ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತೆ . ಇಂದು 9ನೇ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2015 ರ ಜೂನ್ 21ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಯೋಗ ಪ್ರಾಚೀನ ಕಲೆ. ಇದು 5000 ವರ್ಷಗಳ ಆಳವಾದ ಬೇರೂರಿರುವ ಇತಿಹಾಸವನ್ನು ಹೊಂದಿದೆ. ದೈಹಿಕ ಭಂಗಿಗಳೊಂದಿಗೆ (ಆಸನಗಳು) ಉಸಿರಾಟದ ವ್ಯಾಯಾಮಗಳ (ಪ್ರಾಣಾಯಾಮ) ಸಂಯೋಜನೆಯ ಮೂಲಕ ಮನಸ್ಸು ಮತ್ತು ದೇಹದ ಆಧ್ಯಾತ್ಮಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಇದು ಸಮಗ್ರ ವಿಧಾನವಾಗಿದೆ. ಅಂತರರಾಷ್ಟ್ರೀಯ ಯೋಗ ದಿನವು ಯೋಗ ಮಾಡುವುದರಿಂದಾಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪ್ರಯೋಜನಗಳನ್ನು ಹೊಂದಿದೆ ಹಾಗೂ ಯೋಗವನ್ನು ವಿಶ್ವಾದ್ಯಂತ ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಭಾರತ ಮತ್ತು ಯೋಗದ ನಡುವಿನ ವಿಶಿಷ್ಟ ಸಂಪರ್ಕ: ಭಾರತ ಮತ್ತು ಯೋಗವು ಪ್ರಪಂಚದ ಇತರ ದೇಶಗಳಿಗಿಂತ ವಿಶೇಷವಾದ ಸಂಬಂಧವನ್ನು ಹೊಂದಿದೆ. ಆಧ್ಯಾತ್ಮಿಕ ಭಾರತಕ್ಕೆ ತೆರೆದುಕೊಳ್ಳಲು ಮತ್ತು ಆಳವಾದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ಯೋಗದ ಮೂಲಕ್ಕೆ ಯಾವುದೇ ಬಲವಾದ ಪುರಾವೆಗಳಿಲ್ಲ. ಆದಾಗ್ಯೂ, ಅನೇಕ ಪುರಾತತ್ವಶಾಸ್ತ್ರಜ್ಞರು ಬುದ್ಧನ ಕಾಲದಲ್ಲಿ ಯೋಗವು ಭಾರತದಲ್ಲಿ ಹುಟ್ಟಿಕೊಂಡಿರಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ವಿಪರ್ಯಾಸವೆಂದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕಾಗಿ ಒಂದು ದಿನವನ್ನು ಮೀಸಲಿಡುವ ಕ್ರಮಗಳನ್ನು ಪ್ರಾರಂಭಿಸುವ ದೇಶ ಭಾರತವಾಗಿದೆ.
2014 ರ ಯುನೈಟೆಡ್ ನೇಷನ್ಸ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾವನೆಗೆ 177 ಸದಸ್ಯ ರಾಷ್ಟ್ರಗಳಿಂದ ಅನುಮೋದನೆ ಸಿಕ್ಕಿತ್ತು. ವಿಶ್ವ ರಾಷ್ಟ್ರಗಳಿಂದ ಅತ್ಯಧಿಕ ಬೆಂಬಲವನ್ನು ಪಡೆದಿರುವ ಪ್ರಸ್ತಾವನೆ ಇದಾಗಿದ್ದು, ನಂತರ, ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವೆಂದು ಆಚರಣೆಗೆ ತರಲಾಯಿತು.
2015 ರ ಜೂನ್ 21ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ವಿಶೇಷ ದಿನದಂದು ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ಸುಮಾರು 36000 ಉನ್ನತ ವ್ಯಕ್ತಿಗಳೊಂದಿಗೆ 35 ನಿಮಿಷಗಳ ಕಾಲ 21 ಯೋಗ ಆಸನಗಳನ್ನು ಪ್ರದರ್ಶಿಸಿದರು. ಅಂದಿನಿಂದ ಇಂದಿನವರೆಗೂ ಅದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.