ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ನವೆಂಬರ್ 19 ರಂದು ಅಲ್ಲಲ್ಲಿ ಹಗುರ ಮೋಡದ ವಾತಾವರಣದೊಂದಿಗೆ ಚಳಿ ಸಹಿತ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಸದ್ಯ ರಾಜ್ಯದಲ್ಲಿ ವ್ಯಾಪಕ ಮಳೆಯ ಲಕ್ಷಣಗಳಿಲ್ಲ. ಆದರೆ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಕ್ವಾನ್ ಚಂಡಮಾರುತದ ಪರಿಣಾಮದಿಂದ ಮುಂದಿನ ದಿನಗಳಲ್ಲಿ ಹವಾಮಾನದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಒಡಿಸ್ಸಾ ಕರಾವಳಿಯಲ್ಲಿ ದುರ್ಬಲವಾಗಿ ಭೂ ಪ್ರವೇಶ : ಅಕ್ವಾನ್ ಚಂಡಮಾರುತವು ಒಡಿಸ್ಸಾ ಕರಾವಳಿಯನ್ನು ತಲುಪುವ ಮೊದಲೇ ಅತ್ಯಂತ ದುರ್ಬಲಗೊಳ್ಳುವ ಸಾಧ್ಯತೆಯಿದೆ. ನವೆಂಬರ್ 20ರಂದು ಒಡಿಸ್ಸಾದ ಬ್ರಹ್ಮಪುರ ಮತ್ತು ಪುರಿ ನಡುವಿನ ಕರಾವಳಿ ಭಾಗದಲ್ಲಿ ಭೂ ಪ್ರವೇಶಿಸುವ ಮುನ್ಸೂಚನೆ ಇದೆ. ಅಲ್ಲಿಂದ ಒಡಿಸ್ಸಾ ಹಾಗೂ ಛತ್ತೀಸಗಡದ ಮೂಲಕ ಮುಂದೆ ಸಾಗುವ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿ ಪ್ರದೇಶದಲ್ಲಿಯೇ ಶಿಥಿಲಗೊಳ್ಳುವ ಲಕ್ಷಣಗಳಿವೆ.
ಹಿಮಾಲಯ ಪರ್ವತ ಪ್ರದೇಶಗಳಿಂದ ಬಲವಾದ ಶೀತ ಮಾರುತಗಳು ಭಾರತದ ದಕ್ಷಿಣ ಭಾಗದತ್ತ ಬೀಸುತ್ತಿರುವುದರಿಂದ ಅಕ್ವಾನ್ ಚಂಡಮಾರುತದ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಚಳಿ ಕಡಿಮೆಯಾಗುವ ಸಾಧ್ಯತೆ : ನವೆಂಬರ್ 20 ರ ನಂತರ ಅಕ್ವಾನ್ ಚಂಡಮಾರುತದ ಪ್ರಭಾವದಿಂದ ಉತ್ತರ ಭಾರತ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು.
ಬಂಗಾಳಕೊಲ್ಲಿಯ ಕಡೆಯಿಂದ ತೇವಾಂಶಭರಿತ ಗಾಳಿಯ ಪ್ರವೇಶಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದ್ದು, ನವೆಂಬರ್ 23ರಿಂದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸೂಚನೆಗಳಿವೆ.
ನವೆಂಬರ್ 26–27ರವರೆಗೆ ಮಳೆಯ ಸಾಧ್ಯತೆ : ಸದ್ಯದ ಮುನ್ಸೂಚನೆಯ ಪ್ರಕಾರ, ನವೆಂಬರ್ 23ರಿಂದ ಆರಂಭವಾಗುವ ಮಳೆಯ ವಾತಾವರಣವು ನವೆಂಬರ್ 26 ಅಥವಾ 27ರವರೆಗೆ ಮುಂದುವರಿಯುವ ಲಕ್ಷಣಗಳಿವೆ. ಮಳೆಯ ಪ್ರಮಾಣ ಮತ್ತು ವ್ಯಾಪ್ತಿ ಜಿಲ್ಲಾವಾರು ಬದಲಾಗಬಹುದು.
ಒಮ್ಮೆ ವಾತಾವರಣದಲ್ಲಿ ಮಳೆಯ ಸಂಬಂಧ ತೇವಾಂಶ ಹೆಚ್ಚಾದರೆ, ರಾತ್ರಿ ಮತ್ತು ಬೆಳಗಿನ ಚಳಿ ಮತ್ತೆ ಆರಂಭವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದ ಹವಾಮಾನದಲ್ಲಿ ಚಳಿ ಕಡಿಮೆಯಾಗುವುದರ ಜೊತೆಗೆ ಮಳೆಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ.
ರೈತರು ಗಮನಿಸಬೇಕಾದ ಅಂಶ : ನವೆಂಬರ್ 23ರಿಂದ ಮಳೆಯ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗಳನ್ನು ಯೋಜಿಸುವ ರೈತರು ಮುಂದಿನ ದಿನಗಳ ಮುನ್ಸೂಚನೆಯನ್ನು ಗಮನಿಸಬೇಕು. ಮಳೆಯ ಪ್ರಮಾಣ ಮತ್ತು ಸ್ಥಳೀಯ ಮುನ್ಸೂಚನೆ ಆಧರಿಸಿ ಕೃಷಿ ಕಾರ್ಯಗಳನ್ನು ನಿರ್ಧರಿಸಬೇಕು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ


