ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನ ಗಾತ್ರ 4 ಲಕ್ಷ ಕೋಟಿ ರೂಪಾಯಿಯಾಗಿದೆ. ಕಳೆದ ವರ್ಷ 3.71 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರವಿತ್ತು.19262 ಕೋಟಿ ರೂಪಾಯಿಗಳ ಕೊರತೆ ಬಜೆಟ್ ನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 1,16,000 ಕೋಟಿ ರೂಪಾಯಿ ಸಾಲ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.ಬಜೆಟ್ ನಲ್ಲಿ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನ ವಿಭಾಗದಿಂದ ದೊಡ್ಡ ಮಟ್ಟದ ಆದಾಯ ನಿರೀಕ್ಷಿಸಲಾಗಿದೆ.ಕೈಗಾರಿಕಾ ಅಭಿವೃದ್ಧಿ, ಕಲ್ಯಾಣ ಯೋಜನೆಗಳು, ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ನೀಡಲಾಗಿದೆ.………ಮುಂದೆ ಓದಿ……..
ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗೆ 26735 ಕೋಟಿ, ನೀರಾವರಿ ಇಲಾಖೆಗೆ 22181 ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7145 ಕೋಟಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 3977 ಕೋಟಿ ಅನುದಾನ ಘೋಷಣೆಯಾಗಿದೆ. ರಾಜ್ಯದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು, ಸರ್ಕಾರವು ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. 2025-26 ನೇ ಸಾಲಿನಲ್ಲಿ ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂಪಾಯಿ ಅನುದಾನ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಈಗಾಗಲೇ ಅನುಮೋದನೆ ನೀಡಿದ್ದು, ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ 200 ಹಾಸಿಗೆಗಳ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವುದಾಗಿ ತಿಳಿಸಿದ್ದಾರೆ.
‘ಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್’ ನೀತಿ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಇಂಗಾಲದ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾರುವ ಸಸ್ಯ ಪ್ರಭೇದ ಬೆಳೆಸಲು ನೀತಿ ರೂಪಿಸಲಾಗುವುದು. ಅರಣ್ಯ ಪ್ರದೇಶದಲ್ಲಿ 28,494 ಹೆಕ್ಟೇರ್‌ನಲ್ಲಿ 213 ಲಕ್ಷ ಸಸಿಗಳನ್ನು ನೆಡಲಾಗುವುದು. ಅರಣ್ಯೇತರ ಪ್ರದೇಶದಲ್ಲಿ 3.50 ಲಕ್ಷ ಸಸಿಗಳನ್ನು ಬೆಳೆಸಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಾಡಾನೆ ಹಾಗೂ ಚಿರತೆ ಹಾವಳಿ ನಿಯಂತ್ರಿಸಲು ಕಾರ್ಯಪಡೆ ರಚನೆ ಮಾಡಲಾಗುವುದು. ಕಾರ್ಯಪಡೆಗಳ ಕಾರ್ಯನಿರ್ವಹಣೆಗೆ 17 ಕೋಟಿ ರೂ. ಅನುದಾನ ನೀಡಲಾಗುವುದು. ವನ್ಯ ಪ್ರಾಣಿಗಳ ದಾಳಿಯಿಂದ ಪ್ರಾಣಹಾನಿಯಾದ್ರೆ 20 ಲಕ್ಷ ರೂ. ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತೋಟಗಾರಿಕಾ ಬೆಳೆಗಳ ಹನಿ ನೀರಾವರಿ ಯೋಜನೆಡಿಯಲ್ಲಿ 52,000 ರೈತರಿಗೆ ₹426 ಕೋಟಿ ಸಹಾಯಧನ ಒದಗಿಸಲಾಗುವುದಾಗಿ ಘೋಷಿಸಿದರು. ತೋಟಗಾರಿಕಾ ಬೆಳೆಗಳಿಗೆ ಸಂಶೋಧನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ತಂತ್ರಜ್ಞಾನ ಆಧುನೀಕರಣವನ್ನು ಬೆಳೆಗಾರರಿಗೆ ತಲುಪಿಸಲು “ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2” ಜಾರಿಗೆ ಬರಲಿದೆ. ಇದಕ್ಕೆ ₹95 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.
