ಸೌಹಾರ್ದತೆ ಮತ್ತು ಮಾನವೀಯ ಮೌಲ್ಯದ ಬದುಕನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ ಆಯ್ಕೆಯಾಗಿದ್ದಾರೆ.
ಸುಧಾ ಪತ್ರಿಕೆಯಲ್ಲಿ 2021 ರ ಆಗಸ್ಟ್ 11ರಂದು ರಂದು ಪ್ರಕಟಗೊಂಡ ನಾ ಕಾರಂತರ “ಗಾಂಧಿ ಭಾರತ- ಗ್ರಾಮ ಭಾರತ” ಎಂಬ ವರದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯು ರೂ. 5001 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಚಯ: ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅವರು ನೆಲದ ನಾಡಿ, ತಳಿ ತಪಸ್ವಿ, ಕಾಡು ಮಾವು ಸಹಿತ 20 ಕೃಷಿ ಕೃತಿಗಳು, ಶೇಣಿ ಚಿಂತನ, ಅಮರಾವತಿ ಸಹಿತ 15 ಯಕ್ಷಗಾನದ ಕೃತಿಗಳು, 11 ಸಂಪಾದಿತ ಕೃತಿಗಳು, ಇತರ 3 ಕೃತಿಗಳನ್ನು ರಚಿಸಿದ್ದಾರೆ. ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪ್ರಶಸ್ತಿ, ಮುರಘಾಶ್ರೀ ಪ್ರಶಸ್ತಿ, ಪ ಗೋ ಪ್ರಶಸ್ತಿ ಸಹಿತ ಹತ್ತಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿದೆ. ಪದ್ಮಶ್ರೀ ಹರೇಕಳ ಹಾಜಬ್ಬರ ಬಗೆಗಿನ ‘ಅಕ್ಷರ ಯೋಗಿಯ ನೋಡಲ್ಲಿ’ ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಪಠ್ಯದಲ್ಲಿ ಸೇರಿತ್ತು. ಎರಡು ಕೃಷಿ ಸಂಬಂಧಿ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ-ಕಮಿಲ ಪ್ರದೇಶದಲ್ಲಿ ಗ್ರಾಮೀಣ ಜನರೆಲ್ಲಾ ಸೇರಿಕೊಂಡು ತಮ್ಮ ಊರಿನ ಅಭಿವೃದ್ಧಿಗೆ ಕೆಲಸ ಮಾಡಿದ್ದರು. ಗ್ರಾಮಭಾರತ ಎಂಬ ಹೆಸರಿನಲ್ಲಿ ಮೂಲಕ ತಂಡ ಕಟ್ಟಿ ಊರಿನ ಅನೇಕ ವರ್ಷಗಳ ಬೇಡಿಕೆ ಈಡೇರಿಕೆಗೆ ತಾತ್ಕಾಲಿಕ ಸೇತುವೆ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆಗಳಿಗೆ ಸ್ಪಂದನೆ ಇತ್ಯಾದಿಗಳು ಸೇರಿದಂತೆ ಗ್ರಾಮೀಣ ಭಾಗವನ್ನು ಜನರೆಲ್ಲಾ ಸೇರಿ ಅಭಿವೃದ್ಧಿ ಪಡಿಸಲು ಶ್ರಮಿಸಿದ್ದರು. ಇದೇ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಪಕ್ಷಾತೀತವಾಗಿ ಸ್ಫರ್ಧಿಸಿ ಕಮಿಲ-ಮೊಗ್ರ ವಾರ್ಡ್ ನ 4 ಸ್ಥಾನಗಳನ್ನು ಗೆದ್ದುಕೊಂಡು ಗ್ರಾಮಾಭಿವೃದ್ಧಿ ಮುಂದುವರಿಸಿದ್ದಾರೆ. ಈ ಬಗ್ಗೆ ಸಮಗ್ರ ಲೇಖನವನ್ನು ನಾ.ಕಾರಂತ ಪೆರಾಜೆ ಬರೆದಿದ್ದರು.