ನಿನ್ನೆಯಷ್ಟೇ ಅಂತರಾಷ್ಟ್ರೀಯ ಹಲಸು ದಿನ ಆಚರಣೆಯಾಯಿತು. ಪ್ರತೀ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಹಲಸಿನ ಬಗ್ಗೆ ಈಚೆಗೆ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾದ ಪ್ರೋತ್ಸಾಹ, ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣಗಳು ಇದೊಂದು ಆಹಾರ ಬೆಳೆ, ಗ್ರಾಮೀಣ ಉದ್ಯಮಗಳ ಬೆಂಬಲ, ಹವಾಮಾನ ವೈಪರೀತ್ಯದ ನಡುವೆಯೂ ಹಲಸು ಉತ್ತಮ ಬೆಳೆಯಾಗುತ್ತಿದೆ.
ಮಲೆನಾಡಿನ ಕೃಷಿಕರ ತೋಟದಲ್ಲಿ ಬಿದ್ದು ಹಾಳಾಗುವ ಬೆಳೆ ಹಲಸು. ಬಯಲುಸೀಮೆಯಲ್ಲಿ ಹಲಸು ಅತ್ಯುತ್ತಮ ಹಣ್ಣಿನ ಬೆಳೆ. ಇದಕ್ಕೆ ಕಾರಣ ಇದೆ, ಮಲೆನಾಡಿನಲ್ಲಿ ಹಲಸು ಆಹಾರ ಬೆಳೆಯಾಗಿ, ವಾಣಿಜ್ಯ ಬೆಳೆಯಾಗು ಪರಿವರ್ತನೆಯಾಗಲಿಲ್ಲ. ಆದರೆ ದೇಶದ ವಿವಿದೆಡೆ ಹಲಸು ಬೆಳೆಯನ್ನು ಪ್ರೋತ್ಸಾಹ ಮಾಡಲಾಗುತ್ತಿದೆ, ವಾಣಿಜ್ಯ ಬೆಳೆಯಾಗಿಸಲು ಎಲ್ಲಾ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಪ್ರಮುಖವಾದ ಕಾರಣಗಳು ಇವೆ. ಕೃಷಿಕರಿಗೆ ಆದಾಯದ ಮೂಲವಾದರೆ ಗ್ರಾಮೀಣ ಭಾಗದ ಉದ್ಯಮಗಳು ಅಭಿವೃದ್ಧಿ, ಉದ್ಯಮಿಗಳ ಬಲವರ್ಧನೆ ಇಲ್ಲಿ ಸಾಧ್ಯವಾಗುತ್ತಿದೆ. ಹೀಗಾಗಿ ಹಲಸಿಗೆ ಮಾನ್ಯತೆ ಹೆಚ್ಚಾಗುತ್ತಿದೆ. ಈಚೆಗೆ ಮೇಘಾಲಯದಲ್ಲೂ ಹಲಸು ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಬಗ್ಗೆ ಮೇಘಾಲಯದ ಮಿಷನ್ ಜಾಕ್‌ಫ್ರೂಟ್‌ನ ಇನ್ಕ್ಯುಬೇಷನ್ ಸೆಂಟರ್‌ನ ಕೇಂದ್ರ ಕೃಷಿ ವಿಶ್ವವಿದ್ಯಾಲಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ನತಾಶ ಅವರು ಹಲಸಿನ ಬಗ್ಗೆ ಬರೆದ ಬರಹದಲ್ಲಿ ಉಲ್ಲೇಖೀಸಿದ ಅಂಶ ಹೀಗಿದೆ…
ಮೇಘಾಲಯದಲ್ಲಿ, ಹಲಸಿನ ಹಣ್ಣು ನಮ್ಮ ಅಡುಗೆ ಮನೆಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಬಳಕೆಯಾಗುತ್ತದೆ. ಆದರೆ ಇದುವರೆಗೂ ಬಳಕೆಯಾಗದೆ ಉಳಿದುಕೊಂಡಿದೆ. ವಿಶೇಷವಾಗಿ ಸಂಸ್ಕರಣಾ ಸೌಲಭ್ಯಗಳು ಮತ್ತು ಮಾರುಕಟ್ಟೆ ಸಂಪರ್ಕಗಳ ಕೊರತೆಯಿಂದಾಗಿ ಹೆಚ್ಚಿನ ಉತ್ಪನ್ನಗಳು ವ್ಯರ್ಥವಾಗಿದೆ. ಪೌಷ್ಟಿಕಾಂಶ, ಆದಾಯ ಮತ್ತು ಉದ್ಯಮಶೀಲತೆಯ ಮೂಲವಾಗಿ ಹಲಸಿನ ಹಣ್ಣನ್ನು ವ್ಯವಸ್ಥಿತ ಮತ್ತು ನಿರಂತರ ಪ್ರಯತ್ನದ ಮೂಲಕ ಬೆಳೆಸುವ ಅಗತ್ಯವಿದೆ.
