ರಕ್ತಹೀನತೆ, ಕುಂಠಿತ ಬೆಳವಣಿಗೆ ಇತ್ಯಾದಿ ಆಗುತ್ತವೆ. ಕಾರಣ  ಕರುಗಳಿಗೆ 3-5 ತಿಂಗಳವರೆಗೆ ತಾಯಿಯ ಹಾಲೇ ಸರ್ವಶ್ರೇಷ್ಟ ಆಹಾರ.
  13. ಜಾನುವಾರುಗಳಿಗೆ ಏನೇ ಸಮಸ್ಯೆ ಬಂದರೂ ಪಶು ಆಹಾರವನ್ನೇ ಬಲಿಪಶು ಮಾಡುವ ಹವ್ಯಾಸವನ್ನು ದೂರವಿಟ್ಟು ನಿಮ್ಮ ನಿರ್ವಹಣೆಯನ್ನು ಪರಿಶೀಲಿಸಿ ಕೊಳ್ಳಿ.
ಏನೇ ಆಗಲಿ ಮಿಶ್ರತಳಿಯ ಯುಗ ಪ್ರಾರಂಭವಾದಾಗಿನಿಂದ ಬಂದ ಈ ವಾಣಿಜ್ಯ ಪಶು ಆಹಾರಗಳು ಜಾನುವಾರು ಸಾಕಾಣಿಕೆಗೆ ಪೂರಕ. ಪಶುಪಾಲಕರು ಪ್ರಸಕ್ತ ಇರುವ ಕಾನೂನುಗಳು,ಪಶು ಆಹಾರದ ಲೋಪದೋಷಗಳು,ಅವುಗಳನ್ನು ಸರಿಪಡಿಸುವ ವಿಧಾನ ಇತ್ಯಾದಿಗಳನ್ನು ತಿಳಿದುಕೊಂಡು ಉತ್ತಮ ಹಾಲು ಉತ್ಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಪರ್ಯಾಯ ಮಾರ್ಗವೆಂದರೆ ರೈತರೇ ಸ್ವತ: ಅವರ ಜಾನುವಾರುಗಳಿಗೆ ಬೇಕಾದ ಪಶು ಆಹಾರವನ್ನು ತಯಾರಿಸಿ ಕೊಳ್ಳುವುದು.
ಉಂಡು ಸಂತಸದಿಂದಿರು (ಸ್ವತ:ಪಶುಆಹಾರ ತಯಾರಿಸಿಕೊಳ್ಳುವ ಬಗೆ) :ಜಾನುವಾರು ಆಹಾರದಲ್ಲಿ  ಪ್ರೊಟೀನ್ ಅಂಶಕ್ಕಿಂತ ಶರ್ಕರ ಪಿಷ್ಟದ ಅಂಶ ಹೆಚ್ಚು ಮುಖ್ಯ. ಶರ್ಕರ ಪಿಷ್ಟ ಸಾಕಷ್ಟು ಅಂದರೆ ಅವಶ್ಯಕ ಪ್ರಮಾಣದಲ್ಲಿ ಸಿಕ್ಕಿದರೆ ದನದ ಹೊಟ್ಟೆಯಲ್ಲಿನ ಸೂಕ್ಷ್ಮಾಣುಗಳು ಇದರಿಂದ ತಯಾರಿಸುವ ಪ್ರೊಟೀನ್ ಬಳಸಿ ಹಾಲಿನ ಉತ್ಪಾದನೆಗೆ ಬಳಸುತ್ತವೆ. ಸಾಮಾನ್ಯವಾಗಿ ಶೇ: 17-20  ಪ್ರೊಟಿನ್‍ನೀಡುವ ಪಶು ಆಹಾರ 15-20 ಲೀಟರ್ ಹಾಲು ನೀಡುವ ದನಗಳಿಗೆ ಸೂಕ್ತ ಪ್ರಮಾಣದಲ್ಲಿ ಅಂದರೆ ಪ್ರತಿ ಲೀಟರ್ ಹಾಲಿಗೆ ಅರ್ಧ ಕೆ.ಜಿ. ಮತ್ತು ಶರೀರ ನಿರ್ವಹಣೆಗೆ 2 ಕೆ.ಜಿ. ನೀಡಿದರೆ ಉತ್ತಮ ಪಲಿತಾಂಶ ಬಂದೀತಾದರೂ ತಯಾರಿಕಾ ವೆಚ್ಚಸ್ವಲ್ಪ ಜಾಸ್ತಿಯಾಗಬಹುದು. ಆದರೆ ಪಶು ಆರೋಗ್ಯ ದೃಷ್ಟಿಯಿಂದ ನೋಡಿದಾಗ ಅಂತಹ ಮಹತ್ತದ್ದೇನೂ ಅಲ್ಲ. ಪಶು ಆಹಾರವನ್ನು ಈ ಕೆಳಗಿನಂತೆ ತಯಾರಿಸಿಕೊಳ್ಳಬಹುದು.
