ಶಿವಮೊಗ್ಗ(Shivmoga) ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀರಾಮ ಕ್ಷೇತ್ರ ಮೃಗವಧೆ ಎಂಬಲ್ಲಿನ ಜೇನು ಕೃಷಿಕ(Honey bee farmer) ಶ್ರೀ ನಾಗೇಂದ್ರ ಎಂಬ ಸಾಧಕ ರ “ಮಧು ಕೇರಿ” ಇದೆ.. ಈ ಜೇನು ಕಾರ್ಖಾನೆಯ ಒಂದು ಸುತ್ತು ಹಾಕೋಣ ಬನ್ನಿ..
ಸಾಮಾನ್ಯವಾಗಿ ಮಲೆನಾಡಿನ ರೈತಾಪಿಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಜೇನು ಕುಟುಂಬದ ಒಂದೋ ಎರಡೋ ಜೇನು ಪೆಟ್ಟಿಗೆ ಇರುತ್ತದೆ.. ಆದರೆ ಮೃಗವಧೆ ಊರಿನ ನಾಗೇಂದ್ರ ರವರ ಮನೆಯ ಜಮೀನಿನ ಆವರಣದಲ್ಲಿ ಸುಮಾರು 150 ಜೇನು ಕುಟುಂಬಗಳಿದ್ದು ಅದರಿಂದ ವಾರ್ಷಿಕ ನಾಲ್ಕೂವರೆಯಿಂದ ಐದು ಕ್ವಿಂಟಾಲ್ ಜೇನು ತುಪ್ಪವನ್ನು ಸಂಗ್ರಹಿಸಿ ಸಂಸ್ಕರಿಸಿ ಕಿಲೋವೊಂದಕ್ಕೆ ಸಾವಿರದಿನ್ನೂರು ರೂಪಾಯಿಯ ಬೃಹತ್ ಮೊತ್ತಕ್ಕೆ ಮಾರಾಟ ಮಾಡಿ ತಮ್ಮ ಜೇನು ಕೃಷಿಗೊಂದು ಗೌರವಯುತ ಆದಾಯ ಕಂಡು ಕೊಂಡಿದ್ದಾರೆ..
ಇದೆಲ್ಲಾ ಹೇಗಾಯಿತು ಎಂದಿರಾ.? : ನಾಗೇಂದ್ರ ರವರು ಮೂಲತಃ ವಾರಾಹಿ ನದಿ ಮುಳುಗಡೆ ಸಂತ್ರಸ್ತರು. ಆ ಕಾಲದಲ್ಲಿ ಹಲವಾರು ಕೌಟುಂಬಿಕ ಸಮಸ್ಯೆಯಡಿಯಲ್ಲಿ ಪಾಲು ಪಚಡಿ ಅವ್ಯವಸ್ಥೆಯಾಗಿ ನಾಗೇಂದ್ರ ಪೋಷಕರು ಮೃಗವಧೆಯಲ್ಲಿ ಜಮೀನು ಕೊಂಡು ನೆಲಸಿದರು. ಎಳೆಂಟೆಕರೆ ಕಾಡಿನ ಹಿನ್ನೆಲೆಯ ಪಕ್ಕದ ಜಾಗದಲ್ಲಿ ಅಡಿಕೆ ತೋಟ ಮಾಡಿದ್ದಾರೆ.
ಎರಡೂವರೆ ದಶಕದ ಹಿಂದಿನ ಕಾಲದಲ್ಲಿ ಎಲ್ಲ ಮಧ್ಯಮ ವರ್ಗದವರಂತೆ ಆರಕ್ಕೇರಲು ಶತ ಪ್ರಯತ್ನ ಪಡುವ ಕಾಲವದು. ತಲತಲಾಂತರಗಳಿಂದ ಬಾಳಿ ಬದುಕಿದ್ದ ಮೂಲ ನೆಲೆಯಿಂದ ಹೊಸ ಊರಿಗೆ ಬಂದು ಬದುಕು ಮುಂದುವರಿಸಿಕೊಂಡು ಹೋಗುವ ಸವಾಲು ದೊಡ್ಡದು..
