Advertisement
ಅಂಕಣ

ವಿಶ್ವಗುರುವಾಗುವತ್ತ ಭಾರತ | ಶಿಕ್ಷಣ ಮತ್ತು ಕೃಷಿಕ್ಷೇತ್ರಗಳು ಅಸ್ಥಿರವಾಗುತ್ತಿರುವುದು ಗಮನದಲ್ಲಿದೆಯೆ?

Share
ನಮ್ಮ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಶ್ವದ ಸುಪ್ರಸಿದ್ಧ ನಾಯಕ. ಶಾಂತಿಯ ಮೂಲಕ ವಿಶ್ವಬಂಧುತ್ವವನ್ನು  ಸಾಧಿಸುವ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಮಾನ್ಯತೆ ಎಷ್ಟಿದೆ ಎಂದರೆ ಪರಸ್ಪರ ವೈರತ್ವ ಇರುವ ದೇಶಗಳೆರಡೂ ಅವರನ್ನು ಆಹ್ವಾನಿಸಿ ಗೌರವಿಸುತ್ತವೆ. ಉದಾಹರಣೆಗೆ ರಷ್ಯಾದ ಅಧ್ಯಕ್ಷ ಪುಟಿನ್‍ರವರು ಮೋದಿಯವರನ್ನು ಆಮಂತ್ರಿಸಿ ಅಲ್ಲಿಯ ಅತ್ಯುಚ್ಚ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಆ ಸಂದರ್ಭದಲ್ಲಿಯೂ ಮೋದಿಯವರು ಶಾಂತಿಮಂತ್ರವನ್ನು ಜಪಿಸಿದರು. ಮುಂದೆ ಕೆಲವೇ ದಿನಗಳಲ್ಲಿ ರಷ್ಯಾದೊಂದಿಗೆ ಯುದ್ಧಕ್ಕೆ ನಿಂತಿರುವ ಉಕ್ರೇನ್ ದೇಶವೂ ಮೋದಿಯವರನ್ನು ಆಮಂತ್ರಿಸಿ ಗೌರವಿಸಿತು. ಅಲ್ಲಿಯೂ ಮೋದಿಯವರು ಯುದ್ಧಕ್ಕಿಂತ ಶಾಂತಿಯಿಂದ ಸಾಧಿಸುವ ಗೆಲುವು ಶಾಶ್ವತ ಎಂದರು. ಈ ಧೈರ್ಯ ಮೋದಿಯವರಿಗೆ ದಕ್ಕಿದೆ. ಹಾಗಾಗಿಯೇ ಭಾರತದಲ್ಲಿ ಮುಸ್ಲಿಮರಲ್ಲಿ ಬಹುತೇಕರು ಮೋದಿಯವರನ್ನು ದ್ವೇಷಿಸುತ್ತಿದ್ದರೂ ಬಹುತೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಮೋದಿಯವರಿಗೆ ಸ್ವಾಗತವಿದೆ. ವಿಶ್ವಸಂಸ್ಥೆಯಲ್ಲಿ ಮೋದಿಯವರ ಮಾತಿಗೆ ಮನ್ನಣೆ ಇದೆ. ಹಾಗಾಗಿಯೇ ವಿಶ್ವಯೋಗದಿನವು ವಿಶ್ವಸಂಸ್ಥೆಯಿಂದಲೇ ಘೋಷಿಸಲ್ಪಟ್ಟಿತು. ಈ ಲೇಖನ ಬರೆಯುವ ಹೊತ್ತಿಗೆ ಅಂದರೆ ಸದ್ಯ 2024 ಸೆಪ್ಟೆಂಬರ್ ಮೊದಲ ವಾರದಲ್ಲಿ ಮೋದಿಯವರು ಅತ್ಯಂತ ಶ್ರೀಮಂತ ಮುಸ್ಲಿಂ ರಾಷ್ಟ್ರವೊಂದರ ರಾಜಧಾನಿ ಬ್ರೂನಿಯ ಅರಸನ ಆತಿಥ್ಯದಲ್ಲಿದ್ದಾರೆ.