ಈ ಕೋಷ್ಟಕ ಸರ್ವತ್ರವೂ ಅಲ್ಲ ಸಾರ್ವತ್ರಿಕವೂ ಅಲ್ಲ. ನಾವೇ ಕಾಲಕ್ಕೆ ತಕ್ಕಂತೆ ಸ್ವಲ್ಪಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಒಬ್ಬರೇ ಮಾಡುವುದಕ್ಕಿಂತ 10-12 ಜನಸೇರಿ ಅಥವಾ ಸಹಕಾರ ಸಂಘ ರಚಿಸಿಕೊಂಡು ಮಾಡಿದರೆ ವೆಚ್ಚ ಕಡಿಮೆಯಾದೀತು. ಈ ರೀತಿಯ ಚಟುವಟಿಕೆಗಳು ಅನೇಕ  ಯಶಸ್ವಿಯಾಗಿ ನಡೆಸಲಾಗುತ್ತಿದೆ. ದೂರಗಾಮಿ ದೃಷ್ಟಿಯಲ್ಲಿ ವಿಚಾರ ಮಾಡಿದಾಗ ಲಾಭದಾಯಕ ಹೈನುಗಾರಿಕೆ ವೈಜ್ಞಾನಿಕ ವಿಧಾನದಿಂದ ಮಾತ್ರ ಸಾಧ್ಯ.
ಪಶು ಆಹಾರದಲ್ಲಿ ಯೂರಿಯಾ ಮಿಶ್ರಣ :  ಅಧಿಕ ಹಾಲು ನೀಡುವ ಮಿಶ್ರತಳಿ ಜಾನುವಾರುಗಳ ಆಹಾರದಲ್ಲಿ ಶೇ:2 ರಷ್ಟು ಯೂರಿಯಾವನ್ನು ಬೆರೆಸಲಾಗುತ್ತದೆ. ಇದರ ಉದ್ದೇಶ ಪಶು ಆಹಾರಕ್ಕೆ ಕಡಲೆ ಕಾಯಿ ಹಿಂಡಿ, ಸೋಯ ಹಿಂಡಿ ಅಥವಾ ಹತ್ತಿ ಕಾಳು ಹಿಂಡಿಯಂತ ದುಬಾರಿ ವೆಚ್ಚದ ಪ್ರೊಟೀನ್ ಆಗರಗಳನ್ನು ಕಡಿಮೆ ಮಾಡಿ ಅವುಗಳ ಬದಲು ಯೂರಿಯಾ ಮಿಶ್ರಣ ಮಾಡುವುದು.
