ಸಮುದ್ರದ ತಳಭಾಗದಲ್ಲಿ ಹೀಟ್‌ವೇಟ್ ಹರಿದಾಡುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದುವರೆಗೆ ಭೂಮಿಯ ಮೇಲ್ಮೈ ಹಾಗೂ ಸಮುದ್ರದ ಮೇಲ್ಮೈಯ ಹೀಟ್ ವೇವ್ ಬಗ್ಗೆ ಅಧ್ಯಯನ ನಡಸಲಾಗುತ್ತಿತ್ತು. ಇದೀಗ ಸಮುದ್ರದ ತಳಭಾಗದಲ್ಲಿಯೂ ಈ ಅಲೆಗಳು ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಅಲೆಗಳು ಜಗತ್ತಿನಾದ್ಯಂತ ಸಾಗರ ಪರಿಸರ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತಿವೆ. ಇದರ ಸಾಧಕ-ಬಾಧಕಗಳ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದಾರೆ.
ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಸಂಶೋಧಕರ ನೇತೃತ್ವದ ತಂಡದ ಅಧ್ಯಯನವು ಹೊಸ ಸಂಗತಿಗಳನ್ನು ತಿಳಿಸಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಈ ಅಲೆಗಳ ಗುಣಲಕ್ಷಣಗಳನ್ನು ಮತ್ತು ಸಮುದ್ರ ಹಾಗೂ ಪ್ರಪಂಚದ ಮೇಲೆ ಬೀರುವ ಪ್ರಭಾವವನ್ನು ಮತ್ತಷ್ಟು ಅಧ್ಯಯನ ಮಾಡಲು ಪ್ರಯತ್ನ ಮಾಡುತ್ತಿದೆ.
ಸಮುದ್ರದ ಈ ಹೀಟ್ ವೇವ್ ಹೆಚ್ಚಿನ ತೀವ್ರತೆಯನ್ನು ಹೊಂದಿವೆ ಎಂದು ಅಧ್ಯಯನ ವರದಿ ಹೇಳಿದೆ. ಸಾಗರಗಳ ಆಳದಲ್ಲಿ 0.5 ಡಿಗ್ರಿಗಳಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣತೆ ಬದಲಾಗುತ್ತದೆ. ಕಳೆದ 100 ವರ್ಷಗಳಲ್ಲಿ ಸಾಗರವು ಸುಮಾರು 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಜಾಗತಿಕ ತಾಪಮಾನದಿಂದಲೇ 90% ಹೆಚ್ಚುವರಿ ಉಷ್ಣತೆ ಸಾಗರವು ಸೆಳೆದುಕೊಂಡಿದೆ ಎಂದು ಅಧ್ಯಯನವು ಹೇಳುತ್ತದೆ. ಹೀಗಾಗಿ ಕಳೆದ ಹತ್ತು ವರ್ಷಗಳಲ್ಲಿ ಸಮುದ್ರದ ಶಾಖದ ಅಲೆಗಳ ಆವರ್ತನವು ಸುಮಾರು 50% ರಷ್ಟು ಹೆಚ್ಚಾಗಿದೆ. ಈ ಅಲೆಗಳು ಪ್ರಪಂಚದಾದ್ಯಂತದ ಸಾಗರ ಪರಿಸರ ವ್ಯವಸ್ಥೆಗಳ ಆರೋಗ್ಯದ ಮೇಲೆ ಪ್ರಭಾವ ಬೀರಿವೆ. ಮೀನುಗಳು ಹಾಗೂ ಸಮುದ್ರ ಜೀವಿಗಳ ಮೇಲೆಯೂ ಪರಿಣಾಮ ಬೀರಲು ಆರಂಭವಾಗಿದೆ.
ಈ ಎಲ್ಲದರ ನಡುವೆಯೇ ಈಚೆಗೆ ವಾಯುಭಾರ ಕುಸಿತ, ವಿಪರೀತ ಮಳೆ, ಹವಾಮಾನ ಬದಲಾವಣೆಗಳು ಹೆಚ್ಚಾಗಲು ಆರಂಭವಾಗಿದೆ. ಈ ಎಲ್ಲದರ ಬಗ್ಗೆಯೂ ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ನಡೆಸಲು ಆರಂಭಿಸಿದ್ದಾರೆ.