ನಾಗೇಂದ್ರ ರವರು ಪಿಯುಸಿ ವಿಧ್ಯಾಭ್ಯಾಸದ ನಂತರ ಮನೆಗೆ ಬಂದು ತಂದೆಯ ಕೃಷಿಗೆ ಸಹಾಯಕ್ಕೆ ನಿಂತರು. ಹತ್ತಾರು ಜಾನುವಾರುಗಳ ಕಟ್ಟಿ ಹೈನುಗಾರಿಕೆ ಮಾಡಿದ್ದರು. ತದನಂತರ ಒಂದು ಚೈನ್ ಲಿಂಕ್ ಆಹಾರೋದ್ಯಮದಲ್ಲಿ ತಾವೂ ಏಜನ್ಸಿ ಪಡೆದು ಮಾರುಕಟ್ಟೆಗಿಳಿದರು. ಅದು ಶ್ರೀ ನಾಗೇಂದ್ರರವರಿಗೆ ಅಪಾರವಾದ ಜೀವನಾನುಭವ ನೀಡಿತ್ತು. ಆ ಚೈನ್ ಲಿಂಕ್ ಸಂಸ್ಥೆ ತಿಂಗಳಿಗೆ ಐವತ್ತು ಸಾವಿರ ವ್ಯವಹಾರ ಮಾಡಿದ ಏಜೆಂಟ್ ರಿಗೆ ಸುಲಭ ಕಂತಿನ ಬೈಕ್ ನ್ನ ನೀಡುವ ಆಫರ್ ನೀಡಿತ್ತು. ಅದು ನಾಗೇಂದ್ರರಿಗೆ ಯೌವನದ ಉಮೇದಿನ ಸಮಯ.. ನಾನೂ ಬೈಕ್ ಮಾಲಿಕ ಆಗಬೇಕು ಎನ್ನುವ ಆ ಕಾಲದ ಅನೇಕ ಯುವಕರಂತೆ ತಾನೂ ಬೈಕ್ ಹೊಂದಬೇಕು ಎನ್ನುವ ಆಸೆಗೆ ಆ ಸಂಸ್ಥೆಯ ಉತ್ಪನ್ನಗಳನ್ನು ತಿಂಗಳೊಳಗೆ ಸುಮಾರು ನಲವತ್ತೈದು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನ ಮಾರಾಟ ಮಾಡುವ ಟಾರ್ಗೆಟ್ ತಲುಪಿದರು. ಆದರೆ ಕಂಪನಿಯ ಐವತ್ತು ಸಾವಿರ ಮೊತ್ತ ಭರ್ತಿಯಾಗಲಿಲ್ಲ. ಅಂತಿಮ ಟಾರ್ಗೆಟ್ ಮೊತ್ತ ತಲುಪಲು ಕೇವಲ ಐದು ಸಾವಿರ ಮೊತ್ತವನ್ನ ಯುವಕ ನಾಗೇಂದ್ರರಿಗೆ ತಲುಪಾಲಾಗದ ಹತಾಶೆಯಿಂದ ತೀವ್ರ ಮನನೊಂದು ಆ ನಂತರದಿಂದ ಈ ಚೈನ್ ಲಿಂಕ್ ಉದ್ಯೋಗದಿಂದ ಸಂಪೂರ್ಣ ಹೊರಬಂದು ಸ್ವಂತ ಏನಾದರೂ ಯಾರ ಹಂಗಿಲ್ಲದೇ ದುಡಿಯಬೇಕು ಎಂದು ಛಲ ತೊಟ್ಟರು..
ನಾಗೇಂದ್ರರವರು ಆ ನಿಟ್ಟಿನಲ್ಲಿ ಎರಡು ಬಗೆಯ ಉದ್ಯೋಗ ಉತ್ತಮ ಎಂದು ಕಂಡುಕೊಂಡರು. ಒಂದು – ವೀಳ್ಯದೆಲೆ ಬೆಳೆ ಕೊಯ್ಲು ಮಾರಾಟ.. ಎರಡು – ಜೇನು ಕೃಷಿ.. ವೀಳ್ಯದೆಲೆಯ ಕೃಷಿ ಮಾರಾಟದ ಬಗ್ಗೆ ನಾಗೇಂದ್ರ ರವರು ಉತ್ತಮವಾಗಿ ವಿಶ್ಲೇಷಣೆ ಮಾಡುತ್ತಾರೆ. ಆವತ್ತಿಗೂ ಇವತ್ತಿಗೂ ವೀಳ್ಯದೆಲೆ ಬೆಳೆ ಅತ್ಯುತ್ತಮ ಆದಾಯ ತರುವ ಬೆಳೆ ಎನ್ನುತ್ತಾರೆ. ನಾಗೇಂದ್ರ ರವರಿಗೆ ವೀಳ್ಯದೆಲೆ ಕೃಷಿ ಮಾಡಲು ಆರಂಭಿಕ ಬಂಡವಾಳ ಹೂಡಲು ಬಂಡವಾಳ ಮತ್ತು ಕೂಲಿ ಕಾರ್ಮಿಕರನ್ನು ಹೊಂದಿಸುವುದು ಕಷ್ಟ ವಾಗಿ ಆ ಯೋಜನೆ ಕೈ ಬಿಟ್ಟರು. ನಂತರ ಆರಿಸಿಕೊಂಡದ್ದು ಜೇನು ಕೃಷಿ.
