ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್‌ಎಸಿಐಎ ಆವರಣದಲ್ಲಿ ನಡೆದ ಉದ್ಯೋಗ ನಿಯುಕ್ತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಸಚಿವ ಡಾ. ವೀರೇಂದ್ರ ಕುಮಾರ್ ಅವರು ಇತ್ತೀಚಿಗೆ ಆಯ್ಕೆಯಾಗಿರುವ ನೂತನ 25 ಉದ್ಯೋಗಿಗಳಿಗೆ ಉದ್ಯೋಗ ನಿಯುಕ್ತಿ ಪತ್ರ ವಿತರಣೆ ಮಾಡಿದರು.
2047 ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಡ್ಸೆ ಹೇಳಿದ್ದಾರೆ. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ‘ಉದ್ಯೋಗ ಪಡೆದ ಯುವಕರು ಆತ್ಮನಿರ್ಭರ ಯೋಜನೆ ಸಾಕಾರಕ್ಕೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ‘ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ. ಪ್ರತಿ ವರ್ಷ ಎರಡು ಬಾರಿ ಉದ್ಯೋಗ ಮೇಳ ಆಯೋಜಿಸಿ ನೇಮಕಾತಿ ಪತ್ರ ನೀಡುತ್ತಿದ್ದು, ಯುಕವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.