ಲಡಾಖ್‌ನ ದ್ರಾಸುದಲ್ಲಿಂದು 26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಬೃಹತ್ ಪಾದಯಾತ್ರೆ ಮೂಲಕ ಗೌರವ ಸಲ್ಲಿಸಲಾಯಿತು. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಒಂದೂವರೆ ಕಿಲೋಮೀಟರ್ ದೂರದ ಈ ಪಾದಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಯುವಕರು, ನಿವೃತ್ತ ಸೈನಿಕರು, ಸಶಸ್ತ್ರ ಪಡೆ ಸಿಬ್ಬಂದಿ, ಹುತಾತ್ಮ ಯೋಧರ ಕುಟುಂಬಸ್ಥರು ನಡಿಗೆಯಲ್ಲಿ ಭಾಗವಹಿಸಿದ್ದರು.
ಬಳಿಕ ದ್ರಾಸುದಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಸೂಚಿಸಲಾಯಿತು. ಸಚಿವ ಡಾ. ಮನ್ಸುಖ್ ಮಾಂಡವಿಯಾ, ದೇಶದ ಭವಿಷ್ಯಕ್ಕಾಗಿ ಯೋಧರು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಅವರ ನಿಷ್ಠೆ, ತ್ಯಾಗ, ದೇಶ ಪ್ರೇಮಕ್ಕೆ ನಾವು ಸದಾ ಋಣಿಯಾಗಿರುತ್ತೇವೆ. ಇಂದಿನ ಯುವ ಪೀಳಿಗೆಗೆ ನಮ್ಮ ಸೈನಿಕರ ದೇಶಪ್ರೇಮ ಪ್ರೇರಣೆಯಾಗಲಿದೆ ಎಂದರು.