ನಾಗೇಂದ್ರ ರವರಂತೆ ಒಂದೇ ಬಾರಿಗೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಜೇನು ಕೃಷಿ ಮಾಡಲು ಕಷ್ಟ. ನಾಗೇಂದ್ರರವರು ಚಿಕ್ಕ ಪ್ರಮಾಣದಲ್ಲಿ ಜೇನು ಕೃಷಿ ಮಾಡುತ್ತಾ ಮೊದಲು ಮಾರುಕಟ್ಟೆಯ ಬಗ್ಗೆ ಗಮನ ಹರಿಸಿ ತಮ್ಮ ಜೇನು ತುಪ್ಪದ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆಗಳನ್ನು ಕಂಡು ಕೊಂಡು ನಂತರ ಹಂತ ಹಂತವಾಗಿ ಜೇನು ಪೆಟ್ಟಿಗೆಯನ್ನು ಹೆಚ್ಚಿಸುತ್ತಾ ಹೋದರು. ನಿಮಗೆ ಅಚ್ಚರಿಯಾಗಬಹುದು ನಾಗೇಂದ್ರರವರು ತಮ್ಮ ಮನೆ ಜಮೀನು ಸುತ್ತ ಸುಮಾರು ನಲವತ್ತು ಅಡಿ ಅಂತರದಲ್ಲಿ ಒಟ್ಟು ನೂರೈವತ್ತು ಜೇನು ಪೆಟ್ಟಿಗೆಗಳನ್ನು ಇಟ್ಟು ಪ್ರತಿ ಪೆಟ್ಟಿಗೆಗೆ ಮೂರು ಕೆಜಿ ಜೇನು ತುಪ್ಪವನ್ನು ಪಡೆಯುತ್ತಾ ಒಟ್ಟು 450 ಕೆಜಿ ಜೇನು ತುಪ್ಪವನ್ನು ಪಡೆಯುತ್ತಿದ್ದಾರೆ. ಇದಲ್ಲದೆ ನಾಗೇಂದ್ರ ರವರು ಪರಿಚಿತ ಆತ್ಮೀಯರ ಜಮೀನಿನಲ್ಲೂ ನೂರಕ್ಕೂ ಹೆಚ್ಚಿನ ಜೇನು ಪೆಟ್ಟಿಗೆ ಇಟ್ಟು ನಿರ್ವಹಣೆ ಮಾಡುತ್ತಿದ್ದಾರೆ. ನಾಗೇಂದ್ರರವರು ಜೇನು ಕೃಷಿ ಪ್ರೀತಿಗಾಗಿ ಸುಮಾರು ಎಂಟು ಎಕರೆ ಸಹಜ ಅರಣ್ಯವನ್ನು ಪೋಷಿಸಿದ್ದಾರೆ.
ಕೇವಲ ಒಬ್ಬನೇ ಒಬ್ಬ ಮನುಷ್ಯ ಸುಮಾರು ಇನ್ನೂರೈವತ್ತು ಜೇನು ಕುಟುಂಬಗಳ ನಿರ್ವಹಣೆ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ ಎನಿಸುತ್ತದೆ. ಜೇನು ಕೃಷಿಯಲ್ಲಿ ಏನು ಮಹಾ ಲಾಭ ಸಿಗುತ್ತದೆ ..? ಎಂದು ಪ್ರಶ್ನಿಸುವವರಿಗೆ ನಾಗೇಂದ್ರ ಮೃಗವಧೆ ಜೇನು ತುಪ್ಪ ವ್ಯಾಪಾರದಲ್ಲಿ ವಾರ್ಷಿಕವಾಗಿ ಲಕ್ಷಾಂತರ ಹಣದ ವ್ಯವಹಾರ ಮಾಡಿ ತೋರಿಸಿದ್ದಾರೆ.ನಾಗೇಂದ್ರ ಬಹಳಷ್ಟು ಜನ ಆಸಕ್ತ ಜೇನು ಕೃಷಿಕರಿಗೆ ಮಾರ್ಗದರ್ಶಕರೂ ಹೌದು.
