ಚುನಾವಣಾ ಪ್ರಚಾರ ಸಭೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸವನ ಪಾಟೀಲ್ ಯತ್ನಾಳ್ ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಇದೀಗ ಇಬ್ಬರೂ ನಾಯಕರು ಆಯೋಗಕ್ಕೆ ಕಾರಣ ನೀಡಬೇಕಿದೆ. ಯತ್ನಾಳ್ ಅವರು ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಸಿ ಟೀಕಿಸಿದ್ದರೆ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಟೀಕಿಸಿದ್ದರು.
ಮೇ 4ರ ಸಂಜೆ 5 ಗಂಟೆಯೊಳಗೆ ಉತ್ತರ ನೀಡುವಂತೆ ಇಬ್ಬರಿಗೂ ಆಯೋಗ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ನೀತಿ ಸಂಹಿತೆ ಪ್ರಕಾರ, ರಾಜಕೀಯ ವಿರೋಧಿಗಳ ವೈಯಕ್ತಿಕ ತೇಜೋವಧೆ ಮಾಡುವಂತಿಲ್ಲ. ಹೀಗಾಗಿ ನಿಮ್ಮ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಇಬ್ಬರೂ ನಾಯಕರನ್ನು ಆಯೋಗ ಪ್ರಶ್ನಿಸಿದೆ.
ಪ್ರಚಾರದ ವೇಳೆ ನಾಯಕರು ಭಾಷೆಯ ಘನತೆಯನ್ನು ಮರೆಯುತ್ತಿರುವುದು ಹಲವು ಬಾರಿ ಕಂಡು ಬಂದಿದೆ ಎಂದು ಮಂಗಳವಾರ ಹೇಳಿದ್ದ ಚುನಾವಣಾ ಆಯೋಗ, ನಾಯಕರ ಅವಹೇಳನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸ್ಟಾರ್ ಪ್ರಚಾರಕರು ಮತ್ತು ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.