ಮಾನವನ ಮನಸ್ಸನ್ನು ಕದಡುವ ಅತಿ ಸೂಕ್ಷ್ಮ ಭಾವನೆಗಳಲ್ಲಿ ಅಸೂಯೆ (ಮತ್ಸರ) ಒಂದು. ಇದು ಮನುಷ್ಯನ ಆತ್ಮಶಕ್ತಿಯನ್ನು ಕುಗ್ಗಿಸುವುದಲ್ಲದೆ, ಸಮಾಜದ ಏಕತೆಯನ್ನು ನಾಶಮಾಡುತ್ತದೆ. ಪುರಾಣ–ಇತಿಹಾಸಗಳನ್ನು ನೋಡಿದರೆ, ಅನೇಕ ಮಹಾಪ್ರಳಯಗಳು, ಯುದ್ಧಗಳು, ಕುಟುಂಬ–ಸಮಾಜ ವಿಭಜನೆಗಳ ಮೂಲದಲ್ಲೇ ಅಸೂಯೆಯ ಕಿಡಿ ಹೊತ್ತಿರುವುದನ್ನು ಕಾಣಬಹುದು.
ರಾಮನಿಗೆ ಪಟ್ಟವಾಗುತ್ತದೆ ಎಂಬ ಅಸೂಯೆ ರಾಮಾಯಣವನ್ನೇ ಸೃಷ್ಟಿಸಿತು . ಗಾಂಧಾರಿಯ ಕುಂತಿ ಮೊದಲು ಹೆತ್ತಳೆಂಬ ಅಸೂಯೆಯ ಕಿಡಿ ಮಹಾಭಾರತ ಯುದ್ಧದ ತನಕ ತಲುಪಿತು. ತಾನು ಕಲಿಯದ ಬಿಲ್ವಿದ್ಯೆಯನ್ನು ಕಾಡ ಬೇಡನೊಬ್ಬ ಕಲಿತ ಎಂಬ ಅಸೂಯೆ ಏಕಲವ್ಯನ ಹೆಬ್ಬೆರಳು ಹೋಗುವ ತನಕ ತಲುಪಿತು.ಹಿರಣ್ಯ ಕಶ್ಯಪನ ವಿಷ್ಣುವಿನ ಮೇಲಿನ ಅಸೂಯೆ ಅವನ ಪ್ರಾಣ ಹೋಗುವಂತೆ ಮಾಡಿತು. ಇತಿಹಾಸವನ್ನು ನೋಡುವುದಿದ್ದರೆ ಮೌರ್ಯ ಸಾಮ್ರಾಜ್ಯದ ಕಲಹ, ಮಿರ್ ಜಾಫರ್‌ನ ದ್ರೋಹ, ಅಲೆಕ್ಸಾಂಡರ್‌ನ ಸೇನಾಪತಿಗಳ ಅಸೂಯೆ -ಇವೆಲ್ಲ ನಮಗೆ ಅಸೂಯೆಯ ಪರಿಣಾಮದ ದೃಷ್ಟಾ0ತಗಳಾಗಿ ಸಿಗುತ್ತದೆ.
ಸ್ಥೂಲವಾಗಿ ಹೇಳುವುದಾದರೆ ಅಸೂಯೆ ಎಂಬುದು ಸಾಮಾನ್ಯ ಮಾನವೀಯ ಭಾವನೆ. ಆದರೆ ಕೆಲವರಿಗೆ ಇದು ನಿತ್ಯದ “ಮನೋಸ್ಥಿತಿ”ಯಾಗಿ ಬೇರೂರಿಬಿಟ್ಟರೆ ಅದು ಜೀವನವನ್ನು ಕಹಿಯಾಗಿಸುತ್ತದೆ. ಅಸೂಯೆ ಅಂದರೆ – ಇನ್ನೊಬ್ಬರ ಸಂತೋಷ, ಸಾಧನೆ, ಗೌರವ, ಐಶ್ವರ್ಯವನ್ನು ತಾನು ಸಹಿಸಲಾಗದೆ ನೋಡುವ ಮನಸ್ಸಿನ ಸ್ಥಿತಿ. ಇದರಲ್ಲಿ ಎರಡು ಗುಣ ಲಕ್ಷಣಗಳು ಗೋಚರಿಸುತ್ತವೆ:
- ತಾನು ಹೊಂದಿಲ್ಲದಿರುವುದರಿಂದ ಕಳವಳ.
