ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ್ದ ಮೇಘಸ್ಫೋಟ ಮತ್ತು ಭೂಕುಸಿತ ಪೀಡಿತ ರಾಂಬನ್ ಜಿಲ್ಲೆಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಳ್ಳಲಿವೆ. ದೇಶದ ಉಳಿದ ಭಾಗಗಳಿಗೆ ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ – 44 ಅನ್ನು ಮತ್ತೆ ತೆರೆಯಲು ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ.
ಭಾರೀ ಗುಡುಗು ಸಹಿತ ಮಳೆ, ಆಲಿಕಲ್ಲು ಮತ್ತು ಹಠಾತ್ ಪ್ರವಾಹ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳು ಈ ಪ್ರದೇಶದಾದ್ಯಂತ ವ್ಯಾಪಕ ಹಾನಿಯನ್ನುಂಟು ಮಾಡಿವೆ. ರಾಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಉಂಟಾದ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದಾರೆ. ಆಲಿಕಲ್ಲು ಮತ್ತು ಗುಡುಗು ಸಹಿತ ಭಾರಿ ಮಳೆಯು ಹನ್ನೆರಡಕ್ಕೂ ಹೆಚ್ಚು ಸ್ಥಳಗಳಲ್ಲಿ, ಪ್ರಮುಖವಾಗಿ ನಶ್ರಿ ಮತ್ತು ಬನಿಹಾಲ್ ನಡುವೆ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹಲವಾರು ಸ್ಥಳಗಳಲ್ಲಿ ಭೂಕುಸಿತ ಮತ್ತು ಮಣ್ಣು ಕುಸಿತಕ್ಕೆ ಕಾರಣವಾಯಿತು. ಇದರಿಂದ ದೇಶದ ಉಳಿದ ಭಾಗದಿಂದ ಕಾಶ್ಮೀರವನ್ನು ಸಂಪರ್ಕಿಸುವ ರಸ್ತೆ ಕಡಿದುಕೊಂಡಂತಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳ ಜೊತೆಗೆ ಪೊಲೀಸ್ ಮತ್ತು ನಾಗರಿಕರ ಜಂಟಿ ಪ್ರಯತ್ನಗಳ ಮೂಲಕ ರಕ್ಷಣಾ ಕಾರ್ಯ ಮುಂದುವರೆದಿದೆ. ಈ ನಡುವೆ ಮತ್ತೆ ಮಳೆಯಾದ ಕಾರಣ ರಕ್ಷಣಾ ಕಾರ್ಯಗಳಿಗೆ ಅಲ್ಪಮಟ್ಟಿಗೆ ಹಿನ್ನಡೆಯಾಗಿದೆ.