ಇತ್ತೀಚಿಗೆ ಪಟ್ಟಣ ದ ಯಾವುದೋ ಸಂಸ್ಥೆ ಮಲೆನಾಡಿನ ರೈತರಿಗೆ ಜೇನು ಪೆಟ್ಟಿಗೆ, ಜೇನು ಹುಳಕ್ಕೆ ಸೇರಿ 4200 ರೂಪಾಯಿ ವಿಧಿಸಿದ್ದನ್ನ ಉಲ್ಲೇಖಿಸಿ ಜೇನು ಕೃಷಿ ಆಸಕ್ತರು ಈ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳುತ್ತಾ.. ಸಾಮಾನ್ಯವಾಗಿ ಒಂದು ಜೇನು ಪೆಟ್ಟಿಗೆ + ಜೇನು ಹುಳ + ಸ್ಟ್ಯಾಂಡ್ ಸೇರಿ ಹೆಚ್ಚೆಂದರೆ ಎರಡು ಸಾವಿರದ ಐದುನೂರು ರೂಪಾಯಿ ಬೀಳಬಹುದು. ಮೂವತ್ತು ಅಥವಾ ಅದಕ್ಕಿಂತ ಹೆಚ್ಚು ಜೇನು ಪೆಟ್ಟಿಗೆ ತಂದರೆ ಈ ಮೊತ್ತ ಇನ್ನೂ ಕಡಿಮೆ ಆಗಬಹುದು, ರೈತರು ಸ್ಥಳೀಯ “ಹಳೆಯ ಜೇನು ಕೃಷಿ ಅನುಭವಿಗಳನ್ನ” ಬೇಟಿ ಮಾಡಿದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಜೇನು ಕೃಷಿ ಆಸಕ್ತರು ಬಣ್ಣ ಬಣ್ಣದ ಮಾತನಾಡಿ ಒಂದಕ್ಕೆರೆಡು ಪಟ್ಟು ಸುಲುಗೆ ಮಾಡುವ ಪಟ್ಟಣದ ಸೊಫಿಸ್ಟಿಕೇಟಡ್ ಸಂಸ್ಥೆಗಳ ಮಾತಿಗೆ ಮರುಳಾಗಿ ಸಹಸ್ರಾರು ರೂಪಾಯಿ ಟೋಪಿ ಹಾಕಿಸಿಕೊಳ್ಳ ಬಾರದು ಎಂಬ ಕಿವಿಮಾತೂ ಹೇಳುತ್ತಾರೆ.
ಒಂದು ಜೇನು ಪೆಟ್ಟಿಗೆಯಲ್ಲಿ ಮೂರು ಭಾಗ ಇರುತ್ತದೆ. ಜೇನು ಪೆಟ್ಟಿಗೆಯ ಕೆಳ ಕೋಣೆಯಲ್ಲಿ ಜೇನುಗಳ ಮಲಗುವ ಕೋಣೆ (ವಾಸಸ್ಥಾನ) ಇರುತ್ತದೆ. ಮದ್ಯದ ಕೋಣೆಯಲ್ಲಿ ಜೇನು ಹುಳುಗಳು ತುಪ್ಪವನ್ನು ಮಾಡುವ ಜಾಗ ಇರುತ್ತದೆ. ಮೇಲಿನದ್ದು ಜೇನು ಪೆಟ್ಟಿಗೆಯ ಮುಚ್ಚಳ. ಸ್ಟ್ಯಾಂಡ್ ನಲ್ಲಿ ಒಂದು ಚಿಕ್ಕ ಬಟ್ಟಲು ಇರುತ್ತದೆ. ಇದರೊಳಗೆ ನೀರು ತುಂಬಿಸಿಟ್ಟರೆ ಜೇನು ಪೆಟ್ಟಿಗೆಯೊಳಗೆ ಇರುವೆಗಳು ಹೋಗುವುದಿಲ್ಲ. ಜೇನು ಪೆಟ್ಟಿಗೆಯ ಮೇಲೆ ನೀರು ಬೀಳದಂತೆ ದಪ್ಪದ ಪ್ಲಾಸ್ಟಿಕ್ (ದೀರ್ಘ ಬಾಳಿಕೆ ಬರುವ ) ಹೊದಿಕೆ ಮುಚ್ಚಿ ಮಂಗ ಇನ್ನಿತರ ಪ್ರಾಣಿಗಳು ಜೇನು ಪೆಟ್ಟಿಗೆಗೆ ಹಾನಿ ಮಾಡದಂತೆ ಹಗ್ಗದಿಂದ ಕಟ್ಟಬೇಕು.
