ಬಜರಂಗದಳದವರು ನಮ್ಮ ಹನುಮನ ಭಕ್ತರು. ಒಬ್ಬೊಬ್ಬರು ಸಿಡಿದು ನಿಂತರೆ ಬೇರು ಸಮೇತ ಕಿತ್ತು ಹೋಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪರ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ನವಲಗುಂದಕ್ಕೆ ಇದು ಬಂಡಾಯ ನಾಡು ಎಂದು ಕರೆದರು. ಈ ಭಾಗದಲ್ಲಿ ಮಹದಾಯಿ ನೀರು ಬಂದಿರಲಿಲ್ಲ, ರೈತರ ಮೇಲೆ ಗುಂಡು ಹಾಕಿದ ಸರ್ಕಾರ ಕಾಂಗ್ರೆಸ್ ಎಂದು ಟೀಕಿಸಿದ ಅವರು, ಮಹದಾಯಿ ನೀರನ್ನು ಮಲಪ್ರಭೆಗೆ ತಂದು ನೀರು ಕೊಡಲು ಅಡ್ಡ ಹಾಕಿದ್ದ ಕಾಂಗ್ರೆಸ್, ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಹೋಗಿ ಹನಿ ನೀರು ಕೊಡಲ್ಲ ಎಂದಿದ್ರು ಎಂದರು.
ಮನಮೋಹನ್ ಸಿಂಗ್ ಅವರು ನಮಗೆ ನೀರು ಕೊಡಲು ಟ್ರಿಬುನಲ್ ಮಾಡಿದ್ರು, ಸಿದ್ದರಾಮಯ್ಯ ಸರ್ಕಾರ ಗೋಡೆ ಕಟ್ಟಿದ್ರು, ಒಂದು ಕೋಟಿ ಖರ್ಚು ಮಾಡಿ ನಾವು ಕೆನಲ್ ಕಟ್ಟಿದೆವು, ಗೋಡೆ ಕಟ್ಟಿದೆವು ಎಂದ ಸಿಎಂ, ಇದೇ ನವಲಗುಂದ ತಾಲೂಕಿನಲ್ಲಿ ಹೆಣ್ಣು ಮಕ್ಕಳ ಮೇಲೆ ಲಾಠಿ ಹೊಡೆದವರಿಗೆ ಮತ ಹಾಕ್ತಿರಾ ಎಂದು ಪ್ರಶ್ನೆ ಮಾಡಿದರು. ಮೋದಿ ಅವರು ನಮಗೆ ಮಹದಾಯಿಗಾಗಿ ಅನುಮತಿ ಕೊಟ್ಡಿದ್ದಾರೆ. ನಾವು ಟೆಂಡರ್ ಮಾಡಿದ್ದೇವೆ, ಕೆಲಸ ಆರಂಭ ಆಗಲಿದೆ ಎಂದ ಬೊಮ್ಮಾಯಿ, ಈಗಾಗಲೇ ನಾನು ಒಂದು ಸಾವಿರ ಕೋಟಿ ಕೊಟ್ಟಿದ್ದೇನೆ. ಎರಡು ವರ್ಷದಲ್ಲಿ ಕಾಮಗಾರಿ ಮಾಡ್ತೇವೆ ಎಂದರು.
ಗ್ಯಾರಂಟಿ ಕೊಡುತ್ತಾರೆ ಕಾಂಗ್ರೆಸ್ ನವರು, ಮೋದಿ ಅವರ ಅಕ್ಕಿ ಅದು, ಎಲ್ಲ ಗ್ಯಾರಂಟಿ ಮೇ 10ವರೆಗೆ, ಅದರ ನಂತರ ಗಳಗಂಟಿ ಎಂದ ಸಿಎಂ, ಮೀಸಲಾತಿ ಹೆಚ್ಚಳ ಮಾಡಿದೆ. ನಮ್ಮ ದುಡಿಯುವ ಜನರಿಗೆ ಮೀಸಲಾತಿ ಕೊಟ್ಟಿದ್ದೇವೆ, ನಮ್ಮ ಎದುರಿಗೆ ಅವರು ವಿರೋಧ ಮಾಡಿ ಕೋರ್ಟ್‍ಗೆ ಹೋಗಿದ್ದಾರೆ ಎಂದರು.
ನಾವು ಬಜರಂಗದಳ ಬ್ಯಾನ್ ಮಾಡುತ್ತೇವೆ ಅಂತಾರೆ, ಭಯೋತ್ಪಾದನೆ ಮಾಡಿದ ಪಿಎಫ್‍ಐಗೆ ಅವರು ಕೇಸ್ ವಾಪಸ್ ಪಡೆದರು, ಬಜರಂಗದಳದವರು ನಮ್ಮ ಹನುಮನ ಭಕ್ತರು, ಒಬ್ಬೊಬ್ಬರು ಸಿಡಿದು ನಿಂತರೆ ಬೇರು ಸಮೇತ ಕಿತ್ತು ಹೋಗ್ತೀರಿ ಎಂದ ಸಿಎಂ, ರಾಮನ ದೇವಸ್ಥಾನ ಆಗುತ್ತಿದೆ. ಸಬ್ ಕಾ ವಿಕಾಸ ನಾವು ಮಾಡುತ್ತೇವೆ. ಮನೆ ಮನೆಗೆ ಹೋಗಿ ಮೇ 10 ಕ್ಕೆ ಮುನೇನಕೊಪ್ಪ ಅವರಿಗೆ ಮತ ಹಾಕುವಂತೆ ಹೇಳಿ, ಬಹಳ ಜನ ಮಾತನಾಡುತ್ತಾರೆ. ಆದರೆ ಜಗದೇಕ ಮಲ್ಲ ಮುನೇನಕೊಪ್ಪ, 25 ಸಾವಿತ ಮತದಿಂದ ಗೆಲ್ಲಿಸಿ ಎಂದು ಕೇಸರಿ ಶಾಲು ತಿರುವಿಸಿ ಬಜರಂಗಿ ಎಂದು ಘೋಷಣೆ ಹಾಕಿದರು. ಇದೇ ವೇಳೆ ಕುರುಬ ಸಮುದಾಯದಿಂದ ಸಿಎಂಗೆ ಕಂಬಳಿ ಹೊದಿಸಿ ಸನ್ಮಾನ ಮಾಡಿದರು. ಸಿಎಂಗೆ ಟಗರು ಮರಿ ಕೊಟ್ಟ ನಂತರ ಅದಕ್ಕೆ ಕೈಯಲ್ಲಿ ಹಿಡಿದು ಸಿಎಂ ಮುತ್ತಿಟ್ಟರು ಎಂದರು.