ಮೋದಿಯವರ ಈ ಸಾಧನೆಯ ಹಿಂದೆ ಅವರು “ವಸುದೈವ ಕುಟುಂಬಕಂ”, “ಆನೋಭದ್ರಾಃ ಕೃತವೋಯಂತು ವಿಶ್ವತಃ” (ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ), “ಏಕಂಸತ್ ವಿಪ್ರಃ ಬಹುಧಾವದಂತಿ”, (ಸತ್ಯವೊಂದೇ, ಅದನ್ನು ಅನೇಕ ರೀತಿಯಲ್ಲಿ ಪ್ರಾಜ್ಞರು ಹೇಳಿದ್ದಾರೆ) ಮುಂತಾದ ಉಪನಿಷದ್ ವಾಕ್ಯಗಳನ್ನು ಪ್ರಚಾರಕ್ಕೆ ತಂದಿದ್ದಾರೆ. ಹೀಗಾಗಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಇವು ವಿಶ್ವಮಟ್ಟದಲ್ಲಿ ಭಾರತದ ಬಗ್ಗೆ ಸುಮಾರು ಎರಡು ದಶಕಗಳ ಹಿಂದೆ ಇದ್ದ ಚಿತ್ರಣವನ್ನು ಬದಲಿಸಿವೆ. ಇಷ್ಟೇ ಅಲ್ಲದೆ ಶಸ್ತ್ರಾಸ್ತ್ರಗಳ ಸ್ವದೇಶೀ ನಿರ್ಮಾಣ, ಕೋವಿಡ್ ಲಸಿಕೆಯ ನಿರ್ಮಾಣ ಮತ್ತು ವಿತರಣೆ, ಬಡದೇಶಗಳಿಗೆ ಸಹಾಯ ಮುಂತಾದ ಹೆಜ್ಜೆಗಳೂ ಭಾರತದ ಶ್ರೇಷ್ಟತೆಯನ್ನು ಬೆಳಗಿಸಿವೆ. ಇಷ್ಟರಿಂದ ಭಾರತ ವಿಶ್ವಗುರುವಾಗುತ್ತದೆಂಬ ಕನಸಿನಲ್ಲಿ ಅನೇಕರು ಇದ್ದಾರೆ. ಆದರೆ ಆತಂಕವೊಂದು ನಮ್ಮೆದುರಿಗಿದೆ. ಅದನ್ನು ಈಗಲೇ ಮೋದಿಯವರು ಕಳೆಯಬೇಕು. ಅವರು ದೇಶದ ರಕ್ಷಾ (ಸೇನಾ) ಕ್ಷೇತ್ರವನ್ನು ಬಲಪಡಿಸಿರುವಂತೆ ಶಿಕ್ಷಾ (ಶಿಕ್ಷಣ) ಕ್ಷೇತ್ರವನ್ನೂ ಬಲಪಡಿಸಬೇಕು. ಇಲ್ಲವಾದರೆ ಇನ್ನೆರಡು ದಶಕಗಳಲ್ಲಿ ಇಂದಿನ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಉದ್ಯೋಗಾರ್ಥಿಗಳಾಗುವ ಹೊತ್ತಿಗೆ ಭಾರತದ ಶಕ್ತಿ ಕುಸಿಯಲಿದೆ. ಇಂದಿನ ಅಸ್ಥಿರಗೊಂಡ ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಥ ಯುವಜನತೆಯನ್ನು ರೂಪುಗೊಳಿಸಬಹುದೆಂಬ ಆಸೆ ಮಸಕಾಗುತ್ತಿದೆ.
