ಈ ವಿಡಿಯೋ ನೋಡಿ… ಸುಡುಮಣ್ಣೂ ಆಯ್ತು, ಕಸಗಳ ವಿಲೇವಾರಿಯೂ ಆಯ್ತು ಎಂದು ತೋಟದ ಮಧ್ಯೆ ಸಿಬ್ಬಂದಿಗಳು ಎಲೆಕಸಗಳಿಗೆ(Dry leaf waste) ಬೆಂಕಿ(Fire) ಕೊಟ್ಟಿದ್ದರು. ಅಲ್ಲೇ ಸಮೀಪದ ಮುಂಡಕ್ಕಿ ಹಣ್ಣಿನ ಗಿಡ (ಗುಡ್ಡ ನೇರಳೆ, ಮೀನಂಗಿ, Syzygium zeylanicum, Cat eye fruit)ಕ್ಕೆ ಘಾತವಾಯಿತು . ಸ್ನೇಹಿತರೊಬ್ಬರು ಆ ಬೀಜದ ಗಿಡ ಕೊಟ್ಟಿದ್ದರು. ಅದನ್ನು ನೆಟ್ಟು ಕೆಲವು ವರ್ಷಗಳೇ ಆಗಿತ್ತು. ಬಾಲ್ಯದಲ್ಲಿ ಅಜ್ಜನ ಮನೆ ಪರಿಸರದಲ್ಲಿ ಸಿಕ್ಕಾಪಟ್ಟೆ ಅದರ ಹಣ್ಣುಗಳನ್ನು ತಿಂದ ಕಾರಣ ಆ ಗಿಡದ ಮೇಲೆ ವಿಶೇಷ ಮೋಹವಿತ್ತು. ಏನು ಮಾಡಲಿ, ಈ ಬಿರು ಬೇಸಗೆಗೆ ಗಿಡ ಹೀಗೆ ಸೋತು ಹೋದರೆ ಬದುಕಿ ಉಳಿಯುತ್ತದೋ ಎನ್ನುವ ಅನುಮಾನ ಇತ್ತು. ಆ ದುಃಖದಲ್ಲಿ 2 ವಾರ ಕಳೆದು ಹೋಯ್ತು.
ಪ್ರತೀ 15 ದಿನಗಳಿಗೊಮ್ಮೆ ಗೋಕೃಪಾಮೃತ ( ಸುಲಭದ ಭಾಷೆಗೆ ಜೀವಾಮೃತ ಎನ್ನಿ)ವನ್ನು ತೆಂಗು, ತರಕಾರಿ, ಹೂಗಿಡಗಳಿಗೆ ಹಾಕುವುದು ಅಭ್ಯಾಸವಾಗಿದೆ. 100ಲೀಟರ್ ಡ್ರಮ್ಮಿನಲ್ಲಿ ಒಂದೈದು ಲೀಟರ್ ಇರುವಾಗಲೇ ಪುನಃ 1ಕೇಜಿ ಬೆಲ್ಲ, 1ಕೇಜಿ ಕಡಲೆಹಿಟ್ಟು , ನೀರು ಬೆರಸಿ ಯಾವಾಗಲೂ ಜೀವಾಮೃತ ಸಿದ್ಧವಿರುತ್ತದೆ. ನೋಡಿಯೇ ಬಿಡೋಣವೆಂದು ಹಾಗೆಯೇ ಈ ಸೋತುಹೋದ ಮುಂಡಕ್ಕಿ ಹಣ್ಣಿನ ಗಿಡಕ್ಕೆ ಅಂದಾಜು 1 ಲೀಟರ್ ಹಾಕಿದ್ದೆ.