ಜೇನು ಹುಳುಗಳು ತುಪ್ಪವನ್ನು ಸಂಗ್ರಹಿಸುವಾಗ ಓಡಾಡಲು ಹೆಚ್ಚು ಅಂತರ ಇರುವಂತೆ ನೋಡಿಕೊಳ್ಳುವುದು.
ಜೇನು ತುಪ್ಪವನ್ನು ಮಾಡುವಾಗ ಆ ಭಾಗದ ಚಟುವಟಿಕೆಗಳನ್ನು ನೋಡಿಕೊಳ್ಳುವ ನೈಪುಣ್ಯತೆಯನ್ನು ಜೇನು ಕೃಷಿಕರು ಕಲಿತುಕೊಳ್ಳಬೇಕು. ವರ್ಷಕ್ಕೆ ಮೂರು ಬಾರಿ ತುಪ್ಪದ ಕೊಯ್ಲು ಮಾಡಬಹುದು, ಪೆಟ್ಟಿಗೆ ಅಂತರ ಹೆಚ್ಚು (ಅಥವಾ ಆ ಭಾಗದಲ್ಲಿ ಜೇನು ಪೆಟ್ಟಿಗೆಯ ಸಂಖ್ಯೆ ಕಡಿಮೆ ಇದ್ದಲ್ಲಿ) ಇದ್ದರೆ ಒಂದು ಜೇನು ಪೆಟ್ಟಿಗೆಯಲ್ಲಿ ಆರು ಕೆಜಿಗಿಂತಲೂ ಹೆಚ್ಚು ಜೇನು ತುಪ್ಪ ಸಿಗಬಹುದು. ಕಡಿಮೆಯೆಂದರೂ ಒಂದು ಜೇನು ಪೆಟ್ಟಿಗೆ ಗೆ ಮೂರು ಕೆಜಿ ತುಪ್ಪ ವಂತೂ ಸಿಕ್ಕೇ ಸಿಗುತ್ತದೆ. ಜೇನು ಕೃಷಿಕರು ಹಾಕಿದ ಮೂಲ ಬಂಡವಾಳ ಅದೇ ವರ್ಷ ಕೃಷಿಕರಿಗೆ ಸಿಗುತ್ತದೆ.
ಇವತ್ತು ಕಲಬೆರಕೆಯಿಲ್ಲದ ಜೇನು ತುಪ್ಪಕ್ಕೆ ಅಪಾರವಾದ ಬೇಡಿಕೆಯಿದೆ. ಜೇನು ಕೃಷಿಕ ರು ಬಿಡಿ ಬಿಡಿಯಾಗಿಯೂ ಜೇನು ತುಪ್ಪವನ್ನು ಮಾರಾಟ ಮಾಡಿ ಇನ್ನೂ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಜೇನು ಕೃಷಿ ಮಲೆನಾಡಿನ ರೈತರಿಗೆ ಒಂದು ಅತ್ಯುತ್ತಮ ಉಪ ಉದ್ಯೋಗ ವಾಗಬಲ್ಲ ದು. ಕಡಿಮೆ ಸವಾಲುಗಳ ನಡುವೆ ನಿಸರ್ಗ ಕ್ಕೂ ಒಳ್ಳೆಯ ಕೊಡುಗೆಯನ್ನು ಈ ಜೇನು ಹುಳುಗಳು ನೀಡುತ್ತವೆ. ರೈತರು ಜೇನು ಕೃಷಿ ಮಾಡಲು ಶುರು ಮಾಡಿದಲ್ಲಿಂದ ಅವರ ಕೃಷಿ ಇಳುವರಿ ಹೆಚ್ಚಾಗುತ್ತದೆ.