ನಮ್ಮ ಇಂದಿನ ತಂತ್ರಜ್ಞಾನ, ಚಂದ್ರಯಾನ  ಮುಂತಾದುವು ಸುಮಾರು ಮುರ್ನಾಲ್ಕು ದಶಕಗಳ ಹಿಂದೆ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ಸೃಜನಶೀಲ ಚಿಂತನೆಗಳಿಂದ ಮಾಡಿದ ಸಾಧನೆಗಳ ಫಲವಾಗಿದೆ. ಆಗ ಕಲಿಸುವ ಸೌಲಭ್ಯಗಳು ಕಡಿಮೆ ಇದ್ದರೂ ಕಲಿಯುವ ಪರಿಶ್ರಮಕ್ಕೆ ಕೊರತೆ ಇರಲಿಲ್ಲ. ಆದರೆ ಇಂದು ನಮ್ಮ ದೇಶದಲ್ಲಿ ಶಿಕ್ಷಣವು ಗತಿಶೀಲತೆಯನ್ನೂ ಸೃಜನಶೀಲತೆಯನ್ನೂ ಕಳಕೊಂಡಿದೆ. ಅಲ್ಲದೆ ಸಾಮಾಜಿಕ ಅಸಮಾನತೆಯನ್ನು ಉಂಟುಮಾಡಿದೆ. ಸರಕಾರದ ಜವಾಬ್ದಾರಿಯಾದ ಶಿಕ್ಷಣವು ಖಾಸಗಿಯವರಿಗೆ ಮಾರಲ್ಪಟ್ಟಿದೆ. ಸರಕಾರಿ ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರಿಲ್ಲದೆ ಅದು ಸಮಾಜದ ಆರ್ಥಿಕ ತಳಸ್ತರದ ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. “ಭಾರತದ ಸಮಾಜವು ಅದರ ತರಗತಿಗಳಲ್ಲಿ ರೂಪುಗೊಳ್ಳುತ್ತಿದೆ” ಎಂತ 50-60 ರ ದಶಕದಲ್ಲಿ ಹೇಳುತ್ತಿದ್ದ ಮಾತು ಈಗ ಸುಳ್ಳಾಗಿದೆ. ಪ್ರಸ್ತುತ ಕರ್ನಾಟಕ ಒಂದರಲ್ಲೇ 45,000 ಕನ್ನಡ ಶಾಲೆಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿವೆ. ಇನ್ನು ದೇಶವ್ಯಾಪ್ತಿಯಾಗಿ ನೋಡಿದರೆ ಲಕ್ಷಾಂತರ ಶಾಲೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದರ ನಷ್ಟ ಯಾರಿಗೆ? ಸರಕಾರವು ಇದಕ್ಕಾಗಿ ಭಾರೀ ಹಣ ಬೇಕಾಗುತ್ತದೆಂದು ಅಲ್ಲಲ್ಲಿಗೆ ಮುಲಾಮು ಹಚ್ಚುವ ಕೆಲಸ ಮಾಡುತ್ತಿದೆ. ಉದಾಹರಣೆಗೆ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ಸರಕಾರವು ದಶಕಗಳನ್ನೇ ತಳ್ಳುತ್ತಿದೆ. ಈ ವಿದ್ಯಮಾನವು ಪ್ರಾಥಮಿಕ, ಹೈಸ್ಕೂಲು, ಪಿ.ಯು. ಕಾಲೇಜುಗಳನ್ನು ದಾಟಿ  ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿಯೂ ಕಂಡು ಬರುತ್ತಿದೆ. ಪರಿಣಾಮವಾಗಿ ಶಿಕ್ಷಣವೆಂದರೆ ಸಿಲೆಬಸ್, ಪರೀಕ್ಷೆಗಳು, ಅಂಕಗಳು ಮತ್ತು ರೇಂಕ್‍ಗಳು ಎಂಬ ನಾಲ್ಕು ಹಂತಗಳಲ್ಲಿ ಮುಗಿದು ಹೋಗುತ್ತದೆ. ಗುಣಮಟ್ಟದ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಯಾವುದೇ ಉದ್ಯೋಗಾರ್ಹತೆಯನ್ನು ಹೊಂದಿರುವುದಿಲ್ಲ. ಉತ್ಸಾಹಶಾಲಿ ಶಿಕ್ಷಕರೋ, ವಿಜ್ಞಾನಿಗಳೋ, ಆಡಳಿತ ತಜ್ಞರೋ, ಆಗುವುದಿರಲಿ, ಒಳ್ಳೆಯ ಮೇನೇಜರ್ ಹಾಗೂ ಕಾರಕೂನರಾಗುವ ಅರ್ಹತೆಯನ್ನು ಹೊಂದಿರುವುದಿಲ್ಲ. ಇಂತಹ ವಿದ್ಯಾರ್ಥಿ ಸಮುದಾಯವನ್ನು ಈಗ ಬೆಳೆಸುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನೆರಡು ದಶಕಗಳಲ್ಲಿ ಯಾವ ವಿಶ್ವಗುರುತ್ವದ ಆಸೆಯನ್ನಿಟ್ಟುಕೊಳ್ಳಬಹುದು? ಸಾಮಾಜಿಕ ಸಮಾನತೆ ಮತ್ತು ಸರ್ವ ಶಿಕ್ಷಾ ಅಭಿಯಾನದ ಮೂಲ ಪ್ರಯತ್ನಗಳಲ್ಲಿ ತೊಡಗಿರುವವರು ಯಾರೂ ಇಲ್ಲ. ಇದನ್ನು ಮಾನ್ಯ ಮೋದಿಯವರ ಗಮನಕ್ಕೆ ತರುವವರೂ ಇಲ್ಲ.
