ಭಾಷೆ ಇರುವುದು ವಿಷಯವನ್ನು ಹಂಚಿಕೊಳ್ಳಲು. ಭಾವನೆಗಳನ್ನು ಅಭಿವ್ಯಕ್ತಿಸುವ ಸಲುವಾಗಿ. ಕನಸುಗಳನ್ನು ಕಟ್ಟಲು, ಕಂಡ ಕನಸನ್ನು ಈಡೇರಿಸಿಕೊಳ್ಳಲು.
ಎಲ್ಲರಿಗೂ ಅವರವರ ಭಾಷೆಯ ಬಗ್ಗೆ ವಿಶೇಷ ಮಮತೆ ಇರುವುದು ಸಹಜವೇ. ಮಾತೃಭಾಷೆಯ ಬಗ್ಗೆ ಸ್ವಲ್ಪ ಜಾಸ್ತಿಯೇ ವ್ಯಾಮೋಹ. ಅವರವರ ಭಾಷೆ ಮಾತನಾಡುವುದು ಇಷ್ಟದ ವಿಷಯವೇ. ನಮ್ಮ ಕರ್ನಾಟಕದಲ್ಲಂತೂ ನವೆಂಬರ್ ಬಂದರೆ ಒಮ್ಮೆ ಮೈಕೊಡವಿ ನಿಂತಂತಾಗುತ್ತದೆ. ಪೇಪರ್ ನಲ್ಲೂ, ದೂರದರ್ಶನದಲ್ಲೂ, ಆಕಾಶವಾಣಿಯಲ್ಲೂ, ಕನ್ನಡವೇ ರಿಂಗಿಣಿಸುತ್ತದೆ. ನಮ್ಮ ಈ ನಡೆ ಮನಸಿಗೆ ಕಸಿವಿಸಿ ಉಂಟು ಮಾಡುತ್ತದೆ.
ಭಾಷೆಯಾಗಿ ಕನ್ನಡ ಶ್ರೀಮಂತವಾಗಿದೆ. ಅಭಿವ್ಯಕ್ತಿಸಲು ಪ್ರತಿಯೊಂದು ಭಾವನೆಗಳಿಗೂ, ಸಂಬಂದಗಳಿಗೂ ಅದರದ್ದೇ ಆದ ಶಬ್ಧಗಳಿವೆ. ಸಮೃದ್ಧವಾಗಿರುವ ಕನ್ನಡವನ್ನು ಉಳಿಸಿಕೊಳ್ಳುವುದು ಇಂದಿನ ಅನಿವಾರ್ಯತೆ. ಕನ್ನಡವನ್ನು ಶುದ್ಧವಾಗಿ ಮಾತನಾಡುವವರು ಸಿಕ್ಕಿದಾಗ ಮಾತುಗಳನ್ನು ಕೇಳಲು ಖುಷಿಯಾಗುತ್ತದೆ. ಇಂದು ನಮ್ಮ ಕನ್ನಡವೂ ಇತರ ಭಾಷೆಗಳ ಮಿಶ್ರಣದ ಕಿಚಡಿಯಾಗಿ ಬಿಟ್ಟಿದೆ. ನಾವು ಎಷ್ಟು ಅದಕ್ಕೆ ಹೊಂದಿಕೊಂಡಿದ್ದೇವೆಂದರೆ ಅದು ಕನ್ನಡವಲ್ಲವೆಂದು ಒಪ್ಪಿಕೊಳ್ಳಲೂ ಅಸಾಧ್ಯವೆಂಬಷ್ಟು. ಒಂದು ಹತ್ತು ವಾಕ್ಯ ಆಂಗ್ಲ ಶಬ್ದವನ್ನು ಬಳಸದೆ ಮಾತನಾಡುವುದು ಎಷ್ಟು ಕಷ್ಟವೆಂದು ಒಮ್ಮೆ ಪ್ರಯತ್ನಿಸಿದರೆ ಗೊತ್ತಾಗುತ್ತದೆ. ಸೋತು ಬಿಡುತ್ತೀರಿ! ಅಷ್ಟು ನಾವು ಹೊಂದಿಕೊಂಡಿದ್ದೇವೆ. ಬೇರೆ ಭಾಷೆಗಳನ್ನೂ ನಾವು ಕಲಿಯುವುದು ಒಳ್ಳೆಯದೇ. ಆದರೆ ಬಳಸುವಾಗ , ಮಾತನಾಡುವಾಗ ಆಯಾ ಭಾಷೆಯನ್ನೇ ಸರಿಯಾಗಿ, ಸ್ಷಷ್ಟವಾಗಿ ನುಡಿಯುವುದು ಚಂದವಲ್ಲವೇ.? ನುಡಿ ಕನ್ನಡ ನಡೆ ಕನ್ನಡ, ಬದುಕು ಕನ್ನಡ. ಜೈ ಕನ್ನಡಮ್ಮ, ಜೈ ಕರ್ನಾಟಕ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