- ಇನ್ನೊಬ್ಬರು ಹೊಂದಿರುವುದನ್ನು ಕಂಡು ಅಸಮಾಧಾನ.
ಇದು ಹೃದಯದಲ್ಲಿ “ಗೀಳು” ಹುಟ್ಟಿಸುವ ಭಾವನೆ. ಅದನ್ನು ಅಂತರಂಗದ ಅಗ್ನಿ ಎಂದೇ ಹೇಳಬಹುದು.
ಮನೋಸ್ಥಿತಿಯ ಮೂಲ, ಅಸೂಯೆ ಹುಟ್ಟುವುದಕ್ಕೆ ಮುಖ್ಯ ಕಾರಣಗಳು : ತಾನು ಹೊಂದಿರುವುದನ್ನು ತೃಪ್ತಿಯಿಂದ ನೋಡುವ ಮನೋಭಾವ ಇಲ್ಲದೇ ಇರುವುದು ಮತ್ತು ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿನೋಡಿಕೊಳ್ಳುವುದು . ಸಾಮಾನ್ಯವಾಗಿ ವ್ಯಕ್ತಿಗತವಾಗಿ ಬಂಡ ಅಹಂಕಾರ ಮತ್ತು ಅತೃಪ್ತಿ ,“ನಾನು ಹೆಚ್ಚು ಪಡೆಯಬೇಕಿತ್ತು” ಎಂಬ ಹಂಬಲ. ಹಾಗೂ ಇನ್ನೊಬ್ಬರ ಸಾಧನೆ ತನ್ನನ್ನು ಹಿಂದೆ ತಳ್ಳಬಹುದು ಎನ್ನುವ ಆತಂಕ.
ವೇದ–ಸ್ಮೃತಿಗಳಲ್ಲಿಯೂ “ಮತ್ಸರ”ವನ್ನು ಅರಿಷಡ್ವರ್ಗಗಳಲ್ಲಿ ಒಂದೆಂದು ಹೇಳಲಾಗಿದೆ. “ಕಾಮಃ ಕ್ರೋಧಸ್ತಥಾ ಲೋಭಸ್ತದೇವ ಮತ್ಸರೋ ಮದಃ ।” – ಅಸೂಯೆ ಎಂದರೆ ಮನುಷ್ಯನ ಶಾಂತಿಯನ್ನು ನಾಶಮಾಡುವ ಶಕ್ತಿಯಾಗಿದೆ. ಅಸೂಯೆಯ ಪರಿಣಾಮ ಕೆಟ್ಟದ್ದಾಗಿರುತ್ತದೆ. ಅಸೂಯೆಯ ಮನೋಭಾವವು ಆತ್ಮಸಂತೋಷವನ್ನು ಕಸಿದುಕೊಳ್ಳುತ್ತದೆ. ಅಪಾರ ಅಸಮಾಧಾನ – ಏನೇ ದೊರೆತರೂ ತೃಪ್ತಿ ಇಲ್ಲ. ಜೊತೆಗೆ ಸಂಬಂಧಗಳನ್ನೂ ಹಾಳುಮಾಡುತ್ತದೆ. ಇನ್ನೊಬ್ಬರ ಯಶಸ್ಸು ನೋಡಲು ಅಸಹ್ಯವಾದರೆ ಸ್ನೇಹ, ಕುಟುಂಬ, ಸಹೋದ್ಯೋಗ ಎಲ್ಲವೂ ಕದಡುವುದು. ಈ ಕಾರಣದಿಂದ ಸ್ವಯಂ ಹಾನಿ – ಆರೋಗ್ಯ, ನಿದ್ರೆ, ಮನಃಶಾಂತಿ ಹಾಳಾಗುವುದು. ತಾತ್ಪರ್ಯದಲ್ಲಿ ಅಸೂಯೆ ಎಂದರೆ ಸ್ವಯಂ ಅಗೆದ ಗುಂಡಿಯಲ್ಲಿ ತಾವೇ ಬೀಳುವಂತೆ.
