ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಏಪ್ರಿಲ್ 8 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಅಭ್ಯರ್ಥಿಗಳ ಬದಲಾವಣೆಯ ಸೂಚನೆ ಇದೆ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಅಭ್ಯರ್ಥಿ ಬದಲಾವಣೆ ಬಹುತೇಕ ಖಚಿತವಾಗಿದೆ. ಹೊಸ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದು ಖಾಸಗಿ ಸಂಸ್ಥೆಯ ಉದ್ಯೋಗಿ ಯುವಕ ಹಾಗೂ ಮಹಿಳಾ ಅಭ್ಯರ್ಥಿಯೊಬ್ಬರ ಹೆಸರು ಮುನ್ನೆಲೆಗೆ ಬಂದಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕಡೆ ಮಾತ್ರಾ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದಿನಿಂದ ಎರಡು ದಿನ ನಡೆಯಲಿರುವ ರಾಜ್ಯ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತದೆ. ಅದಾದ ಬಳಿಕ ಮತ್ತೊಂದು ಸುತ್ತಿನಲ್ಲಿ ಹೈಕಮಾಂಡ್ ಅಂತಿಮಗೊಳಿಸುತ್ತದೆ. ಏಪ್ರಿಲ್ 8 ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಂದೇ ಫೈನಲ್ ಪಟ್ಟಿ ಅಂತಿಮಗೊಳ್ಳಲಿದೆ ಎನ್ನುವುದು ಸದ್ಯದ ಮಾಹಿತಿ.
ರಾಜ್ಯದ ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ವಿರುದ್ಧ ವಿರೋಧಿ ಅಲೆ ಕಂಡುಬಂದಿದೆ. ಈ ಎಲ್ಲಾ ಮಾಹಿತಿ ಸಂಗ್ರಹ ಮಾಡಿರುವ ಪ್ರಮುಖರು ವಿರೋಧಿ ಎಲೆ ಎದುರಿಸಲು ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಕರೆಯಿಸಿಕೊಂಡಿರುವ ದಕ್ಷಿಣಕನ್ನಡದಲ್ಲಿ ವಿರೋಧಿ ಅಲೆ ಕಂಡಿರುವುದು ತಲೆನೋವಾಗಿ ಪರಿಣಮಿಸಿದೆ. ಕಳೆದ ಎಲ್ಲಾ ಚುನಾವಣೆಯಲ್ಲೂ ಇಷ್ಟು ಪ್ರಮಾಣದ ವಿರೋಧಿ ಅಲೆ ಕಂಡಿರಲಿಲ್ಲ. ಚುನಾವಣೆಗೂ ಮೊದಲೇ ಪ್ರಮುಖರು ಈ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುತ್ತಿದ್ದರು. ಆದರೆ ಈ ಬಾರಿ ಇತರ ಪಕ್ಷಗಳಂತೆಯೇ ಬಿಜೆಪಿಗೂ ಈ ಬಾರಿ ಸಾಧ್ಯವಾಗಲಿಲ್ಲ.