ಭಾರತದ ಕೃಷಿ ರಫ್ತುಗಳನ್ನು ಬಲಪಡಿಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಕರ್ನಾಟಕದ ಮೂರು ಜಿಐ (Geographical Indication) ಟ್ಯಾಗ್ ಹೊಂದಿದ ಕೃಷಿ ಉತ್ಪನ್ನಗಳು ಮೊದಲ ಬಾರಿಗೆ ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದೆ.
ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು, “APEDA ಭಾರತದ ಕೃಷಿ ರಫ್ತುಗಳನ್ನು ನಿರಂತರವಾಗಿ ಬಲಪಡಿಸುತ್ತಿದೆ. ಈ ನಿಟ್ಟಿನಲ್ಲಿ, ಕರ್ನಾಟಕದ ಮೂರು ಜಿಐ-ಟ್ಯಾಗ್ ಉತ್ಪನ್ನಗಳು — ನಂಜನಗೂಡು ರಸಬಾಳೆ ಬಾಳೆಹಣ್ಣು, ಮೈಸೂರು ವೀಳ್ಯದ ಎಲೆಗಳು ಮತ್ತು ಇಂಡಿ ನಿಂಬೆ — ಮಾಲ್ಡೀವ್ಸ್‌ಗೆ ವಿಮಾನದ ಮೂಲಕ ರಫ್ತು ಮಾಡಲಾಗಿದೆ” ಎಂದು ಬರೆದುಕೊಂಡಿದ್ದಾರೆ.
ಸಚಿವರು ತಮ್ಮ ಪೋಸ್ಟ್‌ನಲ್ಲಿ ಮುಂದುವರಿಸಿ, “ಈ ಉಪಕ್ರಮವು ಭಾರತದ ಕೃಷಿ ರಫ್ತುಗಳನ್ನು ಹೆಚ್ಚಿಸುವುದು, ರೈತರಿಗೆ ಬೆಂಬಲ ಒದಗಿಸುವುದು, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ವಿಸ್ತರಿಸುವುದು ಮತ್ತು ಭಾರತದ ಶ್ರೀಮಂತ ಜಿಐ ಪರಂಪರೆಯನ್ನು ಜಾಗತಿಕವಾಗಿ ಉತ್ತೇಜಿಸುವ APEDAಯ ನಿರಂತರ ಪ್ರಯತ್ನಗಳ ಪ್ರತಿಬಿಂಬವಾಗಿದೆ” ಎಂದು ಹೇಳಿದ್ದಾರೆ.
ಈ ರಫ್ತು ಪ್ರಕ್ರಿಯೆ ಕರ್ನಾಟಕದ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿದ್ದು, ಜಿಐ ಟ್ಯಾಗ್ ಪಡೆದ ಬೆಳೆಗಳಿಗೆ ಹೆಚ್ಚುವರಿ ಮೌಲ್ಯ ಸಿಗುವ ನಿರೀಕ್ಷೆ ಮೂಡಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಫೋಟೋ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್
ಮೂಲ: ಎಕ್ಸ್ (X)


