ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಲಾ ₹2,500 ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಘೋಷಿಸಿದಂತೆ, ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರದ ಮೊತ್ತ ಜಮೆ ಮಾಡಲು ನಿರ್ಧರಿಸಲಾಗಿದೆ.
ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅನುದಾನ ಬಿಡುಗಡೆಯಾಗುವವರೆಗೆ ಕಾಯದೆ, ರಾಜ್ಯ ಸರ್ಕಾರ ತನ್ನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದಲೇ ರೈತರಿಗೆ ಪರಿಹಾರ ನೀಡಲು ಮುಂದಾಗಿದೆ.
ಅರ್ಜಿ ಸಲ್ಲಿಸುವ ಅಗತ್ಯವಿಲ್ಲ : ಈ ಪರಿಹಾರ ಪಡೆಯಲು ರೈತರು ಪ್ರತ್ಯೇಕವಾಗಿ ಯಾವುದೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇ-ಆಡಳಿತ ಇಲಾಖೆಯ ಫ್ರೂಟ್ಸ್ (FRUITS) ತಂತ್ರಾಂಶ ಹಾಗೂ ಮುಂಗಾರು ಬೆಳೆ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಆಯ್ಕೆಯಾದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ.
ಗರಿಷ್ಠ 2 ಹೆಕ್ಟೇರ್ಗೆ ಮಾತ್ರ ಪರಿಹಾರ : ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್ ಕೃಷಿ ಭೂಮಿಗೆ ಮಾತ್ರ ಈ ಪರಿಹಾರ ಸೀಮಿತವಾಗಿರುತ್ತದೆ. ಕೃಷಿಯೇತರ ಉದ್ದೇಶಗಳಿಗೆ ಭೂಪರಿವರ್ತನೆಗೊಂಡ ಜಮೀನುಗಳು, ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನವಾಗಿರುವ ಪ್ರದೇಶಗಳು ಹಾಗೂ ಸರ್ಕಾರಿ ಜಮೀನುಗಳಿಗೆ ಈ ಪರಿಹಾರ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರದ ಅನುದಾನಕ್ಕಾಗಿ ಕಾಯದೆ ರಾಜ್ಯ ಸರ್ಕಾರವೇ ಪರಿಹಾರ ಬಿಡುಗಡೆಗೆ ಮುಂದಾಗಿರುವುದು ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ಒದಗಿಸುವ ಕ್ರಮವಾಗಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
The Karnataka government has ordered the release of ₹2,500 as drought relief directly into the bank accounts of eligible farmers. The assistance will be provided from the State Disaster Response Fund without waiting for the Centre’s NDRF allocation. Farmers need not submit separate applications, as beneficiaries will be identified using FRUITS database and Kharif crop survey records. The relief is limited to a maximum of two hectares per farmer, excluding converted non-agricultural land, land acquired for irrigation projects and government land.