ಒಬ್ಬ ರೈತರು ಒಂದು ಐವತ್ತು ಜೇನು ಪೆಟ್ಟಿಗೆ ಯನ್ನು ನಿರ್ವಹಣೆ ಮಾಡಿದಲ್ಲಿ ಖರ್ಚಿಲ್ಲದೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸಿ ನಿಸರ್ಗಕ್ಕೂ ಉತ್ತಮ ಕೊಡುಗೆ ಕೊಡಬಹುದು. ಜೇನು ತುಪ್ಪವೊಂದೇ ಅಲ್ಲದೇ ಜೇನು ಮೇಣಕ್ಕೂ ಉತ್ತಮ ಬೆಲೆ ಇದೆ. ಜೇನು ಕೃಷಿಕರು ಜೇನುಗಳ ದ್ವಿಗುಣತೆ, ಜೇನು ಪೆಟ್ಟಿಗೆಯ ನಿರ್ವಹಣೆಯನ್ನು ಯಶಸ್ವಿಯಾಗಿ ಕಲಿತ ಮೇಲೆ ಜೇನು ಕೃಷಿಯನ್ನೇ ಒಂದು ದೊಡ್ಡ ಉದ್ಯಮವಾಗಿ ರೂಢಿಸಿಕೊಳ್ಳಬಹುದು.
ಮೃಗವಧೆಯ ಶ್ರೀ ನಾಗೇಂದ್ರರವರು ನಮ್ಮ ನಡುವಿನ ದೊಡ್ಡ ಸಾಧಕ. ಯಾವುದೋ ಒಂದು ಕಾರ್ಯದ ಬಗ್ಗೆ ಏಕಾಗ್ರಾ ಚಿತ್ತರಾಗಿ ದುಡಿದರೆ ಅದು ಒಂದಲ್ಲ ಒಂದು ದಿನ ದೊಡ್ಡ ಮಟ್ಟದ ಪ್ರತಿಫಲ ನೀಡುತ್ತದೆ ಎಂಬುದನ್ನು ನಾಗೇಂದ್ರರ ಸಾಧನೆ ತೋರಿಸುತ್ತದೆ. ಅವರ ಶಿಸ್ತು ಪರಿಶ್ರಮ ಕಾರ್ಯ ನಿಷ್ಠೆ ಅಮೋಘ.
ನಾಗೇಂದ್ರ ರವರನ್ನು ಜೇನು ಕೃಷಿಕ ಆಸಕ್ತರೆಲ್ಲರೂ ಅವರ ಕಾರ್ಯಕ್ಷೇತ್ರ ಮೃಗವಧೆಯ ನಿವಾಸದಲ್ಲಿ ಬೇಟಿ ಮಾಡಿ ಅವರಿಂದ ಜೇನು ಕೃಷಿ ಮಾರ್ಗದರ್ಶನ ಪಡೆಯಲಿ ಎಂದು ಆಶಿಸುತ್ತೇನೆ. ಈ ಮೂಲಕ ಅಡಿಕೆ ಯ ಎಲೆಚುಕ್ಕಿ ರೋಗದ ಅಭದ್ರತೆಯ ನಡುವೆ ರೈತರೊಗೊಂದು ಹೊಸ ಬೆಳಕು ಹೊಸ ಆದಾಯ ದೊರಕು ವುದರ ಜೊತೆಯಲ್ಲಿ ನಿಸರ್ಗ ಕ್ಕೂ ಒಂದು ಅತ್ಯುತ್ತಮ ಕೊಡುಗೆ ದೊರೆಯಲಿ. ಜೇನು ಹೆಚ್ಚಾಗಲಿ… ಜೇನುಹುಳುಗಳ ಮಧು ಹೀರುವ ಕಲರವ ಮಲೆನಾಡಿನೆಲ್ಲಡೆ ಮಾರ್ಧನಿಸಲಿ ಎಂದು ಬಯಸುತ್ತೇನೆ.
ನಾಗೇಂದ್ರ , ಮೃಗವಧೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. +91 94490 66906
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…