ಮೇಘಾಲಯ ಸರ್ಕಾರವು 2018 ರಲ್ಲಿ ಮಿಷನ್ ಜಾಕ್‌ಫ್ರೂಟ್ ಪ್ರಾರಂಭಿಸಿದಾಗ, ದೃಷ್ಟಿಕೋನ ಸರಳವಾಗಿತ್ತು ಆದರೆಬಹುವಾದ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು. ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ಹಲಸಿನ ಹಣ್ಣಿನ ಗರಿಷ್ಠ ಬಳಕೆಯನ್ನು ಮಾಡುವುದು ಮತ್ತು ಹಲಸು ವ್ಯರ್ಥವಾಗುವುದನ್ನು ತಡೆಯುವುದು ನಮ್ಮ ಕೆಲಸವಾಗಿತ್ತು. ಇದಕ್ಕಾಗಿ ಸರ್ಕಾರ ಬೆಂಬಲದೊಂದಿಗೆ ಕೆಲಸವು ಪ್ರಾರಂಭವಾಯಿತು, ರೈತರಿಗೆ ತರಬೇತಿ ನೀಡುವುದು, ಜಾಗೃತಿ ಮೂಡಿಸುವುದು ಮತ್ತು ಹೊಸತನಕ್ಕೆ ಅವಕಾಶಗಳನ್ನು ಹುಡುಕುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ಒಂದು ಕೇಂದ್ರ ಕೃಷಿ ವಿಶ್ವವಿದ್ಯಾಲಯ ಕೇಂದ್ರ ಇದೆ. ಅಲ್ಲಿ ತರಬೇತಿ, ಉತ್ಪನ್ನ ಅಭಿವೃದ್ಧಿ ಮತ್ತು ಉದ್ಯಮ ಇನ್‌ಕ್ಯುಬೇಷನ್‌ಗಾಗಿ ಯೋಜನೆ, ಯೋಚನೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಬೆಳೆದು ಇಂದು, ಕೇಂದ್ರವು ಹಲಸಿನ ಚಿಪ್ಸ್, ಹಲಸಿನ ಹಣ್ಣಿನ ಸ್ಕ್ವ್ಯಾಷ್, ಹಲಸಿನ ಪುಡಿ ಸಂಸ್ಕರಣಾ ದಾರಿಗಳನ್ನು ಅಬಿವೃದ್ಧಿಪಡಿಸಿದೆ. ಜೊತೆಗೆ ಕೋಲ್ಡ್ ಸ್ಟೋರೇಜ್, ಆಹಾರ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ, ಪ್ಯಾಕೇಜಿಂಗ್ ಘಟಕ ಮತ್ತು ತರಬೇತಿಗಾಗಿ ಮೀಸಲಾದ ಸ್ಥಳವಾಗಿದೆ.
ಈಗಾಗಲೇ ಗ್ರಾಮೀಣ ಭಾಗದ ಸುಮಾರು 350 ಕ್ಕೂ ಹೆಚ್ಚು ರೈತರು ಮತ್ತು ಗ್ರಾಮೀಣ ಯುವಕರಿಗೆ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದವರು ತಮ್ಮದೇ ಆದ ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವುದು ಉತ್ತಮ ಫಲಿತಾಂಶವಾಗಿದೆ. ಕೆಲವರು ಹಲಸಿನ ಹಣ್ಣಿನ ಆಧಾರಿತ ತಿಂಡಿಗಳು, ಉಪ್ಪಿನಕಾಯಿ ಮತ್ತು ಪಾನೀಯಗಳನ್ನು ಪ್ರಾರಂಭಿಸಿದ್ದಾರೆ. ಈ ಸಣ್ಣ ಹಂತಗಳು ಕ್ರಮೇಣ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ, ಉದ್ಯೋಗ ಸೃಷ್ಟಿಸುತ್ತದೆ.
ಹಲಸಿನ ಬೆಳೆಯು ಹವಾಮಾನ-ನಿರೋಧಕ, ಕಡಿಮೆ ನಿರ್ವಹಣೆ ಅಗತ್ಯವಿರುವ ಮತ್ತು ಇತರ ಬರಗಾಲದಲ್ಲೂ ಉಳಿದು ಬೆಳೆಯುತ್ತದೆ ಎನ್ನುವುದು ಪ್ರಮುಖ ಅಂಶ. ಅಷ್ಟೇ ಅಲ್ಲ, ಪೌಷ್ಟಿಕ, ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್ ತುಂಬಿದೆ ಈ ಹಣ್ಣು. ಹಲಸಿನ ಎಲ್ಲಾ ವಸ್ತುಗಳೂ ಬಳಕೆ ಮಾಡಬಹುದಾಗಿದೆ. ಸಿಹಿತಿಂಡಿಗಳು, ಚಿಪ್ಸ್, ಉಪ್ಪಿನಕಾಯಿ, ಜಾಮ್, ಹಿಟ್ಟು , ಬೀಜ ಮತ್ತು ಸಿಪ್ಪೆಯನ್ನು ಸಹ ಇಲ್ಲಿ ಬಳಸಬಹುದು.
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ ಅದರಲ್ಲಿ ಒಂದು ಭಾಗವನ್ನು ಮಾತ್ರ ಸಂಸ್ಕರಿಸಲಾಗುತ್ತದೆ. ಇದರಲ್ಲಿ 10% ರಷ್ಟು ಗ್ರಾಹಕ-ಸಿದ್ಧ ಉತ್ಪನ್ನಗಳಾಗಿ ಪರಿವರ್ತಿಸಿದರೆ ಉದ್ಯಮದ ಪರಿಣಾಮವನ್ನು ಗಮನಿಸಬೇಕಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು. ಹಲಸಿನ ಹಣ್ಣಿನ ಹೆಚ್ಚಿನ ಪೋಷಕಾಂಶ ಅಂಶ ಮತ್ತು ಮೌಲ್ಯವನ್ನು ನೀಡಿದರೆ ಹಲಸು ಭವಿಷ್ಯದ ಉತ್ತಮ ಬೆಳೆಯಾಗಬಲ್ಲುದು.