ಯೂರಿಯಾ ಸಾರಜನಕವನ್ನು ಒದಗಿಸುತ್ತದೆ.  ಇದನ್ನು ಪಶುವಿನ ಮೆಲುಕು ಚೀಲದಲ್ಲಿನ ಕೋಟ್ಯಾನು ಕೋಟಿ  ಸೂಕ್ಷ್ಮಜೀವಿಗಳು ಅವುಗಳಿಗೆ ಅಗತ್ಯವಿರುವ  ಪ್ರೊಟೀನ್ ಉತ್ಪಾದಿಸಲು ಬಳಸುತ್ತವೆ. ಈ ಪ್ರೊಟೀನ್ ಪಶುಗಳಿಗೆ ಸಹ ಅಗತ್ಯ ಅಮೈನೋ ಆಮ್ಲ ಮತ್ತು ಅವಶ್ಯಕ ಪ್ರೊಟೀನ್ ಆಗಿ ಪಿತ್ತಜನಕಾಂಗದಲ್ಲಿ  ಪರಿವರ್ತನೆಗೊಳ್ಳುತ್ತದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಅಗತ್ಯ ಪ್ರೊಟೀನ್ ಉತ್ಪಾದನಾ ವೆಚ್ಚ ತಗ್ಗುತ್ತದೆ. ಆದರೆ ಇದನ್ನು ಸರಿಯಾದ ಪ್ರಮಾಣದಲ್ಲಿ ಶೇ:2 ಕ್ಕೆ ಮೀರದಂತೆ ಬಳಸಬೇಕು ಎಂಬುದು ಪಶುಪೋಷಣಾ ತಜ್ಞರ ಅಭಿಪ್ರಾಯ. ಆದರೆ ಈ ರೀತಿ ಯೂರಿಯಾವನ್ನು ಪಶು ಅಹಾರದಲ್ಲಿ ಬಳಸಬೇಕಾದರೆ ಪಶು ಅಹಾರದಲ್ಲಿನ ಉಳಿದ ಪೌಷ್ಟಿಕಾಂಶಗಳು ಸಮತೋಲ ಪ್ರಮಾಣದಲ್ಲಿರಬೇಕು. ಜಾಸ್ತಿ ಪ್ರಮಾಣದಲ್ಲಿ ಯೂರಿಯಾ ಬಳಸಿದಾಗ ವಿವಿಧ ಕಿಣ್ವಗಳು ಮತ್ತು ಸೂಕ್ಷ್ಮಾಣು ಜೀವಿಗಳ ಸಹಾಯದಿಂದ  ಅಗಾಧ ಪ್ರಮಾಣದಲ್ಲಿ ಉತ್ಪನ್ನವಾಗುವ ಅಮೋನಿಯಾವೇ ವಿಷಬಾಧೆಗೆ ಕಾರಣ. ಅಗಾಧ ಪ್ರಮಾಣದ ಅಮೋನಿಯಾವೇ ಯೂರಿಯಾ ವಿಷಬಾಧೆಗೆ ಕಾರಣ.ಅವಶ್ಯಕ ಪ್ರಮಾಣದಲ್ಲಿ ಬಳಸಿದರೆ ಇದು ಹಾನಿಕರವಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಪಶು ಆಹಾರದಲ್ಲಿ ಕಾಕಂಬಿ :  ಕಾಕಂಬಿ ಶರ್ಕರ ಪಿಷ್ಟ ಅಥವಾ ಕಾರ್ಬೋಹೈಡ್ರೇಟ್ ಮುಖ್ಯ ಮೂಲ. ಇದು ಬಹಳ ಬೇಗ ಜೀರ್ಣಗೊಳ್ಳುವ ಶಕ್ತಿಯ ಮೂಲ. ಆದರೆ ಇದನ್ನೂ ಸಹ ಜಾಸ್ತಿ ಬಳಸಿದರೆ ಆಮ್ಲತೆ ಆಗುತ್ತದೆ. ಇದು ಹಿಂಡಿಯನ್ನು ಗುಳಿಗೆ ಮಾಡಲು ಮತ್ತು ಹಿಂಡಿಗೆ ರುಚಿ ಜಾಸ್ತಿಯಾಗಲು ಸಹ ಅಗತ್ಯ.
