– ಹೀಗೆಂದು ಹೇಳಿದವರು ಬೆಂಗಳೂರಿನ ವಿವೇಕಾನಂದ ಎಚ್ ಕೆ ಹೇಳಿದ್ದಾರೆ.
ಜ್ಞಾನಭಿಕ್ಷಾ ಪಾದಯಾತ್ರೆ ಮೂಲಕ ಮಾನವೀಯ ಮೌಲ್ಯಗಳ ಜಾಗೃತಿ ಸಂದೇಶ ನೀಡುತ್ತಾ ಪಾದಯಾತ್ರೆ ಮಾಡುತ್ತಿರುವ ಸಮಾಜ ಚಿಂತಕ ವಿವೇಕಾನಂದ ಎಚ್ ಕೆ 286 ನೇ ದಿನದ ಪಾದಯಾತ್ರೆಯಲ್ಲಿ ಬೆಳ್ಳಾರೆಗೆ ತಲಪಿದರು. ಬೆಳ್ಳಾರೆಯಲ್ಲಿ ರೋಟರಿ ವತಿಯಿಂದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ತುಂಬುವ ಕೆಲಸ ಆಗಲೇಬೇಕಿದೆ ಎಂದು ಪ್ರತಿಪಾದಿಸಿದ ವಿವೇಕಾನಂದ ಅವರು ಈ ದೇಶದಲ್ಲಿ ಆಡಳಿತದ ಅಭಿವೃದ್ಧಿ ಆಗಿದೆ, ಚಂದ್ರಲೋಕದವರೆಗೂ ತೆರಳುವ ಅಧ್ಯಯನವಾಗಿದೆ, ಹೇರ್ ಸ್ಟೈಲ್ ಬಗ್ಗೆಯೇ ಅಧ್ಯಯನ ಮಾಡುವ ಡಿಪ್ಲೋಮಾ ಪದವಿಗಳೂ ಬಂದಿವೆ. ಇಷ್ಟೇ ಅಲ್ಲ ಅನೇಕ ಸಂಶೋಧನೆಗಳು, ತಾಂತ್ರಿಕತೆಗಳು ಬಂದಿವೆ. ಹಾಗಿದ್ದರೂ ಮಾನವ ಖುಷಿಯಾಗಿದ್ದಾನಾ ? ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿರುವುದೇ ಇಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಅತ್ಯಂತ ಸಮೃದ್ಧವಾದ ನೀರಿನಿಂದ ಕೂಡಿದ ಈ ಪ್ರದೇಶದಲ್ಲಿ ನೀರಿಲ್ಲದೆ ಪರದಾಟ ಮಾಡುವುದು, ಈಗಲೂ ಮನೆಯಿಂದ ಹೊರಬರಲು ಮಾಸ್ಕ್ ಧರಿಸುವುದು, ಮುಖಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಬಂದಿರುವುದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಈಗ ಇದಕ್ಕೆಲ್ಲಾ ಕಾರಣ ಹುಡುಕಿ ಸರಿಪಡಿಸಬೇಕಿದೆ, ಈ ಜವಾಬ್ದಾರಿ ನಮ್ಮ ಮೇಲಿದೆ, ಮುಂದಿಒನ 15 ವರ್ಷದೊಳಗೆ ಈ ವ್ಯವಸ್ಥೆ ಸರಿಪಡಿಸಬೇಕಿದೆ ಎಂದರು. ಸಾಮಾಜಿಕ ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಿ ಪುನರ್ ಸ್ಥಾಪಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಇಂದು ಈಗ 40-60 ವರ್ಷ ವಯಸ್ಸಿನ ಮಂದಿ ಹೆಚ್ಚು ಅನಾರೋಗ್ಯಕ್ಕೆ ಒಳಗಾದರೆ ಈಗ 60 ಕ್ಕಿಂತ ಹೆಚ್ಚಿನ ವಯಸ್ಸಿನ ಮಂದಿ ಆರೋಗ್ಯದಿಂದ ಇದ್ದಾರೆ ಎಂದರೆ ಕಳೆದ 20 ವರ್ಷಗಳಲ್ಲಿ ಅಂದರೆ ಜಾಗತೀಕರಣದ ನಂತರ ಭಾರತದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಜನರ ಸಹಜತೆಯಲ್ಲಿ ಬದಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ಇಂದು ಸಂಪೂರ್ಣವಾಗಿ ಹಣಕ್ಕಾಗಿ , ಅಧಿಕಾರಕ್ಕಾಗಿ, ಪ್ರಚಾರಕ್ಕಾಗಿ ಎಲ್ಲವೂ ಮಾರಾಟವಾಗುತ್ತಿದೆ. ಬನ್ನಿ ಸ್ವಾಗತ ಎನ್ನುವ ಬದಲಾಗಿ ಕಳ್ಳರಿದ್ದಾರೆ ಎಚ್ಚರಿಕೆ ಎನ್ನುವ ಸ್ಥಿತಿ ಬಂದಿರುವುದು ನಾಗರಿಕೆಯಾ ? ಇಂತಹ ಕುಸಿತಗಳು ಎಲ್ಲಾ ಕ್ಷೇತ್ರಗಳಲ್ಲೂ ಆಗಿದೆ. ಪ್ರಮುಖವಾಗಿ ಮಾಧ್ಯಮಗಳು, ಧಾರ್ಮಿಕ, ವೈದ್ಯಕೀಯ, ರಾಜಕೀಯ ಹೀಗೇ ವಿವಿಧ ಕ್ಷೇತ್ರಗಳಲ್ಲಿ ಕುಸಿತವಾಗಿದೆ. ದಟ್ಟ ಕಾಡಿನಲ್ಲಿ ಕೂಡಾ ಮದ್ಯದ ಬಾಟಲಿ ಲಭ್ಯವಾಗುತ್ತದೆ ಎಂದರು ಮೌಲ್ಯಗಳ ಕುಸಿದ ಎಷ್ಟಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದೆಲ್ಲಾ ಕಾರಣದಿಂದ ಮನಸ್ಸು ಹಾಗೂ ಆರೋಗ್ಯ ಕೆಡುತ್ತಿದೆ. ಇದು ಸರಿಯಾಗದೇ ಇದ್ದರೆ ಭವಿಷ್ಯವೂ ಆತಂಕ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗ ಸಾಮಾನ್ಯ ಜನರೂ ಎಚ್ಚೆತ್ತುಕೊಳ್ಳಬೇಕು, ಮಾನವೀಯ ಮೌಲ್ಯಗಳನ್ನು ಮುಂದಿನ 15 ವರ್ಷಗಳಲ್ಲಿ ಪುನರ್ ಸ್ಥಾಪಿಸಲು ಸಾಮಾನ್ಯನೂ ಜಾಗೃತವಾಗಬೇಕು. ಇದಕ್ಕಾಗಿ ಇಂದಿನಿಂದಲೇ ಒಳ್ಳೆಯವರನ್ನು ಗುರುತಿಸೋಣ ಹಾಗೂ ಬೆಂಬಲಿಸೋಣ. ಕೆಟ್ಟವರನ್ನು ನಿರ್ಲಕ್ಷಿಸೋಣ. ನಮ್ಮ ಒಳ್ಳೆಯದಕ್ಕಾಗಿ ಒಳ್ಳೆಯದರ ಕಡೆಗೆ ಸಾಗೋಣ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳಲು ಯಾವ ಭಯವೂ ಬೇಕಾಗಿಲ್ಲ. ಯಾವ ಇಸಂಗಳೂ ಇಲ್ಲಿ ಅಗತ್ಯವಿಲ್ಲ ಎಂದರು.
Advertisement
ಸಂವಾದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಶಿವಕುಮಾರ್, ಬೆಳ್ಳಾರೆ ರೋಟರಿ ಅಧ್ಯಕ್ಷ ಪದ್ಮನಾಭ ಬೀಡು ಮೊದಲಾದವರು ಇದ್ದರು.