ರಸ್ತೆ ಸರಿಯಿಲ್ಲದ ಕಾರಣ ವೃದ್ದೆಯನ್ನು ಮರದ ಬಡಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಸಾಗಾಟ ಘಟನೆ ವಾರಗಳ ಹಿಂದೆ ಸುಳ್ಯ ವಿಧಾನಸಭಾ ಕ್ಷೇತ್ರ ಕಡಬದ ಬಳ್ಳಕ್ಕದಿಂದ ವರದಿಯಾಗಿತ್ತು. ಇದೀಗ ಈ ಘಟನೆಯ ಅಸಲಿಯ ಬಗ್ಗೆ ಆ ವಾರ್ಡ್ ನ ಗ್ರಾಪಂ ಸದಸ್ಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ರಸ್ತೆ ಸರಿ ಇಲ್ಲ ಎಂದು ಬಿಂಬಿಸಲು ವೃದ್ಧೆಯನ್ನು ಬಡಿಗೆಯಲ್ಲಿ ಕಟ್ಟಿ ವೈರಲ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಗ್ರಾಮೀಣ ಭಾರತದ ನಿಜವಾದ ಕಾಳಜಿಗೆ ಇದೊಂದು ಅಪಚಾರವಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಆ.19 ರಂದು ಈ ಘಟನೆ ನಡೆದಿದೆ. 70 ವರ್ಷದ ಮಹಿಳೆಯೊಬ್ಬರು ಕಾಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ರಸ್ತೆ ಇದ್ದರೂ ಅಭಿವೃದ್ದಿ ಕಾರಣ ಹಿನ್ನೆಲೆಯಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದರು. ರಸ್ತೆಯೇ ಸರಿ ಇಲ್ಲವೆಂದು ಬಿಂಬಿಸಲು ಮಹಿಳೆಯನ್ನು ಬಡಿಗೆಯಲ್ಲಿ ಕಟ್ಟಿ ಹೊತ್ತ ವಿಡಿಯೋ ಮಾಡಿ ವೈರಲ್ ಮಾಡಲಾಗಿತ್ತು. ಸಹಜವಾಗಿಯೇ ಗ್ರಾಮೀಣ ಭಾರತದ ಈ ವಿಡಿಯೋ ಎಲ್ಲಾ ಮಾಧ್ಯಮಗಳಿಗೂ ತಲುಪಿಸಿದ್ದರು. ರಾಜ್ಯಾದ್ಯಂತ ಗಮನಸೆಳೆದಿತ್ತು.
ಆದರೆ ಈ ಘಟನೆ ನಡೆದ ನಂತರ ಇದೀಗ ಅದೇ ಮನೆಯವರು ಜೀಪಲ್ಲಿ ಸುಮಾರು ಎಂಟು ಕ್ವಿಂಟಾಲ್ ಅಡಿಕೆ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ವೃದ್ಧ ಮಹಿಳೆಯನ್ನು ಬಡಿಗೆಯಲ್ಲಿ ಸಾಗಿಸಿದ ಎರಡು ದಿನಗಳ ಬಳಿಕ ಅದೇ ಮನೆಯಿಂದ ಜೀಪ್ ನಲ್ಲಿ ಅಡಿಕೆ ಸಾಗಾಟ ಮಾಡಿರುವ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ಜೀಪು ಸಾಗುವ ದಾರಿ ಇದ್ದರೂ ವೃದ್ಧೆಯನ್ನು ಏಕೆ ಬಡಿಗೆಯಲ್ಲಿ ಕಟ್ಟಿ ಹೊತ್ತಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆಯ ಹೆಸರಿನಲ್ಲಿ ರಾಜಕೀಯ ಮಾಡಿದ ಮನೆ ಮಂದಿಯನ್ನು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಮಳೆಯಿಂದಾಗಿ ಕಚ್ಛಾ ರಸ್ತೆ ಹಾನಿಗೊಳಗಾಗಿದ್ದು ನಿಜ. ಆದರೆ ರಸ್ತೆ ಇದೆ, ಜೀಪು ಓಡಾಟ ನಡೆಯುತ್ತದೆ. ಹಾಗಿದ್ದರೂ ಮಹಿಳೆಯನ್ನು ಬಡಿಗೆಯಲ್ಲಿ ಕಟ್ಟಿ ಹೊತ್ತಿರುವುದು ಅಮಾನವೀಯ ಎಂದೂ ಹೇಳಿದ್ದಾರೆ.
ಇಂದಿಗೂ ಹಲವಾರು ಗ್ರಾಮೀಣ ಭಾಗಗಳು ಮೂಲಭೂತ ಸಮಸ್ಯೆಯಿಂದ ಬಳಲುತ್ತಿವೆ. ಅಭಿವೃದ್ಧಿಯ ಕಡೆಗೆ ಆಡಳಿತವು ಗಮನಹರಿಸಬೇಕಿರುವುದೂ ನಿಜವೇ. ಆದರೆ ವಾಸ್ತವ ಸಂಗತಿಯನ್ನು ಮರೆಮಾಚಿ ಈ ರೀತಿ ವಿಡಿಯೋ ಮಾಡಿ ವೈರಲ್ ಮಾಡುವುದರ ಬಗ್ಗೆ ಅನೇಕರು ಖೇದ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡುವುದರಿಂದ ವಾಸ್ತವ ಸಂಗತಿಗಳೂ ಆಡಳಿತ ಗಮನಕ್ಕೆ ಬಾರದೇ ಇರುತ್ತವೆ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕಾದ್ದು ನಿಜ, ಈ ರೀತಿಯ ಘಟನೆಗಳು ನಡೆಯಬಾರದು ಎಂದು “ರೂರಲ್ ಮಿರರ್” ಉದ್ದೇಶಿಸುತ್ತದೆ. ಹೀಗಾಗಿ ತಪ್ಪು ಮಾಹಿತಿಯಿಂದ ಈ ಹಿಂದೆ ಪ್ರಕಟ ಮಾಡಿರುವ ವರದಿಗೆ ವಿಷಾದಿಸುತ್ತೇವೆ.