ತೀವ್ರ ಆತಂಕಕ್ಕೆ ಈಡಾಗಿರುವ ಇನ್ನೊಂದು ಕ್ಷೇತ್ರವೆಂದರೆ ಕೃಷಿ. ಅತಿವೃಷ್ಥಿ ಮತ್ತು ಅನಾವೃಷ್ಠಿಯ ಹೊರತಾಗಿ ಕೈಗೆ ಬೆಳೆ ಬರುವ ಹೊತ್ತಿಗೆ ಬಿರುಗಾಳಿಗೆ ಗಿಡಗಳು ಉರುಳುವುದು, ರೋಗಗಳು ಬಂದು ಹಣ್ಣುಗಳು ಹಾಳಾಗುವುದು, ಮಾರುಕಟ್ಟೆಯಲ್ಲಿ ಒಮ್ಮಿಂದೊಮ್ಮೆಲೇ ಧಾರಣೆಯ ಕುಸಿತ, ಅಣೆಕಟ್ಟುಗಳಲ್ಲಿ ನೀರು ತುಂಬಿ ಗೇಟ್‍ಗಳನ್ನು ತೆರೆಯುವುದರಿಂದ ಉಂಟಾಗುವ ಅಪಾಯಕಾರಿ ನೆರೆಗೆ ಕೃಷಿ ಫಲಗಳೆಲ್ಲ ಮುಳುಗಿ ಹೋಗುವುದು ಹೀಗೆ ವೈವಿಧ್ಯಮಯ ಆತಂಕಗಳಿಗೆ ಕೃಷಿ ಕ್ಷೇತ್ರ ಒಳಗಾಗಿದೆ. ಸರಕಾರ ನೀಡುವ ವಿಮೆ ಹಾಗೂ ಇತರ ಪರಿಹಾರಗಳು ಅವರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ದೊರಕುತ್ತಿಲ್ಲ. ಹಾಗಾಗಿ ಅಪಾಯಗಳು ಸಂಭವಿಸುವ ಪೂರ್ವ ಸೂಚನೆ ನೀಡುವುದರೊಂದಿಗೆ ಸಾಂದರ್ಭಿಕ ನೆರವು ಒದಗಿಸುವ ವ್ಯವಸ್ಥೆಗಳಾಗಬೇಕು. ಇದು ಸಾಕಷ್ಟು ಮುಂಚಿತವಾಗಿ ಯೋಜನೆಯ ರೂಪದಲ್ಲಿ ಕೃಷಿ ಇಲಾಖೆಗಳಲ್ಲಿ ಚಿಂತಿಸಿ ಸಿದ್ಧತೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ ಕೃಷಿ ಎಂದಾಕ್ಷಣ ಭಯಬೀಳುವ ಪರಿಸ್ಥಿತಿ ಉಂಟಾಗುತ್ತದೆ. ತಿಂಗಳಿಗೆ ಲಕ್ಷಗಟ್ಟಲೆ ಸಿಗುತ್ತಿದ್ದ ವೇತನವನ್ನು ಬಿಟ್ಟು ಇಂಜಿನಿಯರ್‍ಗಳು ಕೃಷಿಕ್ಷೇತ್ರಕ್ಕೆ ಬಂದಿದ್ದಾರೆ. ಅವರು ತಮ್ಮ ಆಯ್ಕೆ ವ್ಯರ್ಥ ಎನ್ನುವ ಭಾವನೆಗೆ ಒಳಗಾಗದಂತಹ ಭದ್ರತೆ ಕೃಷಿ ಕ್ಷೇತ್ರಕ್ಕೆ ದೊರಕಬೇಕು.