ಒಂದು ವಾರದಲ್ಲಿ ಗಿಡವೆಲ್ಲ ಹೊಸ ಚಿಗುರುಗಳಿಂದ ಕಂಗೊಳಿಸಲು ಶುರುವಾಯ್ತು . ಈ ರೀತಿಯ ಬದಲಾವಣೆ ಎಲ್ಲ ವಿಧದ ಸಸ್ಯ, ಮರಗಳಲ್ಲಿ ಕಂಡಿದ್ದೇನೆ. ಹೆಚ್ಚಾಗಿ ಗಿಡ/ಮರದ ಎಲೆಗಳು ಆ ಗಿಡ/ಮರದ ಬುಡದಲ್ಲೇ ಬಿದ್ದು ಮಣ್ಣು ಫಲವತ್ತಾಗಿರುತ್ತದೆ. ಆ ಫಲವತ್ತತೆಯನ್ನು ಗಿಡಕ್ಕೆ ಒದಗಿಸಿಕೊಡುವ ಕೆಲಸ ( Bioavailability) ಮಾಡುವುದು ಈ ಜೀವಾಮೃತ. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಮತ್ತು ಜೀವಾಮೃತದಲ್ಲಿರುವ ಜೀವಿಗಳು ಜಂಟಿಯಾಗಿ ( ಅವರಿಬ್ಬರ synergistic effect ) ಮಣ್ಣಿನಲ್ಲಿರುವ ಪೋಶಕಾಂಶಗಳು ಇನ್ನಷ್ಷು ಕರಗುವಂತೆ ( soluble) ಮಾಡಿ ಬೇರಿಗೆ ಒದಗಿಸಲು ಸಹಾಯ ಮಾಡುತ್ತವೆ. ಈ ಅಗತ್ಯವಿರುವ ಫಲವತ್ತತೆಯಿಂದ ಹಣ್ಣು, ಹೂವುಗಳ ಗಾತ್ರ, ಸಂಖ್ಯೆ, ಬಣ್ಣ, ಸುವಾಸನೆಯಲ್ಲಿ ಹೆಚ್ಚಳ ನಿಚ್ಚಳ. ತೆಂಗು, ಅಡಿಕೆಯಂತಹ ಏಕದಳ ಮರಗಳ ( ಬೇರು ಆಳಕ್ಕಿರುವುದಿಲ್ಲ ) ಸೋಗೆ ( ಎಲೆ, ಹೆಡೆ)ಗಳನ್ನು ಅವುಗಳ ಬುಡದಲ್ಲೇ ಕೊಚ್ಚಿಹಾಕಿ ಎರಡು ತಿಂಗಳಿಗೊಮ್ಮೆ ಜೀವಾಮೃತ ಮಾತ್ರ ಹಾಕಿ ( ಬೇರೆ ಗೊಬ್ಬರ, ಸಿಂಪಡಣೆ ಇಲ್ಲ) ಅಧಿಕ, ರೋಗರಹಿತ ಬೆಳೆ ತೆಗೆಯುವವರಿದ್ದಾರೆ.ಜೀವಾಮೃತದಿಂದ ಈ ವರ್ಷದ ಹೊಸ ಪಾಠ ಏನೆಂದರೆ ಗಿಡ/ಮರಗಳನ್ನು ಬಿಸಿ ಮತ್ತು ಬರ(ನೀರಿನ ಕೊರತೆ)ಕ್ಕೆ ಸಹಿಷ್ಣುತೆ ಹೆಚ್ಚಿಸುತ್ತದೆಯೆಂದು.
ಪೂರಕ ಮಾಹಿತಿ: ಹಟ್ಟಿ ತೊಳೆದ ನೀರಿನಲ್ಲಿ ಜೀವಾಮೃತದಲ್ಲಿರುವಂತೆ ಸೂಕ್ಷ್ಮ ಜೀವಿಗಳು ಇರುತ್ತವೆ. ಜೀವಾಮೃತದಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ ಅಂದರೆ ನಾವು ಒದಗಿಸುವ ಬೆಲ್ಲ ಮತ್ತು ಕಡಲೆಹಿಟ್ಟು ( ಯಾವುದೇ ಧಾನ್ಯದ ಹಿಟ್ಟು) ಬೆರಸಿದ ಮಾಧ್ಯಮವು ಬುರುಗುವಿಕೆ( Fermentation)ಗೆ ಒಳಗಾಗಿ ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಪುನರ್ ಜನನ – ಮರಣ ನಿರಂತರ. ಹಾಗೆ ಸಾಯುವಾಗ ಅವುಗಳ ದೇಹದಿಂದ ಕಿಣ್ವಗಳು ( enzymes) ಮತ್ತು ಜೀವಸತ್ವಗಳು ಬಿಡುಗಡೆಯಾಗಿ ಅವೆಲ್ಲ ಮತ್ತೆ ಸಸ್ಯಗಳಿಗೆ ಸಮೃದ್ಧ ಆಹಾರವೇ. ಗೋಬರ್ ಗ್ಯಾಸಿನ ಸ್ಲರಿಯಲ್ಲಿ ಯಾವುದೇ ಸೂಕ್ಷ್ಮ ಜೀವಿಗಳಿರುವುದಿಲ್ಲ.