ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನದ ದಿನಾಂಕವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಟಿ ಮೂಲಕ ಮಾಹಿತಿ ನೀಡಿದರು. ಮೇ 10ರಂದು ಮತದಾನ ನಡೆಯಲಿದೆ. ಮೇ. 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಏ.13ಕ್ಕೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ಏ.20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏ.21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. 24ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಒಟ್ಟು 5 ಕೋಟಿ 21 ಲಕ್ಷ ಮತದಾರರು ಇದ್ದಾರೆ.12.15 ಲಕ್ಷ ಯುವ ಮತದಾರರು ಇದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಅಶಕ್ತರಿಗೆ ಈ ಬಾರಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಇದೆ. ರಾಜ್ಯದಲ್ಲಿ ಒಟ್ಟು 58282 ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣೆ ಆಯೋಗವು ಗಮನ ವಹಿಸಿದೆ. ಇದಕ್ಕಾಗಿ ಎಲ್ಲಾ ವಿಧದ ಪ್ರಯತ್ನ ಮಾಡುತ್ತಿದೆ.
ಕಳೆದ ಬಾರಿ ಚುನಾವಣೆ ಮೇ 12, 2018 ರಂದು ನಡೆದಿತ್ತು. ಪ್ರಸ್ತುತ ವಿಧಾನಸಭೆಯ ಅವಧಿಯು ಮೇ 24, 2023 ರಂದು ಮುಕ್ತಾಯಗೊಳ್ಳುತ್ತದೆ.