ಕೊನೆಯ ಮಾತು : ಈಗಿರುವ ಯುಟ್ಯೂಬ್, ಫೇಸ್ಬುಕ್ ಇತ್ಯಾದಿ ಮಾಹಿತಿ ಪ್ರಪಂಚದ ಸುರಿಮಳೆಯಲ್ಲಿ ಎಲ್ಲರೂ ತಜ್ಞರೇ ಆಗಿ ಬಿಟ್ಟಿದ್ದಾರೆ. ಇದರಲ್ಲಿ ಕಾಳು ಯಾವುದು, ಜೊಳ್ಳು ಯಾವುದು ಎಂಬುದನ್ನು ಹೆಕ್ಕಿ ತೆಗೆಯುವುದು ಕಷ್ಟದ ಕೆಲಸ.ಯಾರದೋ ಮಾತು ಕೇಳಿ, ಜಾಹೀರಾತುಗಳನ್ನು  ಮಾರುಕಟ್ಟೆಯಲ್ಲಿ ದೊರಕುವುದೆಲ್ಲಾ ಉತ್ತಮವಾದದ್ದು ಎಂದು ತಿನ್ನಿಸಲು ಹೋಗಿ ಪಶುವಿನ ಪ್ರಾಣಕ್ಕೇ ಸಂಚಕಾರ ತಂದುಕೊಂಡವರು ಅನೇಕ. ಸಮತೋಲಿತ ಪಶು ಆಹಾರವೇ ಬೇಡ, ಬೂಸಾ ಸಾಕು ಇತ್ಯಾದಿಗಳೆಲ್ಲನ್ನೆಲ್ಲಾ ಹೇಳುವ ಸ್ವಯಂಘೋಷಿತ “ತಜ್ಞ”ರಿಂದ ದೂರವಿರಿ.
ಆಸಂಪ್ರಾದಾಯಿಕ ಮೇವುಗಳಾದ ಅಡಿಕೆಯ ಹಾಳೆ,  ಯಾವುದೋ ಅಪರಿಚಿತ ಮರದ ಸೊಪ್ಪು, ಹಲಸಿನ ಹಣ್ಣು ಇವನ್ನೆಲ್ಲಾ ಹಾಕಲು ಹೋಗಲೇ ಬಾರದು. ಹೈಡ್ರೋಫೋನಿಕ್ಸ್, ಅಝೋಲಾ ಇವೆಲ್ಲಾ ಪೂರಕ ಆಹಾರಗಳೇ ಹೊರತು ಪೂರ್ಣ ಸಮತೋಲ ಆಹಾರವಾಗಲು ಸಾಧ್ಯವಿಲ್ಲ. ಹೊಸ ಪಶು ಆಹಾರ ಮಾಡುವಾಗ ತಜ್ಞರ ಸಲಹೆ ಪಡೆದೇ ಮುಂದುವರೆಯಿರಿ. ನಿಮ್ಮಲ್ಲೇ ನೈಸರ್ಗಿಕವಾಗಿ ದೊರಕುವ ಕಚ್ಚಾವಸ್ತುಗಳನ್ನು ತಕ್ಕ ಮಟ್ಟಿಗೆ ಬಳಸುವುದು, ಹೇರಳ ಹಸಿರು ಹುಲ್ಲು ಬೆಳೆಯುವುದು, ಸ್ವಲ್ಪ ದುಬಾರಿಯಾದರೂ ಪಕ್ಕಾ ಗುಣ ಮಟ್ಟದ ಖಾತ್ರಿಯ ಸ್ವತ: ಪಶು ಆಹಾರ ತಯಾರಿಕೆ ಇತ್ಯಾದಿಗಳನ್ನೂ ಸಹ ಅನುಸರಿಸಬಹುದು.
ಡಾ:ಎನ್.ಬಿ.ಶ್ರೀಧರ
ಬರಹ :
ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರಮತ್ತು ವಿಷಶಾಸ್ತ್ರವಿಭಾಗ,
ಪಶುವೈದ್ಯಕೀಯಮಹಾವಿದ್ಯಾಲಯ, ಶಿವಮೊಗ್ಗ-577204

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇಘಾಲಯದಲ್ಲಿ “ಜಾಕ್‌ ಫ್ರುಟ್‌ ಮಿಶನ್”‌ ಮೂಲಕ ಹಲಸು ಬೆಳೆಗೆ ಪ್ರೋತ್ಸಾಹ | ಮೇಘಾಲಯದ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಲಸಿನ ಹಣ್ಣು ಗಿಫ್ಟ್‌ |
July 15, 2025
8:01 AM
by: The Rural Mirror ಸುದ್ದಿಜಾಲ
ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ
July 15, 2025
7:26 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ
July 14, 2025
11:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group