ರಾಜ್ಯದಲ್ಲಿ 20 GI ಟ್ಯಾಗ್ ಪಡೆದ ಬೆಳೆಗಳು ಮತ್ತು ಸ್ಥಳೀಯ ತಳಿಗಳನ್ನು ಉಳಿಸಲು ಬೀಜ ಬ್ಯಾಂಕ್ ಸ್ಥಾಪನೆಗೊಳ್ಳಲಿದೆ. ಇದರಲ್ಲಿ ಬ್ಯಾಡಗಿ ಮೆಣಸಿನಕಾಯಿ ಸೇರಿದಂತೆ ದೇಸಿ ತಳಿಗಳ ಸಂರಕ್ಷಣೆ ಮತ್ತು ರೋಗನಿರೋಧಕ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಗದಗ ಜಿಲ್ಲೆಯ ಡಂಬಳದಲ್ಲಿ ಹೊಸ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ಸಮೀಕ್ಷೆ ಕೈಗೊಳ್ಳಲಾಗುವುದು. ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆ ಬೆಳೆ ರಕ್ಷಣೆಗಾಗಿ ₹62 ಕೋಟಿ ಮೀಸಲಿಡಲಾಗಿದೆ. ತೆಂಗು ಬೆಳೆಗಳ ಕಪ್ಪು ತಲೆ ಹುಳು ನಿಯಂತ್ರಣಕ್ಕೆ ವೈಜ್ಞಾನಿಕ ಸಮೀಕ್ಷೆ ಮತ್ತು ಸೂಕ್ತ ತಂತ್ರಜ್ಞಾನ ಅಳವಡಿಸುವ ಯೋಜನೆಗಳು ಕೈಗೊಳ್ಳಲಾಗುತ್ತವೆ.
ರೇಷ್ಮೆ ಬೆಳೆಗಾರರಿಗಾಗಿ ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪಿಸಲು ನಬಾರ್ಡ್ ಸಹಾಯಧನ ನೀಡಲಿದೆ. ರಾಮನಗರ ಮತ್ತು ಶಿಡ್ಲಘಟ್ಟದಲ್ಲಿನ ಹೈಟೆಕ್ ರೇಷ್ಮೆ ಮಾರುಕಟ್ಟೆ ಯೋಜನೆಯ ಎರಡನೇ ಹಂತದ ಕಾಮಗಾರಿಗಳಿಗೆ ₹250 ಕೋಟಿ ಮೀಸಲಾಗುತ್ತಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ದ್ವಿತಳಿ ಕಚ್ಚಾ ರೇಷ್ಮೆ ಉತ್ಪಾದನೆಗೆ ಮಧ್ಯಮ ವರ್ಗದ ನೂಲು ಬಿಚ್ಚಾಣಿಕೆದಾರರಿಗೆ 120 ಸ್ವಯಂಚಾಲಿತ ರೀಲಿಂಗ್ ಘಟಕಗಳು ಸ್ಥಾಪನೆಗೊಳ್ಳಲಿವೆ. ಜೊತೆಗೆ, ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣವನ್ನು ಸುಧಾರಿಸಲು ಅಸೆಯರ್ಗಳನ್ನು ನೇಮಕ ಮಾಡಲಾಗುವುದು. ರೇಷ್ಮೆ ಬೆಳೆಯ ಪರಿವಾರ ಚಟುವಟಿಕೆಗಳ ಉತ್ತೇಜನಕ್ಕೆ ₹55 ಕೋಟಿ ಅನುದಾನ ಘೋಷಿಸಲಾಗಿದೆ.
ತೋಟಗಾರಿಕಾ ಹನಿ ನೀರಾವರಿ ₹426 ಕೋಟಿ , ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ₹95 ಕೋಟಿ, ಅಡಿಕೆ ಬೆಳೆ ರೋಗ ನಿಯಂತ್ರಣ ₹62 ಕೋಟಿ,
ರೇಷ್ಮೆ ಮಾರುಕಟ್ಟೆ 2ನೇ ಹಂತ ₹250 ಕೋಟಿ, ರೇಷ್ಮೆ ಅಭಿವೃದ್ಧಿ ಯೋಜನೆ ₹55 ಕೋಟಿ ನಿಗದಿ ಮಾಡಲಾಗಿದೆ.