ವರ್ಷವಿಡೀ ಓದಿದ ಬಳಿಕ ಪರೀಕ್ಷೆ ನಡೆದಾಗ ಐಟಿಐ ವಿಭಾಗದ ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಇಲೆಕ್ಟ್ರಿಕಲ್ ವಿಭಾಗದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರೆಯಲು ಬಂದಿತ್ತು. ಪರೀಕ್ಷೆ ಮುಗಿದ ಬಳಿಕ ಈ ಎಡವಟ್ಟು ತಿಳಿದಿತ್ತು. ಕೊನೆಗೆ ಈ ಪರೀಕ್ಷೆಗೆ ಗ್ರೇಸ್ ಅಂಕ ನೀಡಲಾಗುವುದು ಎಂದು ಭರವಸೆ ಸಿಕ್ಕಿದ ಬಳಿಕ ವಿದ್ಯಾರ್ಥಿಗಳು ಸಮಾಧಾನಗೊಂಡಿದ್ದರು. ಇದೀಗ ಫಲಿತಾಂಶ ಬಂದಾಗ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಯಾರು ಹೊಣೆ ಎನ್ನುವುದು ಈಗ ಪ್ರಶ್ನೆಯಾಗಿದೆ. ಐಟಿಐ ವಿಭಾಗದವು ರಾಜ್ಯಮಟ್ಟ ಮಾತ್ರವಲ್ಲ ರಾಷ್ಟ್ರಮಟ್ಟದ ವ್ಯವಸ್ಥೆ. ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ವಿದ್ಯಾರ್ಥಿ ಸಂಘಟನೆಗಳು ಈ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ.
ಅಂತಿಮ ವರ್ಷದ ಐಟಿಐ ಪರೀಕ್ಷೆಯಲ್ಲಿ ಎಲೆಕ್ಟಿಕಲ್ ವಿಭಾಗದ ಐದು ಪ್ರಶ್ನೆಗಳನ್ನು ಇಲೆಕ್ಟ್ರಾನಿಕ್ಸ್ ಡ್ರಾಯಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಪರೀಕ್ಷಾ ವಿಭಾಗದವರ ಎಡವಟ್ಟು ಮಕ್ಕಳಿಗೆ ಗೊತ್ತಾದ ತಕ್ಷಣವೇ ಆಗಲೇ ಪರೀಕ್ಷಾ ಸಿಬ್ಬಂದಿಯವರಿಗೆ ಕೇಳಿದರೂ, ಪರವಾಗಿಲ್ಲ ನಿಮಗೆ ಗೊತ್ತಿರೋದನ್ನ ಬರೆಯಿರಿ , ಗ್ರೇಸ್ ಮಾರ್ಕ್ಸ್ ಕೊಡ್ತಾರೆ ಅಂತ ಹೇಳಿದ್ದಾರೆ. ಒಟ್ಟು 50 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 40 ಅಂಕದ ಪ್ರಶ್ನೆಗಳು ಬೇರೆ ವಿಭಾಗದ ಪ್ರಶ್ನೆಗಳಾಗಿದ್ದು, ಗ್ರೇಸ್ ಮಾರ್ಕ್ಸ್ ಸಿಗುತ್ತೆ ಅಂತ ಮಕ್ಕಳು ಪರೀಕ್ಷೆ ಬರೆದು ತೆರಳಿದ್ದಾರೆ. ಆದರೆ ಫಲಿತಾಂಶ ಬಂದಾಗ ಅದೊಂದೇ ವಿಷಯದಲ್ಲಿ ಬಹುಪಾಲು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಇಲಾಖೆಗಳ ಈ ಎಡವಟ್ಟಿನಿಂದ ಮಕ್ಕಳ ಭವಿಷ್ಯ ಹಾಳಾಗಿದ್ದು, ಸಂಬಂಧಿಸಿದವರು ಕೂಡಲೇ ಕ್ರಮ ತೆಗೆದುಕೊಳ್ಳಲು ಪೋಷಕರು ಆಗ್ರಹಿಸಿದ್ದಾರೆ.
ಈಗ ಐಟಿಐ ವಿದ್ಯಾರ್ಥಿಗಳ ಪರೀಕ್ಷಾ ಪದ್ದತಿಯೂ ಬದಲಾಗಿದೆ. ಹಿಂದಿನಂತೆ ಪರೀಕ್ಷೆ ಬರೆಯುವ ಬದಲು ಉನ್ನತ ವ್ಯಾಸಾಂಗದ ಮಾದರಿಯಂತೆ ಆನ್ ಲೈನ್ ಮಾಕ್ ಟೆಸ್ಟ್ ಇರುತ್ತದೆ. ಇದೂ ಒಂದು ಸಮಸ್ಯೆ ವಿದ್ಯಾರ್ಥಿಗಳಿಗೆ ಕಾಡುತ್ತದೆ. ಇದೀಗ ಡ್ರಾಯಿಂಗ್ ವಿಭಾಗವೂ ಸಂಕಷ್ಟವಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಕ್ಷಣವೇ ಇಲಾಖೆಗಳು ಗಮನಹರಿಸಬೇಕಿದೆ.