ಇದಕ್ಕೆ ಒಂದು ರೀತಿಯ ಸ್ವಯಂ ಪ್ರಜ್ಞೆಯಿಂದ ಪರಿಹಾರ ಕಂಡುಕೊಳ್ಳಬಹುದು.
- ಸ್ವೀಕೃತಿ (Acceptance) – ತಾವು ಹೇಗಿದ್ಧೇವೆಯೋ ಅದನ್ನು ಹಾಗೆಯೇ ಒಪ್ಪಿಕೊಳ್ಳುವುದು.
- ಕೃತಜ್ಞತೆ (Gratitude) – ತಮಗೆ ಸಿಕ್ಕಿರುವುದನ್ನು ಧನ್ಯತೆಯಿಂದ ನೋಡುವುದು.
- ಪ್ರೇರಣೆ (Gratitude) – ಇನ್ನೊಬ್ಬರ ಸಾಧನೆಯನ್ನು ಕಂಡು ಅಸೂಯೆ ಪಡುವುದಕ್ಕಿಂತ “ನಾನೂ ಪ್ರಯತ್ನಿಸುವೇ ” ಎನ್ನುವ ಧನಾತ್ಮಕ ಧೋರಣೆ ತಾಳುವುದು.
- ಆತ್ಮಪರಿಶೀಲನೆ – “ನಾನು ಏಕೆ ಅಸೂಯೆಪಡುತ್ತಿದ್ದೇನೆ?” ಎಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಳ್ಳುವುದು. ನಮನಸ್ಸು ಶಾಂತವಾಗಲು ಧ್ಯಾನ, ಪ್ರಾರ್ಥನೆ ಅತ್ಯಂತ ಸಹಾಕಾರಿ .
ಗೀತೆಯಲ್ಲಿ ಹೇಳಿರುವಂತೆ: “ಯೋ ಹ ವೈ ಮತ್ಸರಂ ಜಯತಿ, ಸ ಏವ ವಿಜಯಿ” ಎಂಬಂತೆ ಅಸೂಯೆಯನ್ನು ಜಯಿಸಿದವನಿಗೇ ನಿಜವಾದ ಜಯ.
ಅಸೂಯೆ ಹೊರಗೆ ಇನ್ನೊಬ್ಬರ ಮೇಲೆ ಕಿಡಿ ಹಚ್ಚುವಂತೆ ಕಂಡರೂ, ಒಳಗೆ ನಮ್ಮ ಮನಸ್ಸನ್ನೇ ಸುಡುವ ಬೆಂಕಿ. ಅದನ್ನು ನಂದಿಸುವ ಮಾರ್ಗವೆಂದರೆ – ಹೋಲಿಕೆಯ ಬದಲಿಗೆ ತೃಪ್ತಿ, ಅಸಮಾಧಾನದ ಬದಲಿಗೆ ಕೃತಜ್ಞತೆ. ಮತ್ತೊಬ್ಬರ ಸಾಧನೆಯಲ್ಲಿ ಅಸೂಯೆ ಪಡುವುದಕ್ಕಿಂತ, ಪ್ರೇರಣೆ ಕಂಡುಕೊಳ್ಳುವವನೇ ನಿಜವಾದ ಸಂತೋಷಿಯಾಗುತ್ತಾನೆ.


