ಹಲಸಿನ ಸೀಸನ್ ಶುರುವಾಗೇ ಬಿಟ್ಟಿದೆ. ಪಲ್ಯ, ಹುಳಿ, ಹಪ್ಪಳ ಹೀಗೆ ನಾನಾ ಪದಾರ್ಥಗಳನ್ನು ಮಾಡೋದೊಂದೇ ಅಲ್ಲದೇ, ಸಿಹಿ ಸಿಹಿ ಹಲಸಿನ ಸೊಳೆಗಳನ್ನ ತಿನ್ನೋದೇ ಒಂದು ಖುಷಿ. ಇದೀಗ ಇಲ್ಲೊಂದು ಹಲಸಿನ ಹಣ್ಣು ಬರೋಬ್ಬರಿ 4.33 ಲಕ್ಷ ರೂಪಾಯಿಗೆ ಹರಾಜಾಗಿ ಸಖತ್ ಸುದ್ದಿ ಮಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲರಪಟ್ಣದ ನವೀಕೃತ ಮಸೀದಿಯ ಉದ್ಘಾಟನೆ ವೇಳೆ ಈ ಅಪರೂಪದ ಘಟನೆ ನಡೆದಿದೆ.
4,33,333 ರೂಪಾಯಿಗೆ ಹರಾಜು ಗೆದ್ದರು ನೋಡಿ..! : ಮಸೀದಿಗೆ ಅರ್ಪಣೆಯಾಗಿದ್ದ ಹಲಸಿನ ಹಣ್ಣನ್ನು ಹರಾಜಿಗೆ ಇಡಲಾಗಿತ್ತು. ಈ ಹರಾಜಿನಲ್ಲಿ ಸ್ಥಳೀಯ ಪ್ರಮುಖರಾದ ಅಝೀಜ್ ಹಾಗೂ ಲತೀಫ್ ಎಂಬುವವರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಲತೀಫ್ ಹಲಸಿನ ಹಣ್ಣನ್ನು ಬರೋಬ್ಬರಿ 4,33,333 ರೂಪಾಯಿಗಳಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಇದೊಂದೇ ಅಲ್ಲದೆ, ಹಲವು ವಸ್ತುಗಳನ್ನು ಹರಾಜು ಮಾಡಲಾಗಿದ್ದು, ಒಳ್ಳೆಯ ಮೊತ್ತ ಲಭಿಸಿದೆ. ಈ ಮೊತ್ತವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.