ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಶಿವಮೊಗ್ಗದಲ್ಲಿ 103 ವರ್ಷದ ವೃದ್ಧರೊಬ್ಬರು ಮನೆಯಿಂದಲೇ ಮತದಾನ ಮಾಡಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ 103 ವರ್ಷದ ಮಹಾದೇವ ಮಹಾಲಿಂಗ ಮಲಿ ಎಂಬವರು ಮತ ಚಲಾವಣೆ ಮಾಡಿದ್ದರು. ಈ ವಿಚಾರವಾಗಿ ಮಹಾದೇವ ಅವರಿಗೆ ದೂರವಾಣಿ ಕರೆ ಮಾಡಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್, ಧನ್ಯವಾದಗಳನ್ನ ತಿಳಿಸಿದ್ದಾರೆ.
ಮಹಾಲಿಂಗ ಅವರು ಮತದಾನದ ಮೂಲಕ ಪ್ರಜಾಪ್ರಭುತ್ವದ ಸಮರ್ಪಣಾ ಮನೋಭಾವ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಒಳಗೊಳ್ಳುವಂಥ, ಪ್ರತಿಯೊಬ್ಬರಿಗೂ ಲಭ್ಯವಾಗುವಂಥ ಚುನಾವಣಾ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂಬುದನ್ನು ಈ ಮೂಲಕ ದೃಢಪಡಿಸುತ್ತೇವೆ ಎಂದು ಆಯುಕ್ತ ರಾಜೀವ್ ಕುಮಾರ್ ಹೇಳಿದರು.
ಚುನಾವಣಾ ಆಯೋಗದ ಆಯುಕ್ತರು ಕರೆ ಮಾಡಿ ಅಭಿನಂದಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಹಾಲಿಂಗ ಅವರು, ಈ ಹಿಂದಿನ ಚುನಾವಣೆಗಳಲ್ಲಿ ಮನೆ ಮತದಾನ ಪ್ರಕ್ರಿಯೆ ಇರಲಿಲ್ಲ. ಕಳೆದ ಚುನಾವಣೆಯಲ್ಲಿ ತಾನು ವೀಲ್ಚೇರ್ ಮೂಲಕ ಹೋಗಿ ಮತ ಚಲಾಯಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಮೇ 10ರಂದು ಪ್ರತಿಯೊಬ್ಬರು ತಮ್ಮ ಅಮೂಲ್ಯ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಏಪ್ರಿಲ್ 29 ರಿಂದ ಮೇ 6 ರವರೆಗೆ ಬ್ಯಾಲೇಟ್ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಲಾಗಿದ್ದು, 80 ವರ್ಷ ಮೇಲ್ಪಟ್ಟ ವೃದ್ಧರು ವಿಕಲಚೇತನರಿಗೆ ಹಾಗೂ ಚುನಾವಣೆಯ ಕರ್ತವ್ಯದಲ್ಲಿ ಭಾಗಿಯಾಗುವ ಪೊಲೀಸ್, ಚುನಾವಣೆ ಸಿಬ್ಬಂದಿ ಮಾತ್ರ ಮತದಾನ ಮಾಡಬಹುದಾಗಿದೆ. ಇನ್ನುಳಿದವರು ಮೇ 10ರಂದೇ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು.
80 ವರ್ಷ ಮೇಲ್ಪಟ್ಟ ವೃದ್ಧರಿಗೆ ಚುನಾವಣಾ ಅಯೋಗದ ಸಿಬ್ಬಂದಿ ಅವರ ಮನೆ ಬಾಗಿಲಿನಲ್ಲಿಯೇ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೌಪ್ಯ ಮತ ಚಾಲಯಿಸುವಾಗ ಸ್ಥಳದಲ್ಲಿ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಇರಲಿದ್ದಾರೆ. ಅಲ್ಲದೇ ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಇನ್ನು ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಈಗಾಗಲೇ ಮೀಸಲಿಟ್ಟಿರುವ ಸ್ಟ್ರಾಂಗ್ ರೂಮ್ ಗೆ ಶಿಪ್ಟ್ ಮಾಡಲಾಗುತ್ತದೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುತ್ತದೆ.