ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಅವರು ತಮ್ಮ ಹಾಗೂ ಕುಟುಂಬದ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ. ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಹೌದು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಕುಟುಂಬಸ್ಥರ ಹೆಸರಿನಲ್ಲಿ 5.98 ಕೋಟಿ ರೂ. ಚರಾಸ್ತಿ ಸೇರಿದಂತೆ ಒಟ್ಟು 22.95 ಕೋಟಿ ರೂ. ಸ್ಥಿರಾಸ್ತಿ ಇದೆ. ಇದೇ ವೇಳೆ ಸಿಎಂ ತಮ್ಮ ಬಳಿ ಸ್ವಂತ ವಾಹನವಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಒಟ್ಟು 5.79 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ. ತಮ್ಮ ಹಿಂದೂ ಅವಿಭಜಿತ ಕುಟುಂಬದಲ್ಲಿ 1.57 ಕೋಟಿ ರೂಪಾಯಿ ಚರಾಸ್ತಿ,19.20 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ. ಪುತ್ರಿ ಹೆಸರಲ್ಲಿ 1.28 ಕೋಟಿ ರೂಪಾಯಿ ಚರಾಸ್ತಿ, ಸಿಎಂ ಅವರ ಕೈಯಲ್ಲಿ 3 ಲಕ್ಷ ರೂಪಾಯಿ ನಗದು, ಪತ್ನಿ ಕೈಯಲ್ಲಿ 50,000 ರೂಪಾಯಿ ನಗದು, ಪುತ್ರಿ ಅದಿತಿ ಬೊಮ್ಮಾಯಿ ಕೈಯಲ್ಲಿ 25,000 ರೂ ನಗದು ಇರುವುದಾಗಿ ಮಾಹಿತಿ ನೀಡಿದ್ದಾರೆ.
ಬೊಮ್ಮಾಯಿ ಅವರ ಬಳಿ ವಿವಿಧ ಬ್ಯಾಂಕ್‌ಗಳಲ್ಲಿ 40 ಲಕ್ಷ ರೂ.ಗೂ ಹೆಚ್ಚು ಠೇವಣಿ ಇದೆ. ಪತ್ನಿ ಬಳಿ 27.6 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ವಿವಿಧ ಕಂಪನಿಗಳಲ್ಲಿ ಅವರು 3.23 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಪತ್ನಿ ಚನ್ನಮ್ಮಾ ಅವರು ಸುಮಾರು 7 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಪುತ್ರಿ ಹೆಸರಲ್ಲೂ 23 ಲಕ್ಷ ರೂಪಾಯಿ ಹೂಡಿಕೆ ಮಾಡಲಾಗಿದೆ. ಅವಿಭಕ್ತ ಕುಟುಂಬದಿಂದ ಬಸವರಾಜ ಬೊಮ್ಮಾಯಿ 1.42 ಕೋಟಿ ರೂಪಾಯಿ ಸಾಲವಿದೆ.
ಇನ್ನು, ಚಿನ್ನಾಭರಣ ವಿವರ ನೋಡುವುದಾದರೆ ಸಿಎಂ ಬೊಮ್ಮಾಯಿ ಬಳಿ 1.50 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಪತ್ನಿ ಬಳಿ 78.83 ಲಕ್ಷ ರೂಪಾಯಿ ಚಿನ್ನಾಭರಣ, ಪುತ್ರಿ ಬಳಿ 53.84 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಕುಟುಂಬದ ಬಳಿ 13.78 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿವೆ.
ಸ್ಥಿರಾಸ್ತಿ ವಿವರಗಳನ್ನು ನೋಡುವುದಾದರೆ, ಬಸವರಾಜ ಬೊಮ್ಮಾಯಿ ಬಳಿ 1 ಕೃಷಿ ಜಮೀನಿದ್ದು, ಕುಟುಂಬದ ಬಳಿ ಒಂದು ಜಮೀನು ಇದೆ. ಬೆಂಗಳೂರಿನ ಯಲಹಂಕ ಹಾಗೂ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಅವರು ತಲಾ ಒಂದು ಎಕರೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿಯ ನಾಲ್ಕು ಎಕರೆ ಕೃಷಿಯೇತರ ಭೂಮಿ ಇದೆ.
ಧಾರವಡದ ಇಂಡಸ್ಟ್ರಿಯಲ್ ಏರಿಯಾದಲ್ಲಿ, ದೊಡ್ಡಬಳ್ಳಾಪುರದಲ್ಲಿ ಹಾಗೂ ಕಾರಾವರದಲ್ಲಿ ಬೊಮ್ಮಾಯಿ ಹೆಸರಿನಲ್ಲಿ ವಾಣಿಜ್ಯ ಕಟ್ಟಡಗಳು. ಶಿಗ್ಗಾಂವಿಯಲ್ಲಿ ಅವರಿಗೆ ಮನೆಯಿದ್ದರೆ, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್, ಕುಟುಂಬದ ಹೆಸರಲ್ಲಿ ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರಿನ ಆರ್‌ಟಿ ನಗರದಲ್ಲಿ ಮನೆ ಇದೆ. ಒಟ್ಟು ಬೊಮ್ಮಾಯಿ ಬಳಿ 22.95 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ ಕುಟುಂಬದ ಬಳಿ 19.20 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.
ಅತಿ ಹೆಚ್ಚು ಸಾಲ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿಗೆ 2ನೇ ಸ್ಥಾನ ಪಡೆದುಕೊಂಡಿದ್ದು, ಐಸಿಐಸಿಐ ಬ್ಯಾಂಕ್‌ನಲ್ಲಿ 47.35 ಲಕ್ಷ ರೂಪಾಯಿ ಸಾಲ, ಎಸ್‌ಬಿಐನಲ್ಲಿ 37.47 ಲಕ್ಷ ರೂಪಾಯಿ ಗೃಹ ಸಾಲವಿದೆ. 79 ಸಾವಿರದ ಇನ್ನೊಂದು ಗೃಹ ಸಾಲವೂ ಎಸ್‌ಬಿಐನಲ್ಲಿದೆ. ಕುಟುಂಬದಿಂದ 1.42 ಕೋಟಿ ರೂಪಾಯಿ ಸಾಲವನ್ನು ಬೊಮ್ಮಾಯಿ ಪಡೆದುಕೊಂಡಿದ್ದಾರೆ. 9 ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದಲೂ ಅಪಾರ ಪ್ರಮಾಣದ ಸಾಲ ಪಡೆದುಕೊಂಡಿದ್ದು, ಒಟ್ಟು 5.79 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ.
ಇನ್ನು 2021-22ರಲ್ಲಿ 41.09 ಲಕ್ಷ ರೂಪಾಯಿ ಆದಾಯ ಗಳಿಸಿರುವುದಾಗಿ ಬೊಮ್ಮಾಯಿ ಹೇಳಿದ್ದು, ಪತ್ನಿ ಆದಾಯ 2.69 ಲಕ್ಷ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ತಾವಾಗಲಿ, ತಮ್ಮ ಕುಟುಂಬದವರ ಬಳಿಯಾಗಲಿ ಯಾವುದೇ ವಾಹನಗಳಿಲ್ಲ ಎಂದು ಬೊಮ್ಮಾಯಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.