2025ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ ₹10.27 ಲಕ್ಷ ಕೋಟಿ ಮೌಲ್ಯದ ಬಂಡವಾಳ ಹೂಡಿಕೆ ಖಾತರಿ ದೊರಕಿದ್ದು, ಇದರ ಪೈಕಿ ಕಳೆದ ಡಿಸೆಂಬರ್ ವೇಳೆಗೆ ₹4.71 ಲಕ್ಷ ಕೋಟಿ ನೈಜ ಹೂಡಿಕೆ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಜನವರಿ 19ರಿಂದ 23ರವರೆಗೆ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಮಟ್ಟದ ಆರ್ಥಿಕ ಶೃಂಗಸಭೆಗೆ ಪೂರ್ವಭಾವಿಯಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಹೂಡಿಕೆ ಒಡಂಬಡಿಕೆಗಳ ಪೈಕಿ ಶೇಕಡಾ 46ರಷ್ಟು ನೈಜ ಹೂಡಿಕೆಯಾಗಿ ಸಾಕಾರಗೊಂಡಿದೆ ಎಂದು ಹೇಳಿದರು.
ತಯಾರಿಕಾ ಮತ್ತು ಇಂಧನ ವಲಯದಲ್ಲಿ ಮಹತ್ವದ ಪ್ರಗತಿ : ಸಚಿವರ ಮಾಹಿತಿ ಪ್ರಕಾರ,
-
ತಯಾರಿಕಾ ವಲಯದಲ್ಲಿ ₹5.66 ಲಕ್ಷ ಕೋಟಿ ಹೂಡಿಕೆ ಖಾತರಿಗಳ ಪೈಕಿ ₹3.22 ಲಕ್ಷ ಕೋಟಿ ಈಗಾಗಲೇ ನೈಜ ಬಂಡವಾಳವಾಗಿ ಹರಿದು ಬಂದಿದೆ.
-
ಮರುಬಳಕೆ ಇಂಧನ (Renewable Energy) ವಲಯದಲ್ಲಿ ₹4.25 ಲಕ್ಷ ಕೋಟಿ ಖಾತರಿಗಳ ಪೈಕಿ ₹1.41 ಲಕ್ಷ ಕೋಟಿ ಹೂಡಿಕೆಯಾಗಿ ಸಾಕಾರಗೊಂಡಿದೆ.
ಪ್ರಮುಖ ಹೂಡಿಕೆ ಪ್ರಸ್ತಾವನೆಗಳು : ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿರುವ ಕೆಲವು ಪ್ರಮುಖ ಕೈಗಾರಿಕಾ ಹೂಡಿಕೆಗಳ ಕುರಿತು ಸಚಿವರು ಮಾಹಿತಿ ನೀಡಿದ್ದು,
-
ಸಿಲಿಕಾನ್ ಬಿಡಿಭಾಗಗಳ ತಯಾರಿಕಾ ಸ್ಥಾವರ ಸ್ಥಾಪನೆಗೆ ₹9,300 ಕೋಟಿ
-
ಎಂವಿ ಎನರ್ಜಿ ಕಂಪನಿಯಿಂದ ಬೆಂಗಳೂರಿನ ಐಟಿಐಆರ್ ಪ್ರದೇಶದಲ್ಲಿ ಸೌರಕೋಶ ಹಾಗೂ ಮಾಡ್ಯೂಲ್ ತಯಾರಿಕೆ ವಿಸ್ತರಣೆಗೆ ₹5,495 ಕೋಟಿ
-
ಜಿಂದಾಲ್ ಸ್ಟೀಲ್ಸ್ ಸಂಸ್ಥೆಯಿಂದ ವಿಜಯನಗರದಲ್ಲಿ ಎಲೆಕ್ಟ್ರಿಕಲ್ ಸ್ಟೀಲ್ ಘಟಕ ಸ್ಥಾಪನೆಗೆ ₹7,000 ಕೋಟಿ
ಹೂಡಿಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಹೂಡಿಕೆಗಳು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ವೇಗ ನೀಡುವ ಜೊತೆಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


