ಮುಂಬರುವ ದಿನಗಳಲ್ಲಿ ಹಣದ ಲಭ್ಯತೆ ಆಧಾರಿಸಿ ಎಲ್ಲಾ ರೈತರಿಗೆ ಮೂರು ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ, ಹೇಳಿದ್ದಾರೆ.………ಮುಂದೆ ಓದಿ……..
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಅರ್ಹ ರೈತರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ದೊರಕಿಸಲಾಗುವುದು ಎಂದು ತಿಳಿಸಿದರು. 2023-24ನೇ ಸಾಲಿನ ಆಯವ್ಯಯ ಮಂಡನೆ ಸಂದರ್ಭದಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲದ ಮಿತಿಯನ್ನು 3 ಲಕ್ಷದಿಂದ 5.00 ಲಕ್ಷ ರೂಪಾಯಿಗೆ ಏರಿಸಲಾಗಿದ್ದು, ಈ ಮಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 2023-24 ಸಾಲಿನಲ್ಲಿ 6,744 ರೈತರಿಗೆ 290.51 ಕೋಟಿ ರೂಪಾಯಿ ಹಾಗೂ 2024-25 ಸಾಲಿನಲ್ಲಿ ಫೆಬ್ರವರಿವರೆಗೆ 13,689 ರೈತರಿಗೆ 589.12 ಕೋಟಿ ರೂಪಾಯಿ ಮೊತ್ತದ ಸಾಲ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ 10 ಕೃಷಿ ವಲಯಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಪ್ರತಿ ಬೆಳೆಗೆ ನಿಗದಿಪಡಿಸಿದ ಸ್ಕೆಲ್ ಆಫ್ ಫೈನಾನ್ಸ್ ಮಿತಿ, ರೈತರು ಹೊಂದಿರುವ ಭೂ ಹಿಡುವಳಿ ಹಾಗೂ ಬೆಳೆಯುವ ಬೆಳೆ ಆಧರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಗರಿಷ್ಠ ಸಾಲದ ಮಿತಿಯನ್ನು ನಿಗದಿಪಡಿಸಿದ್ದು ಇದರನ್ವಯ 1,73,449 ರೈತರು 5.00 ಲಕ್ಷಗಳವರೆಗಿನ ಸಾಲ ಪಡೆಯಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಇದರಲ್ಲಿ ಫೆಬ್ರವರಿವರೆಗೆ 13,689 ರೈತರಿಗೆ ರೂ.589.12 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ.ಕೆಲವು ಕಾರಣಗಳಿಂದ ಸಾಲ ವಿತರಣೆ ಮಾಡಲು ಸಮಸ್ಯೆಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಮುಂದೆ ರೈತರ ಬೇಡಿಕೆ, ನಬಾರ್ಡ್ ಮತ್ತು ಡಿಸಿಸಿ ಬ್ಯಾಂಕುಗಳ ಬಂಡವಾಳ ಆಧರಿಸಿ ಪ್ರತಿ ವರ್ಷ ಶೇ.10 ರಿಂದ ಶೇ.20 ರಷ್ಟು ಪ್ರಮಾಣದಲ್ಲಿ ಮಾತ್ರ ಹೆಚ್ಚುವರಿ ಸಾಲವನ್ನು ವಿತರಿಸಲು ಸಹಕಾರ ಸಂಘಗಳು ಸಶಕ್ತವಾಗಿರುತ್ತವೆ. ಇದರ ಆಧಾರದ ಮೇಲೆ 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ 25,000 ಕೋಟಿ ರೂಪಾಯಿ ವಿತರಿಸುವ ಗುರಿ ಹೊಂದಲಾಗಿದ್ದು, ಈ ಮಿತಿಯನ್ನು ವರ್ಷದಲ್ಲಿ ತಲುಪಲು ಕ್ರಮವಹಿಸಲಾಗಿದೆ ಎಂದು ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.