ನಾನು ಈ ಲೇಖನವನ್ನು ಬರೆದದ್ದು ಯಾವ ಉದ್ದೇಶದಿಂದ ಎನ್ನುವುದು ಓದುಗರಿಗೆ ಮನದಟ್ಟಾಗಬಹುದು. ಶ್ರೀಯುತ ಮೋದಿಯವರನ್ನು ಟೀಕಿಸುವುದಕ್ಕಾಗಿ ಅಲ್ಲ. ಬದಲಾಗಿ ಮೋದಿಯವರಿಗೆ ನೆನಪಿಸುವ ಹೊಣೆ ನಮಗಿದೆ ಎಂಬುದನ್ನು ಗಮನಕ್ಕೆ ತರುವುದಕ್ಕಾಗಿ. ಮುಖ್ಯವಾಗಿ ಶಿಕ್ಷಣ ಮತ್ತು ಕೃಷಿಕ್ಷೇತ್ರಗಳಲ್ಲಿ ಸದ್ಯ ಕಾಣುತ್ತಿರುವ ನ್ಯೂನತೆಗಳನ್ನು ಪರಿಹರಿಸಿಕೊಳ್ಳದಿದ್ದರೆ ಇನ್ನೆರಡು ದಶಕಗಳಲ್ಲಿ ಪರಿತಪಿಸುವ ಸನ್ನಿವೇಶ ಉಂಟಾಗಲಿದೆ. ಅದನ್ನು ತಪ್ಪಿಸಿ ಭಾರತದ ಉನ್ನತಿಯನ್ನು ಚಿರಸ್ಥಾಯಿ ಗೊಳಿಸುವುದೇ ಆಗಿದೆ.
ಅದೇ  ರೀತಿ ಕಳೆದ ವಾರ ಬರೆದ “ಅಡಿಕೆಗೆ ಹಳದಿರೋಗ ಬಂದಿದೆ” ಲೇಖನದ ಉದ್ದೇಶವು ಭಾರತೀಯ ಕೃಷಿಕರೂ ಭೂಮಿಯನ್ನು ತೊರೆಯದೆ ಪ್ರಯೋಗಶೀಲರಾಗಬೇಕು ಎಂಬ ಸದಾಶಯದಿಂದ ಹೊರತು ಯಾರನ್ನೂ ನೋಯಿಸುವುದಕ್ಕಾಗಿ ಅಲ್ಲ. ಅದರಲ್ಲಿ ವಾಸ್ತವಿಕ ಸಂಗತಿಗಳನ್ನಲ್ಲದೆ ಊಹನೆಯಿಂದ ಏನನ್ನೂ ಬರೆದಿಲ್ಲ. ಇನ್ನು, ನಮ್ಮ ಪ್ರದೇಶದಲ್ಲಿ ಭೂಮಿಯ ಬೆಲೆ ಹೆಚ್ಚು ಇದ್ದರೆ  ಅದು ನಮಗೆ ಅಭಿಮಾನದ ವಿಷಯವೇ ಆಗಬೇಕು. ಅದನ್ನು ಬೇರೆಯವರು ಹೇಳಿದಾಗ ಇನ್ನೂ ಸಮರ್ಥನೆ ಸಿಕ್ಕಿದಂತಾಗುತ್ತದೆ.
ಬರಹ :
ಚಂದ್ರಶೇಖರ ದಾಮ್ಲೆ
If the existing shortcomings in the education and agriculture sectors are not rectified, a critical situation will arise in the next two decades. It is imperative to address these issues in order to ensure India’s sustainable growth.
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

17 hours ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

23 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

24 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

24 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

24 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

1 day ago