ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ಕಾಂಗ್ರೆಸ್ ನಾಯಕರಿಂದ ಅವಹೇಳನಕಾರಿ ವಾಗ್ದಾಳಿ ಮುಂದುವರಿದಿದೆ. ಪ್ರಧಾನಿಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆಗಳನ್ನು ನೋಡಿದಾಗ ಕಾಂಗ್ರೆಸ್ ಸೋಲಿನ ಹತಾಶೆಯಲ್ಲಿರುವುದು ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಹ ಸೋಲುವ ಭೀತಿಯಲ್ಲಿದ್ದಾರೆ. ಅಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇಂದು ಮತ್ತೆ ದಿಲೀಪ್ ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಂಧಿನಗರದಲ್ಲೂ ಕಾರ್ತಿಕ್, ಅರುಣ್ ಎಂಬುವರ ಮೇಲೆ ದಾಳಿ ನಡೆದಿದೆ. ಬಿಜೆಪಿಯ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಚೇಲಾಗಳು ಆಸ್ಪತ್ರೆಯಲ್ಲಿ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಬೆದರಿಕೆಗೆ ಜಗ್ಗಲ್ಲ, ನಾವು ಕಾರ್ಯಕರ್ತರ ಜೊತೆ ಇದ್ದೇವೆ. ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದು ಶೋಭಾ ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯಿಂದ ಸಂಸ್ಕಾರ ಪಡೆದಿದ್ದಾರೆ. ಅವರ ಇಂತಹ ಮಾತುಗಳಿಗೆ ನಾವೇನು ಮಾಡಲಾಗದು. ಅವಹೇಳನಾಕಾರಿಯಾಗಿ ಮಾತನಾಡುವುದು ಖರ್ಗೆ ಕುಟುಂಬದ ಸಂಸ್ಕೃತಿ. ಇಂತಹ ಹೇಳಿಕೆ ನಮ್ಮ ಸಂಸ್ಕಾರ ಅಲ್ಲವೆಂದು ವಿಜಯಪುರದಲ್ಲಿ ಅರುಣ್ ಸಿಂಗ್ ತಿರುಗೇಟು ನೀಡಿದ್ದಾರೆ.
ಕಲಬುರಗಿ ನಗರದಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಈ ಹಿಂದೆ ಪ್ರಧಾನಿ ಕಲಬುರಗಿಗೆ ಬಂದು ಲಂಬಾಣಿ ಜನರಿಗೆ ಹಕ್ಕು ಪತ್ರ ನೀಡಿದ್ದರು. ಆಗ ನಾನು ನಿಮ್ಮ ಮಗ ಅಂತ ಲಂಬಾಣಿ ಜನರಿಗೆ ಹೇಳಿದ್ದರು. ಆದ್ರೆ ನಂತರ ಆ ಸಮಾಜಕ್ಕೆ ಏನು ಮಾಡಿದ್ದರು? ಒಳ ಮೀಸಲಾತಿಗೆ ಆ ಸಮಾಜ ಹೋರಾಟ ಮಾಡಿತ್ತು. ಆಗ ಪ್ರಧಾನಿ ಮೋದಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದರು. ಜತೆಗೆ, ಮನೆ ನಡೆಸಲು ಆಗದವರು ಎಂದು ಹೇಳಿದ್ದರ ಜತೆಗೆ ಅವಹೇಳನಕಾರಿ ಪದ ಬಳಸಿದ್ದರು.